Emerging Asia Cup 2023: ಎಮರ್ಜಿಂಗ್ ಏಷ್ಯಾಕಪ್ನ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಕೊಲಂಬೊದ ಆರ್ ಪ್ರೇಮದಾಸ ಮೈದಾನದಲ್ಲಿ ಬುಧವಾರ ನಡೆಯಲಿರುವ ಈ ಪಂದ್ಯವನ್ನು ಇದೀಗ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.
ಈಗಾಗಲೇ 2 ಪಂದ್ಯಗಳನ್ನಾಡಿರುವ ಭಾರತ ಕಿರಿಯರ ತಂಡ ಯಶಸ್ವಿ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡದ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು 2ನೇ ಪಂದ್ಯದಲ್ಲಿ 9 ವಿಕೆಟ್ಗಳಿಂದ ನೇಪಾಳ ಎ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ ಒಟ್ಟು 4 ಅಂಕಗಳನ್ನು ಕಲೆಹಾಕಿ ಗ್ರೂಪ್-ಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಮತ್ತೊಂದೆಡೆ ಪಾಕಿಸ್ತಾನ್ ಕಿರಿಯರ ತಂಡವು ನೇಪಾಳ ವಿರುದ್ಧ 4 ವಿಕೆಟ್ಗಳಿಂದ ಜಯ ಸಾಧಿಸಿದರೆ, ಯುಎಇ ವಿರುದ್ಧ 184 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ 4 ಅಂಕಗಳೊಂದಿಗೆ ಗ್ರೂಪ್-ಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಇದೀಗ ಕೊನೆಯ ಲೀಗ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಗೆದ್ದರೂ ಸೋತರೂ ಎರಡು ತಂಡಗಳು ಸೆಮಿಫೈನಲ್ ಆಡುವುದು ಖಚಿತ.
ಏಕೆಂದರೆ ಗ್ರೂಪ್-ಬಿನಲ್ಲಿನ ಆಡಿದ 2 ಪಂದ್ಯಗಳಲ್ಲೂ ನೇಪಾಳ ಹಾಗೂ ಯುಎಇ ಸೋಲನುಭವಿಸಿದೆ. ಹೀಗಾಗಿ ಗ್ರೂಪ್-ಬಿ ಯಿಂದ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದೆ.
ಈ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಭಾರತ-ಪಾಕಿಸ್ತಾನ್ ಕಿರಿಯರ ಕದನವು ಮಧ್ಯಾಹ್ನ 2 ಗಂಟೆಯಿಂದ ಶುರುವಾಗಲಿದೆ. ಈ ಪಂದ್ಯದ ನೇರ ಪ್ರಸಾರವನ್ನು ಫ್ಯಾನ್ಕೋಡ್ ಆ್ಯಪ್ನಲ್ಲಿ ಮತ್ತು ವೆಬ್ಸೈಟ್ನಲ್ಲಿ ವೀಕ್ಷಿಸಬಹುದು.
ಭಾರತ ಎ ತಂಡ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಯುವರಾಜ್‌ಸಿನ್ಹ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.
ಇದನ್ನೂ ಓದಿ: Asia Cup 2023: ಏಷ್ಯಾಕಪ್ಗೆ 6 ತಂಡಗಳು ಫೈನಲ್
ಪಾಕಿಸ್ತಾನ್ ಎ ತಂಡ: ಮೊಹಮ್ಮದ್ ಹ್ಯಾರಿಸ್ (ನಾಯಕ), ಒಮೈರ್ ಬಿನ್ ಯೂಸುಫ್, ಅಮದ್ ಬಟ್, ಅರ್ಷದ್ ಇಕ್ಬಾಲ್, ಹಸೀಬುಲ್ಲಾ, ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮುಬಾಸಿರ್ ಖಾನ್, ಮೊಹಮ್ಮದ್ ವಾಸಿಂ ಜೂನಿಯರ್, ಖಾಸಿಮ್ ಅಕ್ರಮ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್ , ಸುಫಿಯಾನ್ ಮುಖೀಮ್ ಮತ್ತು ತಯ್ಯಬ್ ತಾಹಿರ್.