ಕೆಲವು ದಿನಗಳ ಹಿಂದಷ್ಟೇ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಹರ್ಮನ್ಪ್ರೀತ್ ನಾಯಕತ್ವದ ಭಾರತ ವನಿತಾ ಪಡೆ, ಪಾಕ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿತ್ತು. ಈ ಮೂಲಕ ಪಾಕ್ ವಿರುದ್ಧ ತನ್ನ ಪಾರುಪತ್ಯವನ್ನು ಮುಂದುವರೆಸಿತ್ತು. ಇದೀಗ ಮತ್ತೊಮ್ಮೆ ಎರಡು ದೇಶಗಳ ತಂಡಗಳು ಕ್ರಿಕೆಟ್ ಅಖಾಡಕ್ಕಿಳಿಯಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬದ್ಧವೈರಿಗಳ ನಡುವೆ ಕ್ರಿಕೆಟ್ ಕಾಳಗ ನಡೆಯಲ್ಲಿದೆ. ವಾಸ್ತವವಾಗಿ ಉದಯೋನ್ಮುಖ ಏಷ್ಯಾಕಪ್ ಪಂದ್ಯಾವಳಿ ಇದೇ ಅಕ್ಟೋಬರ್ 18 ರಿಂದ ಒಮಾನ್ನಲ್ಲಿ ಆರಂಭವಾಗುತ್ತಿದೆ. ಏಷ್ಯನ್ ರಾಷ್ಟ್ರಗಳ ನಡುವೆ ನಡೆಯಲ್ಲಿರುವ ಈ ಪಂದ್ಯಾವಳಿಯಲ್ಲಿ ಸಂಪ್ರಾದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 19 ರಂದು ಮುಖಾಮುಖಿಯಾಗಲಿವೆ.
ಮೇಲೆ ಹೇಳಿದಂತೆ ಉದಯೋನ್ಮುಖ ಏಷ್ಯಾಕಪ್ಗೆ ಅಕ್ಟೋಬರ್ 18 ರಂದು ಚಾಲನೆ ಸಿಗುತ್ತಿದೇಯಾದರೂ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿಯ ರಂಗು ಹೆಚ್ಚಾಗಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಮಸ್ಕತ್‌ನ ಓಮನ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲ್ಲಿದ್ದು, ಪಾಕ್ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೂರ್ನಿಯಲ್ಲಿ ಪಾಕಿಸ್ತಾನದ ಮೊದಲ ಪಂದ್ಯವೂ ಇದಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಏಕದಿನ ಮತ್ತು 16 ಟಿ20 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ತಿಲಕ್ ವರ್ಮಾ ಉದಯೋನ್ಮುಖ ಏಷ್ಯಾಕಪ್‌ಗಾಗಿ ಭಾರತ ಎ ತಂಡದ ನಾಯಕತ್ವವನ್ನು ವಹಿಸಲಿದ್ದಾರೆ. ಅಭಿಷೇಕ್ ಶರ್ಮಾಗೆ ಉಪ ನಾಯಕತ್ವದ ಜವಬ್ದಾರಿ ನೀಡಲಾಗಿದ್ದು, ಮಿಸ್ಟ್ರಿ ಸ್ಪಿನ್ನರ್ ರಾಹುಲ್ ಚಹಾರ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಈ ಮೂವರು ಭಾರತೀಯ ಆಟಗಾರರನ್ನು ಹೊರತುಪಡಿಸಿ, ಇತರ ಆಟಗಾರರು ಐಪಿಎಲ್ ಆಡಿದ ಅನುಭವವನ್ನು ಹೊಂದಿದ್ದಾರೆ. ಇದರಲ್ಲಿ ಆಯುಷ್ ಬಡೋನಿ, ರಮಣದೀಪ್ ಸಿಂಗ್, ಪ್ರಭಾಸಿಮ್ರಾನ್ ಸಿಂಗ್, ನೆಹಾಲ್ ವಡೇರಾ, ಅನುಜ್ ರಾವತ್, ಹೃತಿಕ್ ಶೌಕೀನ್, ಸಾಯಿ ಕಿಶೋರ್, ರಾಸಿಕ್ ಸಲಾಂ, ವೈಭವ್ ಅರೋರಾ ಮತ್ತು ಆಕಿಬ್ ಖಾನ್ ಸೇರಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಇವೆರಡನ್ನು ಹೊರತುಪಡಿಸಿ, ಯುಎಇ ಮತ್ತು ಒಮಾನ್ ತಂಡಗಳು ಸಹ ಈ ಗುಂಪಿನ ಭಾಗವಾಗಿವೆ. ಎಮರ್ಜಿಂಗ್ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ ಆಡಿದ ಐದು ಆವೃತ್ತಿಗಳನ್ನು 50 ಓವರ್‌ಗಳ ಮಾದರಿಯಲ್ಲಿ ಆಡಲಾಗಿತ್ತು.
ಭಾರತವು 2013 ರಲ್ಲಿ ಉದಯೋನ್ಮುಖ ಏಷ್ಯಾಕಪ್‌ನ ಮೊದಲ ಆವೃತ್ತಿಯನ್ನು ಗೆದ್ದುಕೊಂಡಿತು. ಇನ್ನು ಕಳೆದ ಎರಡು ಬಾರಿ ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿಜೇತವಾಗಿದೆ. ಕಳೆದ ಬಾರಿ ಫೈನಲ್‌ನಲ್ಲಿ ಭಾರತ ಎ ತಂಡವನ್ನು ಸೋಲಿಸಿ ಪಾಕಿಸ್ತಾನ ಎ ಪ್ರಶಸ್ತಿ ಗೆದ್ದಿತ್ತು. ಈ ಬಾರಿ ಭಾರತ ಎ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶವಿದ್ದು, ಪಾಕಿಸ್ತಾನ ಎ ತಂಡವನ್ನು ಮಣಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ.
ಭಾರತ ತಂಡ: ತಿಲಕ್ ವರ್ಮಾ (ನಾಯಕ), ವೈಭವ್ ಅರೋರಾ, ಆಯುಷ್ ಬದೋನಿ, ರಾಹುಲ್ ಚಾಹರ್, ಅಂಶುಲ್ ಕಾಂಬೋಜ್, ಸಾಯಿ ಕಿಶೋರ್, ಆಕಿಬ್ ಖಾನ್, ಅನುಜ್ ರಾವತ್ (ವಿಕೆಟ್ ಕೀಪರ್), ರಸಿಖ್ ಸಲಾಂ, ನಿಶಾಂತ್ ಸಿಂಧು, ಪ್ರಭುಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ರಮಣದೀಪ್ ಸಿಂಗ್, ಅಭಿಷೇಕ್ ಶರ್ಮಾ, ಹೃತಿಕ್ ಶೋಕೀನ್ , ನೆಹಾಲ್ ವಧೇರಾ.
ಪಾಕಿಸ್ತಾನ ತಂಡ: ಮೊಹಮ್ಮದ್ ಹ್ಯಾರಿಸ್ (ನಾಯಕ), ಅಬ್ಬಾಸ್ ಅಫ್ರಿದಿ, ಖಾಸಿಮ್ ಅಕ್ರಮ್, ಅಹ್ಮದ್ ದಾನಿಯಾಲ್, ಶಹನವಾಜ್ ದಹಾನಿ, ಮೊಹಮ್ಮದ್ ಇಮ್ರಾನ್, ಹಸೀಬುಲ್ಲಾ ಖಾನ್, ಯಾಸಿರ್ ಖಾನ್, ಜಮಾನ್ ಖಾನ್, ಅರಾಫತ್ ಮಿನ್ಹಾಸ್, ಸುಫಿಯಾನ್ ಮೊಕಿಮ್, ಮೆಹ್ರಾನ್ ಮುಮ್ತಾಜ್, ಅಬ್ದುಲ್ ಸಮದ್, ಒಮೈರ್ ಯೂಸುಫ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Mon, 14 October 24