ಸೆಪ್ಟೆಂಬರ್ 11 ರಂದು ಎರಡೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಇಂಗ್ಲೆಂಡ್ ಪಡೆ, ಎರಡರಲ್ಲೂ ಸೋಲು ಕಂಡಿದೆ. ಒಂದೆಡೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಪುರುಷರ ತಂಡ ಸೋಲನುಭವಿಸಿದರೆ, ಇನ್ನೊಂದೆಡೆ ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಸೋಲಿನ ಶಾಕ್ಗೆ ಒಳಗಾಗಿದೆ. ಇತ್ತ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಐರ್ಲೆಂಡ್ ಮಹಿಳಾ ತಂಡ ಕ್ಲೀನ್ ಸ್ವೀಪ್ ಮುಜುಗರದಿಂದ ಪಾರಾಗಿದಲ್ಲದೆ, ತನ್ನ 23 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ.
ವಾಸ್ತವವಾಗಿ ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ ಗೆದ್ದಿರುವ ಐರ್ಲೆಂಡ್, 2001ರ ನಂತರ ಮಹಿಳಾ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ದಾಖಲೆ ಬರೆದಿದೆ. 2001 ರ ಬಳಿಕ ಇಂಗ್ಲೆಂಡ್ ಮಹಿಳಾ ತಂಡ ಐರ್ಲೆಂಡ್‌ಗೆ ಶರಣಾದದ್ದು ಇದೇ ಮೊದಲು. ಐರ್ಲೆಂಡ್ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದ ಐರ್ಲೆಂಡ್ ತಂಡದ ಗೆಲುವಿನಲ್ಲಿ 18 ವರ್ಷದ ಬೌಲರ್ ಆಮಿ ಮ್ಯಾಗ್ಯಾರ್ ಅವರ ಪಾತ್ರ ಪ್ರಮುಖವಾಗಿತ್ತು.
ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಮಳೆ ಪೀಡಿತವಾಗಿತ್ತು. ಹೀಗಾಗಿ 50 ಓವರ್‌ಗಳ ಈ ಪಂದ್ಯವನ್ನು ತಲಾ 22 ಓವರ್‌ಗಳಿಗೆ ಇಳಿಸಲಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಸಂಪೂರ್ಣ 22 ಓವರ್ ಕೂಡ ಆಡಲು ಸಾಧ್ಯವಾಗದೆ, 20.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. ಐರ್ಲೆಂಡ್ ಪರ ಬೌಲಿಂಗ್‌ನಲ್ಲಿ ಮಿಂಚಿದ ಆಮಿ ಮಗ್ಯಾರ್, 3.5 ಓವರ್ ಗಳಲ್ಲಿ 19 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಗೆಲುವಿಗೆ 154 ರನ್‌ಗಳ ಗುರಿ ಪಡೆದ ಐರ್ಲೆಂಡ್ 7 ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ಪಂದ್ಯವನ್ನು ಕೊನೆಯ ಎಸೆತದಲ್ಲಿ ಗೆದ್ದುಕೊಳ್ಳುವ ಮೂಲಕ ಐರ್ಲೆಂಡ್, 2001 ರಿಂದ ತನ್ನ ಗೆಲುವಿನ ಕಾಯುವಿಕೆಯನ್ನು ಕೊನೆಗೊಳಿಸಿತು.
ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಐರ್ಲೆಂಡ್ ಕ್ಲೀನ್ ಸ್ವೀಪ್ ಮುಜುಗರದಿಂದ ಪಾರಾದರೆ, ಇತ್ತ ಕೊನೆಯ ಪಂದ್ಯವನ್ನು ಸೋತರು ಇಂಗ್ಲೆಂಡ್ ಈ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಮೊದಲ ಏಕದಿನ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದಿದ್ದ ಆಂಗ್ಲ ಮಹಿಳಾ ಪಡೆ, ಎರಡನೇ ಏಕದಿನ ಪಂದ್ಯವನ್ನು 275 ರನ್‌ಗಳಿಂದ ಗೆದ್ದುಕೊಂಡಿತು. ಈಗ ಸೆಪ್ಟೆಂಬರ್ 14 ರಿಂದ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯಲಿದ್ದು, ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್‌ಗೆ ಈ ಸರಣಿ ವಿಶೇಷವಾಗಿ ಮಹತ್ವದ್ದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Thu, 12 September 24