Dawid Malan: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್

|

Updated on: Aug 28, 2024 | 3:19 PM

Dawid Malan: ಐಸಿಸಿ ರ್ಯಾಂಕಿಂಗ್​ನಲ್ಲಿ ಬಹಳಷ್ಟು ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬಹಳ ದಿನಗಳಿಂದ ಇಂಗ್ಲೆಂಡ್ ತಂಡದಿಂದ ಹೊರಗಿದ್ದ ಮಲಾನ್, 2023ರ ಏಕದಿನ ವಿಶ್ವಕಪ್ ಬಳಿಕ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಮೇಲೆ ಹೇಳಿದಂತೆ ಆಸ್ಟ್ರೇಲಿಯ ವಿರುದ್ದ ಸರಣಿಯಿಂದ ಅವಕಾಶ ವಂಚಿತರಾದ ಹಲವು ಅನುಭವಿ ಆಟಗಾರರಲ್ಲಿ ಮಲಾನ್ ಕೂಡ ಒಬ್ಬರು.

Dawid Malan: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್
ಡೇವಿಡ್ ಮಲಾನ್
Follow us on

ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗಳಿಗೆ ಕ್ರಿಕೆಟ್ ಇಂಗ್ಲೆಂಡ್ ಕೆಲವು ದಿನಗಳ ಹಿಂದಷ್ಟೇ ತನ್ನ ತಂಡವನ್ನು ಪ್ರಕಟಿಸಿತ್ತು. ಈ ಎರಡೂ ತಂಡಗಳಲ್ಲೂ ತಂಡದ ಹಲವು ಹಿರಿಯ ಹಾಗೂ ಅನುಭವಿ ಆಟಗಾರರು ಅವಕಾಶ ವಂಚಿತರಾಗಿದ್ದರು. ಈ ನಡುವೆ ಇಂಗ್ಲೆಂಡ್ ಕ್ರಿಕೆಟ್ ಪಾಳಯದಿಂದ ಆಘಾತಕ್ಕಾರಿ ಸುದ್ದಿ ಹೊರಬಂದಿದ್ದು, ಐಸಿಸಿ ರ್ಯಾಂಕಿಂಗ್​ನಲ್ಲಿ ಬಹಳಷ್ಟು ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬಹಳ ದಿನಗಳಿಂದ ಇಂಗ್ಲೆಂಡ್ ತಂಡದಿಂದ ಹೊರಗಿದ್ದ ಮಲಾನ್, 2023ರ ಏಕದಿನ ವಿಶ್ವಕಪ್ ಬಳಿಕ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಮೇಲೆ ಹೇಳಿದಂತೆ ಆಸ್ಟ್ರೇಲಿಯ ವಿರುದ್ದ ಸರಣಿಯಿಂದ ಅವಕಾಶ ವಂಚಿತರಾದ ಹಲವು ಅನುಭವಿ ಆಟಗಾರರಲ್ಲಿ ಮಲಾನ್ ಕೂಡ ಒಬ್ಬರು. ಆಸೀಸ್ ವಿರುದ್ಧದ ಸರಣಿಯೊಂದಿಗೆ ತಂಡಕ್ಕೆ ಮರಳಬಹುದೆಂಬ ವಿಶ್ವಾಸವಿಟ್ಟುಕೊಂಡಿದ್ದ ಮಲಾನ್​ಗೆ ಆಯ್ಕೆ ಮಂಡಳಿ ಬಿಗ್ ಶಾಕ್ ನೀಡಿತ್ತು. ಹೀಗಾಗಿ ಮಲಾನ್ ತಮ್ಮ ಅತ್ಯಲ್ಪ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಘೋಸಿಸಿದ್ದಾರೆ.

3 ಮಾದರಿಯಲ್ಲೂ ಶತಕ

2017ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದ ಮಲಾನ್ ಅವರ ವೃತ್ತಿಜೀವನ ಕೇವಲ 7 ವರ್ಷಗಳಿಗೆ ಅಂತ್ಯಗೊಂಡಿದೆ. ಆದಾಗ್ಯೂ ಮಲಾನ್ ತನ್ನ ಅತ್ಯಲ್ಪ ವೃತ್ತಿಜೀವನದಲ್ಲೂ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಡೇವಿಡ್ ಮಲಾನ್ ಇಂಗ್ಲೆಂಡ್ ಪರ 22 ಟೆಸ್ಟ್, 30 ಏಕದಿನ ಮತ್ತು 62 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 8 ಶತಕಗಳನ್ನು ಬಾರಿಸಿರುವ ಮಲಾನ್, ಜೋಸ್ ಬಟ್ಲರ್ ಹೊರತುಪಡಿಸಿ, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡ್​ನ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಅತ್ಯಧಿಕ ರೇಟಿಂಗ್ ಪಾಯಿಂಟ್

ಸೀಮಿತ ಓವರ್​ಗಳ ಮಾದರಿಯಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ಮಲಾನ್ ಅವರ ಪ್ರದರ್ಶನ ಟಿ20 ಕ್ರಿಕೆಟ್‌ನಲ್ಲಿ ಅದ್ಭುತವಾಗಿತ್ತು. ಮಲಾನ್ 62 ಟಿ20 ಪಂದ್ಯಗಳಲ್ಲಿ 36.38 ರ ಸರಾಸರಿಯಲ್ಲಿ 1892 ರನ್ ಬಾರಿಸಿದ್ದು, ಮೇಲೆ ಹೇಳಿದಂತೆ ದೀರ್ಘಕಾಲದವರೆಗೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದರು. ಅಲ್ಲದೆ ಟಿ20 ಶ್ರೇಯಾಂಕದಲ್ಲಿ 900 ಕ್ಕೂ ಹೆಚ್ಚು ರೇಟಿಂಗ್ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಮಲಾನ್. ವಿರಾಟ್ ಕೊಹ್ಲಿ ಟಿ20 ಶ್ರೇಯಾಂಕದಲ್ಲಿ ದೀರ್ಘಕಾಲ ನಂಬರ್ 1 ಸ್ಥಾನದಲ್ಲಿದ್ದರಾದರೂ ಅವರ ಅತ್ಯುನ್ನತ ರೇಟಿಂಗ್ ಪಾಯಿಂಟ್ 897 ಆಗಿತ್ತು.

ಆಫ್ರಿಕಾ ಮೂಲ, ಇಂಗ್ಲೆಂಡ್​ನಲ್ಲಿ ನೆಲೆ

ಇನ್ನು ಡೇವಿಡ್ ಮಲಾನ್ ಅವರ ಬಗ್ಗೆ ಹೇಳುವುದಾದರೆ.. ಮೂಲತಃ ದಕ್ಷಿಣ ಆಫ್ರಿಕಾದವರಾದ ಮಲಾನ್, ಆಫ್ರಿಕಾ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ ಪ್ರಾರಂಭಿಸಿದರು. ಆದರೆ 2006 ರಲ್ಲಿ ಇಂಗ್ಲೆಂಡ್ಗೆ ಸ್ಥಳಾಂತರಗೊಂಡ ಅವರು ಕೌಂಟಿ ತಂಡ ಮಿಡ್ಲ್ಸೆಕ್ಸ್ ಪರ ಆಡಲಾರಂಭಿಸಿದರು. ಮಲಾನ್ ಅವರ ವೃತ್ತಿಜೀವನದ ಕುತೂಹಲಕಾರಿ ವಿಷಯವೆಂದರೆ 2017 ರಲ್ಲಿ ತಮ್ಮ ದೇಶವಾದ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಮಲಾನ್ ಈ ಪಂದ್ಯದಲ್ಲಿ 78 ರನ್​ಗಳ ಇನ್ನಿಂಗ್ಸ್ ಆಡಿದಲ್ಲದೆ, ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಆ ನಂತರ 2020 ರ ಹೊತ್ತಿಗೆ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿದರು.ಇದರ ಜೊತೆಗೆ ಮಲಾನ್ 2022 ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Wed, 28 August 24