ಜಯ್ ಶಾ ಐಸಿಸಿ ಅಧ್ಯಕ್ಷ: ಪಾಕ್​ಗೆ ಚಾಂಪಿಯನ್ಸ್ ಟ್ರೋಫಿ ಎತ್ತಂಗಡಿ ಭೀತಿ

Champions Trophy 2025: Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಕರಡು ವೇಳಾಪಟ್ಟಿ ಪ್ರಕಟವಾಗಿದ್ದು, ಈ ವೇಳಾಪಟ್ಟಿಯಂತೆ ಫೆಬ್ರವರಿ 19 ರಿಂದ ಪಂದ್ಯಾವಳಿ ಶುರುವಾಗಲಿದೆ. ಇನ್ನು ಮಾರ್ಚ್ 1 ರಂದು ನಡೆಯಲಿರುವ 11ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ.

ಜಯ್ ಶಾ ಐಸಿಸಿ ಅಧ್ಯಕ್ಷ: ಪಾಕ್​ಗೆ ಚಾಂಪಿಯನ್ಸ್ ಟ್ರೋಫಿ ಎತ್ತಂಗಡಿ ಭೀತಿ
Jay Shah
Follow us
ಝಾಹಿರ್ ಯೂಸುಫ್
|

Updated on: Aug 28, 2024 | 1:53 PM

ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್​ನ​ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಈ ಆಯ್ಕೆಯೇ ಈಗ ಪಾಕಿಸ್ತಾನ್ ಬೋರ್ಡ್​ನ ಚಿಂತೆ ಹೆಚ್ಚಿಸಿದೆ. ಏಕೆಂದರೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಕೈಯಲ್ಲಿದೆ. ಆದರೆ ಪಾಕ್​ನಲ್ಲಿ ಟೂರ್ನಿ ನಡೆದರೆ ಭಾರತ ತಂಡವು ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.

ಆದರೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಬೇಕಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದೆ ನಿರ್ದಿಷ್ಟ ಕಾರಣಗಳನ್ನು ನೀಡಬೇಕಾಗುತ್ತದೆ. ಆದರೀಗ ಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಜಯ್ ಶಾ ಬಂದು ಕೂತಿದ್ದಾರೆ. ಇದರಿಂದ ಬಿಸಿಸಿಐ ಹಾದಿ ಮತ್ತಷ್ಟು ಸುಗಮವಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಹಕ್ಕು ಕೈತಪ್ಪುವ ಭೀತಿ ಪಾಕ್ ಕ್ರಿಕೆಟ್ ಬೋರ್ಡ್​ಗೆ ಎದುರಾಗಿದೆ.

ಬಿಸಿಸಿಐನ ಮುಂದಿನ ನಡೆಯೇನು?

  • ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ ಸುರಕ್ಷತೆಯ ದೃಷ್ಟಿಯಿಂದ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂಬ ವಾದವನ್ನು ಬಿಸಿಸಿಐ ಮುಂದಿಡಬಹುದು.
  • ಇದಕ್ಕೆ ಪರ್ಯಾಯಾ ಮಾರ್ಗಗಳನ್ನು ಕಂಡುಕೊಳ್ಳಲು ಐಸಿಸಿ ಮುಂದಾಗಲಿದೆ. ಇಲ್ಲಿ ಐಸಿಸಿ ಭಾರತಕ್ಕೆ ಹೈಬ್ರಿಡ್ ಮಾದರಿಯ ಆಯ್ಕೆ ನೀಡುವ ಸಾಧ್ಯತೆಯಿದೆ.

ಏನಿದು ಹೈಬ್ರಿಡ್ ಮಾದರಿ?

ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆದ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಭಾರತದ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಯೋಜನೆಗೊಳ್ಳಬಹುದು. ಹೀಗೆ ಒಂದು ಟೂರ್ನಿಯನ್ನು ಎರಡು ದೇಶಗಳಲ್ಲಿ ಆಯೋಜಿಸುವುದನ್ನು ಹೈಬ್ರಿಡ್ ಮಾದರಿ ಎನ್ನಲಾಗುತ್ತದೆ.

ಪಿಸಿಬಿಗೆ ಚಿಂತೆ ಶುರು:

ಭಾರತವು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಮನವಿ ಮಾಡಿದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಒಪ್ಪಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಇಡೀ ಟೂರ್ನಿಯು ಕೈ ತಪ್ಪುವ ಸಾಧ್ಯತೆಯಿದೆ. ಹೀಗಾಗಿ ಬಿಸಿಸಿಐ ಮನವಿಗೆ ಪಿಸಿಬಿ ಮಣಿಯಲೇಬೇಕಾದ ಒತ್ತಡದಲ್ಲಿದೆ.

ಇನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಮುಂದಾಗದಿದ್ದರೆ, ಐಸಿಸಿ ಪರ್ಯಾಯ ಆಯ್ಕೆಗಳನ್ನು ನೋಡಲಿದೆ. ಇದರಿಂದ ಯುಎಇ ಅಥವಾ ಶ್ರೀಲಂಕಾದಲ್ಲಿ ಟೂರ್ನಿಯನ್ನು ಸ್ಥಳಾಂತರಿಸಬಹುದು. ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದು ಐಸಿಸಿ ಚೇರ್ಮನ್ ಕಮಿಟಿ ಎಂಬುದು ವಿಶೇಷ.

ಇದೀಗ ಐಸಿಸಿಯ ಚೇರ್ಮನ್ ಆಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯ ಜಯ್ ಶಾ ಅವರ ಅಂಗಳದಲ್ಲಿದೆ. ಹೀಗಾಗಿಯೇ ಐಸಿಸಿ ಸೂಚಿಸುವ ಯಾವುದೇ ಆಯ್ಕೆಯನ್ನು ಒಪ್ಪಲೇಬೇಕಾದ ಅನಿವಾರ್ಯತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಿದೆ.

ಒಟ್ಟಿನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಕಲ ಸಿದ್ಧತೆಯಲ್ಲಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಇದೀಗ ಜಯ್ ಶಾ ಅವರ ಆಯ್ಕೆಯು ನುಂಗಲಾರದ ತುಪ್ಪವಾಗಿ ಪರಿಣಮಿಸಿರುವುದಂತು ನಿಜ. ಹೀಗಾಗಿ ಐಸಿಸಿಯ ಯಾವುದೇ ನಿಬಂಧನೆಗೂ ಮಣಿಯಲೇಬೇಕಾದ ಅನಿವಾರ್ಯತೆಯಲ್ಲಿದೆ.

ಚಾಂಪಿಯನ್ಸ್ ಟ್ರೋಫಿ ತಂಡಗಳು:

ಗ್ರೂಪ್-A

  1. ಭಾರತ
  2. ಪಾಕಿಸ್ತಾನ್
  3. ಬಾಂಗ್ಲಾದೇಶ್
  4. ನ್ಯೂಝಿಲೆಂಡ್

ಇದನ್ನೂ ಓದಿ: Team India: ಕೊನೆಯ 10 ಓವರ್​ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ಗ್ರೂಪ್-B

  1. ಆಸ್ಟ್ರೇಲಿಯಾ
  2. ಇಂಗ್ಲೆಂಡ್
  3. ಸೌತ್ ಆಫ್ರಿಕಾ
  4. ಅಫ್ಘಾನಿಸ್ತಾನ್.