ವೆಲ್ಲಿಂಗ್ಟನ್ನ ಬಾಸಿನ್ ರಿಸರ್ವ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 323 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಹ್ಯಾರಿ ಬ್ರೂಕ್ (123) ಅವರ ಶತಕದ ನೆರವಿನಿಂದ ಪ್ರಥಮ ಇನಿಂಗ್ಸ್ನಲ್ಲಿ 280 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ತಂಡವು ಕೇವಲ 125 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಗಸ್ ಅಟ್ಕಿನ್ಸನ್ ಹಾಗೂ ಬ್ರೈಡನ್ ಕಾರ್ಸೆ ತಲಾ 4 ವಿಕೆಟ್ ಕಬಳಿಸಿದರು.
155 ರನ್ಗಳ ಪ್ರಥಮ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಬೆನ್ ಡಕೆಟ್ 92 ರನ್ ಬಾರಿಸಿದರೆ, ಯುವ ದಾಂಡಿಗ ಜೇಕಬ್ ಬೆಥೆಲ್ 96 ರನ್ ಸಿಡಿಸಿದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ 106 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಇಂಗ್ಲೆಂಡ್ ತಂಡವು 6 ವಿಕೆಟ್ ಕಳೆದುಕೊಂಡು 427 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ಮೊದಲ ಇನಿಂಗ್ಸ್ನಲ್ಲಿನ 155 ರನ್ಗಳ ಹಿನ್ನಡೆಯೊಂದಿಗೆ 583 ರನ್ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕೇವಲ 59 ರನ್ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕಿವೀಸ್ ಪಡೆಗೆ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್ ಆಸರೆಯಾಗಿ ನಿಂತರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬ್ಲಂಡೆಲ್ 102 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 115 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ನ್ಯೂಝಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್ ಅನ್ನು 259 ರನ್ಗಳೊಂದಿಗೆ ಅಂತ್ಯಗೊಳಿಸಿತು. ಈ ಮೂಲಕ ಇಂಗ್ಲೆಂಡ್ ತಂಡವು 323 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಮೂಲಕ 16 ವರ್ಷಗಳ ಬಳಿಕ ಕಿವೀಸ್ ನೆಲದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 2008 ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ನಲ್ಲಿ ಸರಣಿ ಜಯಿಸಿತ್ತು.
ಇದಾದ ಬಳಿಕ ತವರಿನಲ್ಲಿ ಕಿವೀಸ್ ಪಡೆಯನ್ನು ಸೋಲಿಸಲು ಆಂಗ್ಲರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಬೆನ್ ಸ್ಟೋಕ್ಸ್ ಪಡೆಯು ಹದಿನಾರು ವರ್ಷಗಳ ಬಳಿಕ ಐತಿಹಾಸಿಕ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೆ , ಕೇನ್ ವಿಲಿಯಮ್ಸನ್ , ರಚಿನ್ ರವೀಂದ್ರ , ಡೇರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ ( ವಿಕೆಟ್ ಕೀಪರ್ ) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಮ್ಯಾಟ್ ಹೆನ್ರಿ , ಟಿಮ್ ಸೌಥಿ , ವಿಲಿಯಂ ಒರೋಕ್.
ಇದನ್ನೂ ಓದಿ: ಶರ ವೇಗದ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಜಾಕೋಬ್ ಬೆಥೆಲ್ , ಜೋ ರೂಟ್ , ಹ್ಯಾರಿ ಬ್ರೂಕ್ , ಒಲೀ ಪೋಪ್ , ಬೆನ್ ಸ್ಟೋಕ್ಸ್ (ನಾಯಕ) , ಕ್ರಿಸ್ ವೋಕ್ಸ್ , ಗಸ್ ಅಟ್ಕಿನ್ಸನ್ , ಬ್ರೈಡನ್ ಕಾರ್ಸೆ , ಶೋಯೆಬ್ ಬಶೀರ್.
Published On - 9:58 am, Sun, 8 December 24