ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ತಂಡ ಇತಿಹಾಸ ಸೃಷ್ಟಿಸಿ ಎರಡನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತಂಡದ ಈ ಐತಿಹಾಸಿಕ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 17 ವರ್ಷಗಳ ನಂತರ ಟೀಂ ಇಂಡಿಯಾವನ್ನು ಟಿ20 ವಿಶ್ವಕಪ್ ಚಾಂಪಿಯನ್ ಆಗಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ 11 ವರ್ಷಗಳ ನಂತರ ಐಸಿಸಿ ಟ್ರೋಫಿ ಬರವನ್ನು ಸಹ ಕೊನೆಗೊಳಿಸಿದ್ದರು. ಆದರೆ ಒಪ್ಪಂದದ ಪ್ರಕಾರ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿತ್ತು. ಈ ಹುದ್ದೆಯಲ್ಲಿ ಮುಂದುವರೆಯುವಂತೆ ದ್ರಾವಿಡ್ ಅವರನ್ನು ಬಿಸಿಸಿಐ ಕೇಳಿಕೊಂಡಿತ್ತಾದರೂ, ರಾಹುಲ್ ಯಾಕೋ ಮನಸ್ಸು ಮಾಡಲಿಲ್ಲ. ಹೀಗಾಗಿ ಅವರ ಸ್ಥಾನಕ್ಕೆ ಇದೀಗ ಗೌತಮ್ ಗಂಭೀರ್ ಬಂದಿದ್ದಾರೆ. ಇತ್ತ ರಾಷ್ಟ್ರೀಯ ತಂಡವನ್ನು ತೊರೆದ ದ್ರಾವಿಡ್, ಐಪಿಎಲ್ ತಂಡದ ಮುಖ್ಯ ಕೋಚ್ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆ ದ್ರಾವಿಡ್ಗೆ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಹುದ್ದೆಯ ಆಫರ್ ಬಂದಿದೆ.
ರಾಹುಲ್ ದ್ರಾವಿಡ್ ಐಪಿಎಲ್ನಲ್ಲಿ ತಮ್ಮ ಹಿಂದಿನ ಫ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕೋಚ್ ಆಗಿ ಮತ್ತೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಡುವೆ ಇಂಗ್ಲೆಂಡ್ ತಂಡದ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ದ್ರಾವಿಡ್ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ತಂಡದ ಮುಂದಿನ ಮುಖ್ಯ ಕೋಚ್ ಆಗಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
ವಾಸ್ತವವಾಗಿ ಟಿ20 ವಿಶ್ವಕಪ್‌ನ ಇಂಗ್ಲೆಂಡ್ ತಂಡ ಸೆಮಿಫೈನಲ್ ಸುತ್ತಿನಲ್ಲಿ ಸೋತು ಹೊರಬಿದ್ದ ಬಳಿಕ ತಂಡ ಮುಖ್ಯ ಕೋಚ್ ಮ್ಯಾಥ್ಯೂ ಮೋಟ್ ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಸ್ಥಾನದಲ್ಲಿ ಮಾರ್ಕಸ್ ಟ್ರೆಸ್ಕೋಥಿಕ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಕಲೆವು ವರ್ಷಗಳಿಂದ ಸೀಮಿತ ಓವರ್ಗಳಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನ ಸಾಮಾನ್ಯವಾಗಿದೆ. ಈ ಅವಧಿಯಲ್ಲಿ ಆಂಗ್ಲ ತಂಡಕ್ಕೆ ಏಕದಿನ ವಿಶ್ವಕಪ್ ಪ್ರಶಸ್ತಿಯಾಗಲೀ, ಟಿ20 ವಿಶ್ವಕಪ್‌ನಾಗಲೀ ಗೆಲ್ಲಲು ಸಾಧ್ಯವಾಗಿಲ್ಲ.
ಈ ಕಾರಣಕ್ಕಾಗಿ, ಮುಖ್ಯ ಕೋಚ್ ತಲೆದಂಡವಾಗಿತ್ತು. ತೆರವಾದ ಸ್ಥಾನಕ್ಕೆ ಅನೇಕ ಅನುಭವಿಗಳ ಹೆಸರುಗಳು ಕೇಳಿಬರುತ್ತಿವೆ. ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್, ರಾಹುಲ್ ದ್ರಾವಿಡ್ ಹೆಸರನ್ನು ಸೂಚಿಸುವ ಮೂಲಕ ಚರ್ಚೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದ್ದಾರೆ.
ಸ್ಕೈ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಇಯಾನ್ ಮೋರ್ಗನ್, ತಮ್ಮ ದೃಷ್ಟಿಯಲ್ಲಿ ಇಂಗ್ಲೆಂಡ್‌ನ ವೈಟ್ ಬಾಲ್ ಮುಖ್ಯ ಕೋಚ್‌ಗೆ ಅಗ್ರ ಸ್ಪರ್ಧಿಗಳು ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆಂಡನ್ ಮೆಕಲಮ್ ಆಗಿದ್ದಾರೆ. ಇವರುಗಳಲ್ಲಿ ಮೆಕಲಮ್ ಪ್ರಸ್ತುತ ವಿಶ್ವದ ಅತ್ಯುತ್ತಮ ತರಬೇತುದಾರರಲ್ಲಿ ಒಬ್ಬರು. ನನ್ನ ದೃಷ್ಟಿಯಲ್ಲಿ ನೀವು ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆಂಡನ್ ಮೆಕಲಮ್ ಅವರಲ್ಲಿ ಒಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು. ನನ್ನ ಪ್ರಕಾರ, ಈ ಹುದ್ದೆಗೆ ಮೆಕಲಮ್ ಸೂಕ್ತ. ಏಕೆಂದರೆ ಅವರು ವಿಶ್ವದ ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರು ಎಂದು ನಾನು ನಂಬುತ್ತೇನೆ. ನೀವು ನೆನಪಿಟ್ಟುಕೊಳ್ಳಬೇಕು, ಇದು ಇಂಗ್ಲೆಂಡ್ ಇದು ಕ್ರಿಕೆಟ್ ತಂಡ, ಇದು ವಿಶ್ವದ ಅತ್ಯಂತ ಸಂಪನ್ಮೂಲ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದೆ, ಆದ್ದರಿಂದ ಮುಖ್ಯ ತರಬೇತುದಾರನ ಪಾತ್ರವನ್ನು ನಿರ್ವಹಿಸುವವರ ನುರಿತವರಾಗಿರಬೇಕು ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ