2019ರ ಏಕದಿನ ವಿಶ್ವಕಪ್ ಹೀರೋ, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಕಳೆದ ವರ್ಷ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಇದೀಗ ಒಂದು ವರ್ಷದ ಬಳಿಕ ಸ್ಟೋಕ್ಸ್ ಅವರನ್ನು ಮತ್ತೆ ಏಕದಿನ ಕ್ರಿಕೆಟ್ಗೆ ಕರೆತರುವ ಪ್ರಯತ್ನಕ್ಕೆ ಕೈ ಹಾಕಿದೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್. ಇದಕ್ಕೆ ಮುಖ್ಯ ಕಾರಣ ಮುಂಬರುವ ಏಕದಿನ ವಿಶ್ವಕಪ್.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಆಡುವಂತೆ ಬೆನ್ ಸ್ಟೋಕ್ಸ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮನವಿ ಸಲ್ಲಿಸಿದೆ. ಆದರೆ ಈ ಮನವಿಗೆ ಸ್ಟೋಕ್ಸ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಪ್ರಶ್ನೆ. ಏಕೆಂದರೆ 2022 ರಲ್ಲಿ ಸ್ಟೋಕ್ಸ್ ಏಕದಿನ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು.
ಮೂರು ಮಾದರಿ ಕ್ರಿಕೆಟ್ನಲ್ಲಿ ಆಡುವುದು ತ್ರಾಸದಾಯಕ. ಒತ್ತಡವನ್ನು ಕಡಿಮೆಗೊಳಿಸಲು ಒಂದು ಮಾದರಿಯ ಕ್ರಿಕೆಟ್ಗೆ ದೂರ ಉಳಿಯಲು ನಿರ್ಧರಿಸಿದ್ದೇನೆ. ಅದರಂತೆ ಒನ್ ಡೇ ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ಸ್ಟೋಕ್ಸ್ ತಿಳಿಸಿದ್ದರು. ಅಲ್ಲದೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಇದೀಗ ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ಗೆ ಅನುಭವಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರ ಅಗತ್ಯತೆ ಇದೆ ಎಂದು ಇಂಗ್ಲೆಂಡ್ ಕೋಚ್ ಮ್ಯಾಥ್ಯೂ ಮೋಟ್ ಅಭಿಪ್ರಾಯಪಟ್ಟಿದ್ದಾರೆ. ಇದರ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ಗೆ ನಿವೃತ್ತಿ ಹಿಂಪಡೆಯುವಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮನವಿ ಮಾಡಿದೆ ಎಂದು ವರದಿಯಾಗಿದೆ. ಅದರಂತೆ ಏಕದಿನ ವಿಶ್ವಕಪ್ಗಾಗಿ ಬೆನ್ ಸ್ಟೋಕ್ಸ್ ನಿವೃತ್ತಿ ಹಿಂಪಡೆಯುತ್ತಾರಾ ಕಾದು ನೋಡಬೇಕಿದೆ.
ಈ ಬಾರಿಯ ಆ್ಯಶಸ್ ಸರಣಿಯಲ್ಲಿ ಮೊಯೀನ್ ಅಲಿ ಕಣಕ್ಕಿಳಿದಿದ್ದರು. ಆದರೆ ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ಮೊಯೀನ್ ಅಲಿ ಅವರನ್ನು ಆ್ಯಶಸ್ ಸರಣಿ ಆಡುವಂತೆ ಮನವೊಲಿಸುವಲ್ಲಿ ಬೆನ್ ಸ್ಟೋಕ್ಸ್ ಯಶಸ್ವಿಯಾಗಿದ್ದರು. ಅಲ್ಲದೆ ಆ್ಯಶಸ್ ಸರಣಿ ಬಳಿಕ ಮೊಯೀನ್ ಅಲಿ ಮತ್ತೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ಇದೀಗ ಮೊಯೀನ್ ಅಲಿ ಜಾಗದಲ್ಲಿ ಬೆನ್ ಸ್ಟೋಕ್ಸ್ ಇದ್ದಾರೆ. ಇತ್ತ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹಾಗೂ ಏಕದಿನ ತಂಡದ ನಾಯಕ ಜೋಸ್ ಬಟ್ಲರ್ ಬೆನ್ ಸ್ಟೋಕ್ಸ್ ಅವರ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ. ಈ ಮಾತುಕತೆ ಯಶಸ್ವಿಯಾದರೆ ಬೆನ್ ಸ್ಟೋಕ್ಸ್ ಏಕದಿನ ವಿಶ್ವಕಪ್ನಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಇದಾದ ಬಳಿಕ ಮತ್ತೆ ನಿವೃತ್ತಿ ಘೋಷಿಸಬಹುದು.
ಈ ಬಾರಿಯ ಆ್ಯಶಸ್ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಷ್ಟೇ ಅಲ್ಲದೆ 2022 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಹಾಗೆಯೇ 2019 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಗೆಲುವಿನ ರೂವಾರಿ ಕೂಡ ಬೆನ್ ಸ್ಟೋಕ್ಸ್.
ಈ ಎಲ್ಲಾ ಕಾರಣಗಳಿಂದಾಗಿ ಪ್ರಮುಖ ಟೂರ್ನಿಗಳಲ್ಲಿ ಬೆನ್ ಸ್ಟೋಕ್ಸ್ ಅವರ ಅವಶ್ಯಕತೆ ಇಂಗ್ಲೆಂಡ್ ತಂಡಕ್ಕಿದೆ. ಹೀಗಾಗಿಯೇ ಸ್ಟೋಕ್ಸ್ ಅವರನ್ನು ತಂಡಕ್ಕೆ ಮರಳಿ ಕರೆತರುವ ಪ್ರಯತ್ನ ಕೈ ಹಾಕಲಾಗಿದೆ. ಈ ಪ್ರಯತ್ನ ಯಶಸ್ವಿಯಾದರೆ ಭಾರತದ ಪಿಚ್ನಲ್ಲಿ ಇಂಗ್ಲೆಂಡ್ ತಂಡ ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: ಟೀಮ್ ಇಂಡಿಯಾ ಪಾಲಿಗೆ ಶ್ರೇಯಸ್ ಅಯ್ಯರ್ ಅನಿವಾರ್ಯ..!
ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಅಂದರೆ 2019 ರ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಆಡಿದ್ದ ತಂಡಗಳು ಈ ಬಾರಿ ಮೊದಲ ಪಂದ್ಯವಾಡಲಿದೆ. ಇನ್ನು ಭಾರತ ತಂಡವು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.