ನಮೀಬಿಯಾ ಅಂಡರ್-19 ತಂಡಕ್ಕೆ ಫಾಫ್ ಡುಪ್ಲೆಸಿಸ್ ನಾಯಕ

|

Updated on: Mar 20, 2025 | 1:54 PM

IPL 2025 Faf du Plessis: ಸೌತ್ ಆಫ್ರಿಕಾ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್ ಡೆಲ್ಲಿ ಕ್ಯಾಪಿಟಲ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಸಜ್ಜಾಗುತ್ತಿದ್ದಾರೆ. ಈ ಸಜ್ಜಾಗುವಿಕೆಯ ನಡುವೆ ನಮೀಬಿಯಾ ತಂಡಕ್ಕೆ ಫಾಫ್ ಡುಪ್ಲೆಸಿಸ್ ನಾಯಕನೆಂಬ ಸುದ್ದಿಯೊಂದು ಹೊರಬಿದ್ದಿದೆ. ಆದರೆ ಈ ಡುಪ್ಲೆಸಿಸ್ ಆ ಡುಪ್ಲೆಸಿಸ್ ಅಲ್ಲ ಎಂಬುದಷ್ಟೇ ವ್ಯತ್ಯಾಸ.

ನಮೀಬಿಯಾ ಅಂಡರ್-19 ತಂಡಕ್ಕೆ ಫಾಫ್ ಡುಪ್ಲೆಸಿಸ್ ನಾಯಕ
Faf Du Plessis
Follow us on

ನಮೀಬಿಯಾ ಅಂಡರ್-19 ತಂಡ ಸಖತ್ ಸುದ್ದಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಆಗಿರುವುದು. ಅಂದರೆ ಮುಂಬರುವ ಕಿರಿಯರ ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯಗಳಿಗಾಗಿ ಪ್ರಕಟಿಸಲಾದ ನಮೀಬಿಯಾ ತಂಡಕ್ಕೆ ಫಾಫ್ ಡುಪ್ಲೆಸಿಸ್ ಹೆಸರಿನ ಆಟಗಾರ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಫಾಫ್ ಡುಪ್ಲೆಸಿಸ್ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕನಲ್ಲ. ಬದಲಾಗಿ ನಮೀಬಿಯಾ ಮೂಲದ ಆಟಗಾರ.

ಇಲ್ಲಿ ಹೆಸರು ಒಂದೇ ರೀತಿಯಿದ್ದ ಕಾರಣ ಆರ್​ಸಿಬಿ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಹೆಸರು ಮುಂಚೂಣಿಗೆ ಬಂದಿದೆ. ಅಲ್ಲದೆ ನಮೀಬಿಯಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಎಂಬ ಟ್ಯಾಗ್ ಲೈನ್​ನೊಂದಿಗೆ ಫಾಫ್​ಡಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಯಂಗ್ ಡುಪ್ಲೆಸಿಸ್:

ನಮೀಬಿಯಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರ ಪ್ರಸ್ತುತ ವಯಸ್ಸು ಕೇವಲ 17 ವರ್ಷ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪ್ರಕಾರ, ಅವರು ಬಲಗೈ ಬ್ಯಾಟ್ಸ್‌ಮನ್ ಮತ್ತು ಲೆಗ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಅಲ್ಲದೆ ಈ ಹಿಂದೆ ನಮೀಬಿಯಾ ಪರ 3 ಪಂದ್ಯಗಳನ್ನು ಸಹ ಆಡಿದ್ದಾರೆ.

ಮಾರ್ಚ್ 28 ರಿಂದ ಪ್ರಾರಂಭವಾಗುವ ಡಿವಿಷನ್ 1 ಅರ್ಹತಾ ಸುತ್ತಿನ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಮುನ್ನಡೆಸಲು ಯಂಗ್ ಫಾಫ್ ಡುಪ್ಲೆಸಿಸ್ ಸಜ್ಜಾಗಿ ನಿಂತಿದ್ದಾರೆ. ಈ ಸುತ್ತಿನಲ್ಲಿ ನಮೀಬಿಯಾ ತಂಡವು ಕೀನ್ಯಾ, ನೈಜೀರಿಯಾ, ಸಿಯೆರಾ ಲಿಯೋನ್, ತಾಂಜಾನಿಯಾ ಮತ್ತು ಉಗಾಂಡಾಗಳನ್ನು ಎದುರಿಸಲಿದೆ.

ಇನ್ನು ಈ ಅರ್ಹತಾ ಸುತ್ತಿನ ಎಲ್ಲಾ ಪಂದ್ಯಗಳು ನೈಜೀರಿಯಾದ ಲಾಗೋಸ್ ನಗರದಲ್ಲಿ ನಡೆಯಲಿವೆ. ಈ ಪಂದ್ಯಗಳಲ್ಲಿ ಗೆದ್ದರೆ 2026 ರಲ್ಲಿ ಝಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಅಂಡರ್-19 ವಿಶ್ವಕಪ್​ನಲ್ಲಿ ನಮೀಬಿಯಾ ತಂಡ ಅರ್ಹತೆ ಪಡೆಯಲಿದೆ.

ಇದನ್ನೂ ಓದಿ: IPL 2025: RCB ಗಿಂತ ಡೆಲ್ಲಿ ಪಡೆಯಲ್ಲೇ ಕನ್ನಡಿಗರ ದರ್ಬಾರು

ನಮೀಬಿಯಾ ಅಂಡರ್ 19 ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಆಡ್ರಿಯನ್ ಕೋಟ್ಜೀ, ಬೆನ್ ಬ್ರಾಸ್ಸೆಲ್, ಡ್ಯಾನ್ ಬ್ರಾಸ್ಸೆಲ್, ಎರಿಕ್ ಲಿಂಟ್ವೆಲ್ಟ್, ಹೆನ್ರಿ ಗ್ರಾಂಟ್, ಜಾಂಕೊ ಎಂಗೆಲ್ಬ್ರೆಕ್ಟ್, ಜೂನಿಯನ್ ತಾನ್ಯಾಂಡಾ, ಲಿಯಾಮ್ ಬೆಸ್ಸನ್, ಲುಕಾ ಮೈಕೆಲೊ, ಮ್ಯಾಕ್ಸ್ ಹೆಂಗೊ, ರೋವನ್ ವ್ಯಾನ್ ವುರೆನ್, ಟಿಯಾನ್ ವ್ಯಾನ್ ಡೆರ್ ಮೆರ್ವೆ, ವಾಲ್ಡೊ ಸ್ಮಿತ್.