ವಿನೋದ್ ಕಾಂಬ್ಳಿ ಕುಡಿತದ ಚಟಕ್ಕೊಳಗಾಗಲು ಕಾರಣ ಬಹಿರಂಗಪಡಿಸಿದ ಪತ್ನಿ
Vinod Kambli: ಟೀಮ್ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನಾಡಿರುವ ವಿನೋದ್ ಕಾಂಬ್ಳಿ 2 ದ್ವಿಶತಕ, 4 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 104 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 2 ಭರ್ಜರಿ ಶತಕ ಹಾಗೂ 14 ಅರ್ಧಶತಕಗಳೊಂದಿಗೆ ಒಟ್ಟು 2477 ರನ್ಗಳಿಸಿ ಮಿಂಚಿದ್ದರು.
ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕಳೆದೊಂದು ತಿಂಗಳಿಂದ ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ನಡೆದ ಲೆಜೆಂಡ್ ಕ್ರಿಕೆಟ್ ತರಬೇತುದಾರ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕದ ಅನಾವರಣ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದ ಬೆನ್ನಲ್ಲೇ ಕಾಂಬ್ಳಿ ಅವರ ಅನಾರೋಗ್ಯದ ವಿಷಯಗಳು ಬಹಿರಂಗಗೊಂಡಿದ್ದವು. ಇದಾದ ಬಳಿಕ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದೀಗ ವಿನೋದ್ ಕಾಂಬ್ಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಿದ್ದಾರೆ. ಮನೆಯಲ್ಲಿ ವಿನೋದ್ ಕಾಂಬ್ಳಿ ಅವರನ್ನು ನೋಡಿಕೊಳ್ಳುತ್ತಿರುವುದು ಅವರ ಪತ್ನಿ ಆಂಡ್ರಿಯಾ ಹೆವಿಟ್.
ಇತ್ತ ಕಾಂಬ್ಳಿ ಅವರ ಕುರಿತಾಗಿ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯಲು ಆಂಡ್ರಿಯಾ ನಿರ್ಧರಿಸಿದ್ದಾರೆ. ಅಲ್ಲದೆ ತಮ್ಮ ವೈಯಕ್ತಿಕ ಹಾಗೂ ಖಾಸಗಿ ಬದುಕಿನ ಬಗ್ಗೆ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಆಂಡ್ರಿಯಾ ಅವರು ತನ್ನ ಮದುವೆ, ಆರ್ಥಿಕ ಸಮಸ್ಯೆಗಳು ಮತ್ತು ಕಾಂಬ್ಳಿಯ ಮದ್ಯಪಾನ ತನ್ನ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.
ಕ್ರಿಕೆಟರ್-ಮಾಡೆಲ್ ಲವ್ಸ್ಟೋರಿ:
ವಿನೋದ್ ಕಾಂಬ್ಳಿ ಕ್ರಿಕೆಟರ್ ಆಗಿದ್ದ ವೇಳೆ ಆಂಡ್ರಿಯಾ ಹೆವಿಟ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. ಅವರು ಮೊದಲ ಬಾರಿಗೆ ವಿನೋದ್ ಕಾಂಬ್ಳಿ ಅವರನ್ನು 2004 ರಲ್ಲಿ ಭೇಟಿಯಾಗಿದ್ದರು. ಆ ವೇಳೆ ಕಾಂಬ್ಳಿ ಅವರ ತಾಯಿ ನಿಧನರಾಗಿದ್ದರು.
ತಾಯಿಯ ನಿಧನದಿಂದಾಗಿ ಮಾನಸಿಕವಾಗಿ ನೊಂದಿದ್ದ ವಿನೋದ್ ಕಾಂಬ್ಳಿ ಕುಡಿತದ ಚಟಕ್ಕೆ ಬಿದ್ದರು. ಭಾವನಾತ್ಮಕವಾಗಿ ಕುಸಿದು ಹೋಗಿದ್ದ ಅವರು ಮದ್ಯಪಾನವನ್ನು ದೈನಂದಿನ ಪ್ರಕ್ರಿಯೆಯಾಗಿಸಿದರು. ಈ ಮೂಲಕ ಅಮ್ಮನ ಅಗಲಿಕೆಯ ನೋವನ್ನು ಮರೆಯುವ ಪ್ರಯತ್ನಿಸಿದ್ದರು. ಆದರೆ ಅದುವೇ ಮುಂದೆ ಚಟವಾಗಿ ಬೆಳೆಯಿತು ಎಂದು ಆಂಡ್ರಿಯಾ ಹೆವಿಟ್ ಹೇಳಿದ್ದಾರೆ.
ಇದರ ನಡುವೆ ಅವರು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದರು. ವಿವಾಹವಾಗಬೇಕಿದ್ದರೆ ನೀವು ಮದ್ಯಪಾನವನ್ನು ತ್ಯಜಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೆ. ಅದಕ್ಕೆ ಅವರು ಸಹ ಒಪ್ಪಿಕೊಂಡರು. 2006 ರಲ್ಲಿ ನಾವಿಬ್ಬರು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟೆವು.
ಅಷ್ಟರಲ್ಲಾಗಲೇ ವಿನೋದ್ ಕಾಂಬ್ಳಿಯ ಅವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಕಾಂಬ್ಳಿ ಅವರು ಮದುವೆಗೂ ಮುನ್ನ ಕೆಲ ಮಹಿಳೆಯೊಂದಿಗೆ ಸುತ್ತಾಡುತ್ತಿದ್ದರು. ಇದರ ಜೊತೆ ಆಲ್ಕೋಹಾಲ್ ಚಟ ಕೂಡ ಇತ್ತಲ್ಲವೇ. ಹೀಗಾಗಿ ಅವರಿಗೆ ಜೀವನದ ಬಗ್ಗೆ ಯಾವುದೇ ಯೋಜನೆಗಳಿರಲಿಲ್ಲ.
ಆದರೆ ಮದುವೆಯ ಬಳಿಕ ನಾನು ಎಲ್ಲವೂ ಸರಿ ಹೋಗುತ್ತದೆ ಎಂದು ಭಾವಿಸಿದ್ದೆ. 2010 ರಲ್ಲಿ ಮೊದಲ ಮಗು ಜನಿಸಿದಾಗ, ಕಾಂಬ್ಳಿ ಆರ್ಥಿಕ ಸಮಸ್ಯೆಗಳಿಂದ ತುಂಬಾ ಆತಂಕಕ್ಕೊಳಗಾದರು. ಹೀಗಾಗಿ ನಾನು ಕುಟುಂಬದ ಜವಾಬ್ದಾರಿವಹಿಸಿಕೊಳ್ಳಲು ಸಿದ್ಧಳಾದೆ ಎಂದು ಆಂಡ್ರಿಯಾ ಹೇಳಿದ್ದಾರೆ.
ನಾನು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದೆ. ಆ ಬಳಿಕ ಕಾಂಬ್ಳಿ ಸ್ಥಿತಿ ಸುಧಾರಿಸತೊಡಗಿತು. ಅಲ್ಲದೆ ಮದ್ಯವನ್ನು ತ್ಯಜಿಸಲು ನಾನು ಅವರನ್ನು ಪ್ರೋತ್ಸಾಹಿಸಿದೆ. ಇದಾದ 6 ವರ್ಷಗಳ ವಿನೋದ್ ಕಾಂಬ್ಳಿ ಮದ್ಯಪಾನ ಮಾಡಿರಲಿಲ್ಲ. ಆದರೆ ಸಿಗರೇಟ್ ಸೇದುತ್ತಿದ್ದರು. ಕುಡಿತವನ್ನು ಬಿಟ್ಟಿದ್ದರಿಂದ ಆರೋಗ್ಯದಲ್ಲೂ ಸುಧಾರಣೆ ಕಂಡು ಬಂತು. ಆದರೆ ಕಾಲಾನಂತರದಲ್ಲಿ ಮತ್ತೆ ಮದ್ಯದ ಚಟಕ್ಕೆ ಮರುಳಾದರು.
2014 ರಲ್ಲಿ ತಮ್ಮ ಮಗಳು ಹುಟ್ಟಿದ ನಂತರ, ವಿನೋದ್ ಕಾಂಬ್ಳಿ ಅವರನ್ನು ಮದ್ಯ ಚಟ ಬಿಡಿಸುವ ಪುನರ್ವಸತಿಗೆ ಕಳುಹಿಸಲಾಯಿತು. ಇಲ್ಲಿಯವರೆಗೆ ಅವರು 6-7 ಬಾರಿ ಅವರು ರಿಹ್ಯಾಬ್ಗೆ ಒಳಗಾಗಿದ್ದಾರೆ. ಆದರೆ ಕೋವಿಡ್-19 ಸಮಯದಲ್ಲಿ ಎಲ್ಲವೂ ಮುಚ್ಚಿದ್ದರಿಂದ ನಮ್ಮ ಯೋಜನೆಗಳೆಲ್ಲವೂ ಹದಗೆಟ್ಟಿತು. ಅಲ್ಲದೆ ವಿನೋದ್ ಕಾಂಬ್ಳಿ ಅವರ ಆರೋಗ್ಯದಲ್ಲೂ ಸಮಸ್ಯೆಗಳು ಕಂಡು ಬರಲಾರಂಭಿಸಿತು ಆ್ಯಂಡ್ರಿಯಾ ತಿಳಿಸಿದರು.
2023 ರಲ್ಲಿ, ವಿನೋದ್ ಕಾಂಬ್ಳಿ ಅವರು ಮಾನಸಿಕ ಸಮಸ್ಯೆಗೆ ಒಳಗಾದರು. ಹೀಗಾಗಿ ಮನೋವೈದ್ಯರಿಂದ ಚಿಕಿತ್ಸೆ ಪಡೆಯಲಾಯಿತು. ಆದರೆ ಇದಾಗ್ಯೂ ಅವರು ಕುಡಿತವನ್ನು ಬಿಡುವ ಸ್ಥಿತಿಯಲ್ಲಿರಲಿಲ್ಲ. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಎಂದು ಆಂಡ್ರಿಯಾ ಹೇಳಿದರು.
ಇದನ್ನೂ ಓದಿ: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದವರಲ್ಲಿ ಬಾಲಿವುಡ್ ನಿರ್ಮಾಪಕ ಪುತ್ರ
ಇದೀಗ ನಿಧಾನವಾಗಿ ಅವರು ಮತ್ತೆ ಚೇತರಿಸಿಕೊಳ್ಳುತ್ತಿದ್ದಾರೆ. ಆಕೃತಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಒಳಗಾಗಿದ್ದು, ಈ ವೇಳೆ ವೈದ್ಯರ ಸೂಚನೆಯನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಅವರು ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸವಿದೆ ಎಂದು ಆಂಡ್ರಿಯಾ ಹೆವಿಟ್ ಹೇಳಿದ್ದಾರೆ.
Published On - 1:16 pm, Thu, 9 January 25