ಮಾಜಿ ಕ್ರಿಕೆಟಿಗರೊಬ್ಬರನ್ನು ಅವರ ಮನೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶ್ರೀಲಂಕಾದ ಗಾಲೆ ನಗರದ ಅಂಬಲಂಗೋಡದಲ್ಲಿ ನಡೆದಿದೆ. 41 ವರ್ಷದ ಧಮ್ಮಿಕಾ ನಿರೋಶನ ಹತ್ಯೆಯಾದ ದುರ್ದೈವಿ ಕ್ರಿಕೆಟಗ ಎಂದು ತಿಳಿದುಬಂದಿದೆ. ನಿರೋಶನ ಅವರು ಶ್ರೀಲಂಕಾದ ಅಂಡರ್ 19 ತಂಡದ ನಾಯಕರೂ ಆಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ನಿರೋಶನ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿ ಮತ್ತು ಮಕ್ಕಳ ಎದುರೇ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದ್ದು, ಹತ್ಯೆ ಮಾಡಿದವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.
ನಿರೋಶನ ಅವರ ಕೊಲೆಗೆ ಕಾರಣವೇನು ಎಂಬುದು ಪೊಲೀಸರಿಗೆ ಇನ್ನೂ ಪತ್ತೆಯಾಗಿಲ್ಲ. ಆದರೆ ನಿರೋಶನ ಅವರ ಮೇಲೆ ಗುಂಡಿನ ದಾಳಿ ನಡೆದಾಗ ಆತನ ಪತ್ನಿ ಮತ್ತು ಮಕ್ಕಳು ಸಹ ಮನೆಯಲ್ಲಿದ್ದರು. ಆಗ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ಇದರಿಂದ ನಿರೋಶನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದುವರೆಗೂ ಅಪರಿಚಿತ ವ್ಯಕ್ತಿಯನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಸದ್ಯ ಪೊಲೀಸರು ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ನಿರೋಶನ ಅವರನ್ನು ಏಕೆ ಹತ್ಯೆ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ.
Former U-19 Cricketer Dhammika Niroshan, also known as ‘Jonty’ (41) shot dead in front of his residence in the area of Kandewatte in Ambalangoda last night says Police Media Spokesperson #LKA pic.twitter.com/agNmrhXa6u
— Sri Lanka Tweet 🇱🇰 (@SriLankaTweet) July 17, 2024
ಧಮ್ಮಿಕಾ ನಿರೋಶನ ಶ್ರೀಲಂಕಾದ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಸೀನಿಯರ್ ತಂಡದಲ್ಲಿ ಆಡುವ ಅವಕಾಶ ಅವರಿಗೆ ಎಂದಿಗೂ ಸಿಗಲಿಲ್ಲ. ಬಲಗೈ ವೇಗದ ಬೌಲರ್ ಆಗಿದ್ದ ಅವರು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಆಗಿದ್ದರು. ಅವರು 2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್ ಪರ 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ.
2000 ರಲ್ಲಿ ಶ್ರೀಲಂಕಾದ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ ನಿರೋಶನ ಅವರು ಶ್ರೀಲಂಕಾ ಅಂಡರ್ 19 ತಂಡದಲ್ಲಿ 2 ವರ್ಷಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು 10 ಪಂದ್ಯಗಳಲ್ಲಿ ನಾಯಕತ್ವವನ್ನೂ ವಹಿಸಿದ್ದರು. ಶ್ರೀಲಂಕಾದ ಅನೇಕ ದೊಡ್ಡ ಸ್ಟಾರ್ ಆಟಗಾರರಾದ ಏಂಜೆಲೊ ಮ್ಯಾಥ್ಯೂಸ್, ಉಪಲ್ ತರಂಗ ಅವರ ಅಂಡರ್ 19 ದಿನಗಳಲ್ಲಿ ಧಮ್ಮಿಕಾ ನಾಯಕತ್ವದಲ್ಲಿ ಆಡಿದ್ದಾರೆ. ಅಂತಿಮವಾಗಿ ನಿರೋಶನ ಡಿಸೆಂಬರ್ 2004 ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.
ಧಮ್ಮಿಕಾ ನಿರೋಶನ ಅವರು ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಮನ್ವಿಂದರ್ ಬಿಸ್ಲಾ ಅವರಿದ್ದ ಭಾರತೀಯ ಅಂಡರ್-19 ತಂಡದ ವಿರುದ್ಧ ಕ್ರಿಕೆಟ್ ಆಡಿದ್ದಾರೆ. 2002ರಲ್ಲಿ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾದ ಅಂಡರ್-19 ತಂಡದ ನಾಯಕತ್ವವನ್ನು ಧಮ್ಮಿಕಾ ನಿರೋಶನ ವಹಿಸಿದ್ದರು. ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಖಾತೆ ತೆರೆಯದೆ ವಿಕೆಟ್ ಚೆಲ್ಲಿದ ಅವರು ಬೌಲಿಂಗ್ನಲ್ಲಿ ಪ್ರಭಾವ ಬೀರಿರಲಿಲ್ಲ. ಈ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Wed, 17 July 24