RCB… ಅದೊಂದು ತಂಡವೇ ಅಲ್ಲ: ಮಾಜಿ ಆಟಗಾರ ಕಿಡಿ
IPL RCB: ಐಪಿಎಲ್ನಲ್ಲಿ ಕಳೆದ 17 ವರ್ಷಗಳಿಂದ ಕಣಕ್ಕಿಳಿಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಟ್ರೋಫಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮ ಹಣಾಹಣಿಯಲ್ಲಿ ಮುಗ್ಗರಿಸಿತ್ತು. ಹೀಗೆ ಪ್ರತಿ ಸೀಸನ್ನಲ್ಲೂ ಕಪ್ ಗೆಲ್ಲಲು ಸಾಧ್ಯವಾಗದೇ ಇರಲು ಕಾರಣವೇನು ಎಂಬುದನ್ನು ಆರ್ಸಿಬಿ ತಂಡದ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಬಹಿರಂಗಪಡಿಸಿದ್ದಾರೆ.
Updated on: Jul 17, 2024 | 2:19 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಕಪ್ ಗೆಲ್ಲದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಒಂದು. ಕಳೆದ 17 ವರ್ಷಗಳಿಂದ ಕಣಕ್ಕಿಳಿಯುತ್ತಿದ್ದರೂ, ಆರ್ಸಿಬಿ ಒಮ್ಮೆಯೂ ಟ್ರೋಫಿ ಎತ್ತಿ ಹಿಡಿಯದಿರಲು ಕಾರಣವೇನು ಎಂಬುದನ್ನು ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಬಹಿರಂಗಪಡಿಸಿದ್ದಾರೆ.

ಸೈರಸ್ ಸೇಸ್ ಪಾಡ್‌ಕ್ಯಾಸ್ಟ್‌ನಲ್ಲಿನ ಮಾತನಾಡಿದ ಪಾರ್ಥೀವ್ ಪಟೇಲ್, ಆರ್ಸಿಬಿ ಯಾವತ್ತೂ ತಂಡವಾಗಿ ಆಡಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲಿ ಯಾವಾಗಲೂ ವೈಯುಕ್ತಿಕದ ಬಗ್ಗೆ ಯೋಚಿಸುತ್ತಾರೆ ಹೊರತು ತಂಡದ ಬಗ್ಗೆ ಅಲ್ಲ. ಹೀಗಾಗಿಯೇ ಆರ್ಸಿಬಿ ತಂಡದಿಂದ ಎಲ್ಲರೂ ಹೊರಬರುತ್ತಿರುತ್ತಾರೆ ಎಂದಿದ್ದಾರೆ.

ನಾನು 4 ವರ್ಷಗಳ ಕಾಲ RCB ಪರ ಆಡಿದ್ದೇನೆ. ಆ ತಂಡವು ಯಾವಾಗಲೂ ವ್ಯಕ್ತಿಗಳ ಬಗ್ಗೆ ಯೋಚಿಸುತ್ತಾರೆ. ಅಲ್ಲಿ ತಂಡದ ಪ್ರದರ್ಶನದ ಬಗ್ಗೆ ಯಾರಿಗೂ ಚಿಂತೆಯಿಲ್ಲ. ನಾನಿದ್ದಾಗ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಇದ್ದರು. ಆ ಸಮಯದಲ್ಲಿ ಈ ಮೂವರಿಗೆ ಪ್ರಾಶಸ್ತ್ಯ ನೀಡಲಾಗುತ್ತಿತ್ತು ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ.

ಒಂದು ತಂಡದಲ್ಲಿ ಉತ್ತಮ ಹೊಂದಾಣಿಕೆ ಇರಬೇಕು. ಆದರೆ ಆರ್ಸಿಬಿ ತಂಡದಲ್ಲಿ ಟೀಮ್ ಕಲ್ಚರ್ ಎಂಬುದೇ ಇಲ್ಲ. ಅಲ್ಲಿ ಕೆಲವರ ಪ್ರಾಶಸ್ತ್ಯ ಮುಖ್ಯವಾಗುತ್ತದೆ. ಒಗ್ಗಟ್ಟಿನಿಂದ ಗೆಲ್ಲಬೇಕೆಂಬ ಧ್ಯೇಯ ಎಂಬುದೇ ಇಲ್ಲ. ಹೀಗಾಗಿಯೇ 17 ವರ್ಷ ಕಳೆದರೂ ಆರ್ಸಿಬಿ ತಂಡ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ. ಇದೀಗ ಆರ್ಸಿಬಿ ಮಾಜಿ ಆಟಗಾರನ ಹೇಳಿಕೆಯು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿದೆ.

ಅಂದಹಾಗೆ ಪಾರ್ಥೀವ್ ಪಟೇಲ್ ಆರ್ಸಿಬಿ ಪರ 32 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 562 ಎಸೆತಗಳನ್ನು ಎದುರಿಸಿದ್ದ ಪಾರ್ಥೀವ್ 4 ಅರ್ಧಶತಕಗಳೊಂದಿಗೆ 731 ರನ್ ಕಲಹಾಕಿದ್ದರು. ಇದೇ ವೇಳೆ 98 ಫೋರ್ ಹಾಗೂ 15 ಸಿಕ್ಸ್ಗಳನ್ನು ಸಹ ಬಾರಿಸಿದ್ದರು.
