2023ರ ಏಕದಿನ ವಿಶ್ವಕಪ್ (ICC World Cup 2023) ಹಂತಿಮ ಘಟಕ್ಕೆ ಬಂದು ನಿಂತಿದೆ. ನಾಳೆ ಅಂದರೆ ಭಾನುವಾರ ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಈ ಮಹಾ ಟೂರ್ನಿಯ ಪಯಣ ಕೊನೆಗೊಳ್ಳಲಿದೆ. ಆತಿಥೇಯ ಭಾರತ ಹಾಗೂ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ (India Vs Australia) ವಿಶ್ವ ವಿಜೇತರೆನಿಸಿಕೊಳ್ಳಲು ನರೇಂದ್ರ ಮೋದಿ ಮೈದಾನದಲ್ಲಿ ಕಣಕ್ಕಿಳಿಯುತ್ತಿವೆ. ಆದರೆ ಅದಕ್ಕೂ ಮುನ್ನ ಈ ಟೂರ್ನಿಯ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗಾಗಿ (ICC Player of Tournament award) 9 ಆಟಗಾರರನ್ನು ಐಸಿಸಿ ನಾಮನಿರ್ದೇಶನ ಮಾಡಿದೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ. ಆದರೆ ಈ ಬಗ್ಗೆ ಐಸಿಸಿ (ICC) ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗು ಹಂಚಿಕೊಂಡಿಲ್ಲ. ಇನ್ನು ಇಂಡಿಯಾ ಟಿವಿ ವರದಿ ಪ್ರಕಾರ ನಾಮನಿರ್ದೇಶನಗೊಂಡಿರುವ 9 ಆಟಗಾರರನ್ನು ನೋಡುವುದಾದರೆ..
ಈ 9 ಆಟಗಾರರ ಪೈಕಿ ಟೀಂ ಇಂಡಿಯಾದಿಂದ ನಾಲ್ವರು ಆಟಗಾರರು ಇದ್ದರೆ, ಇವರಲ್ಲದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ತಲಾ 2 ಆಟಗಾರರು ಮತ್ತು ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ.
‘ನಮ್ಮಲ್ಲೇ ತಪ್ಪಿದೆ’; ರಣತುಂಗ ಆರೋಪಕ್ಕೆ ಜಯ್ ಶಾ ಬಳಿ ಕ್ಷಮೆಯಾಚಿಸಿದ ಶ್ರೀಲಂಕಾ ಸರ್ಕಾರ
ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ಆಟಗಾರರಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಹೆಸರುಗಳು ಸೇರಿವೆ. ಟೂರ್ನಿಯುದ್ದಕ್ಕೂ ಇವರೆಲ್ಲರಿಂದಲೂ ಉತ್ತಮ ಪ್ರದರ್ಶನ ಕಂಡುಬಂದಿದ್ದು, ಬ್ಯಾಟಿಂಗ್ನಲ್ಲಿ ಅಬ್ಬರಿಸಿರುವ ವಿರಾಟ್ ಕೊಹ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ ಕೂಡ ತಂಡಕ್ಕೆ ಅಬ್ಬರದ ಆರಂಭವನ್ನು ನಿರಂತರವಾಗಿ ನೀಡುತ್ತಿದ್ದು, 500 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಶಮಿ, ಪ್ರಸ್ತುತ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬುಮ್ರಾ ಕೂಡ ಇಲ್ಲಿಯವರೆಗೆ ಮ್ಯಾಚ್ ವಿನ್ನಿಂಗ್ ಬೌಲರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಇತರ ದೇಶಗಳ ಆಟಗಾರರ ಬಗ್ಗೆ ಹೇಳುವುದಾದರೆ, ಆಸೀಸ್ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಮತ್ತು ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಝಂಪಾ 22 ವಿಕೆಟ್‌ಗಳೊಂದಿಗೆ ಇದುವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮ್ಯಾಕ್ಸ್‌ವೆಲ್ ಕೂಡ ಬ್ಯಾಟ್ ಜೊತೆಗೆ ಚೆಂಡಿನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರೊಂದಿಗೆ ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಅವರೂ ಸಹ ಟೂರ್ನಮೆಂಟ್ ಆಟಗಾರರ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದಾರೆ.
ರಚಿನ್ ರವೀಂದ್ರ ತಮ್ಮ ಮೊದಲ ವಿಶ್ವಕಪ್‌ನಲ್ಲಿಯೇ 64.22 ಸರಾಸರಿಯಲ್ಲಿ 578 ರನ್ ಕಲೆಹಾಕುವ ಮೂಲಕ ಅನೇಕ ಹೊಸ ದಾಖಲೆಗಳನ್ನು ಬರೆದಿದ್ದಾರೆ. ಡೇರಿಲ್ ಮಿಚೆಲ್ ಕೂಡ 69 ರ ಸರಾಸರಿಯಲ್ಲಿ 552 ರನ್ ಬಾರಿಸಿದ್ದರು. ಟೂರ್ನಿಯಲ್ಲಿ ನಾಲ್ಕು ಶತಕ ಸೇರಿದಂತೆ 59.40 ಸರಾಸರಿಯಲ್ಲಿ 594 ರನ್ ಬಾರಿಸಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:26 am, Sat, 18 November 23