ಟಿ20 ವಿಶ್ವಕಪ್ (T20 World Cup 2022) ಸೂಪರ್ 12 ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 8 ವಿಕೆಟ್ ನಷ್ಟಕ್ಕೆ 130 ರನ್ ಟಾರ್ಗೆಟ್ ಸೆಟ್ ಮಾಡಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಬಾಬರ್ ಪಡೆ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್ಗಳಿಸಲಷ್ಟೇ ಶಕ್ತವಾಗಿ ಕೇವಲ 1 ರನ್ಗಳಿಂದ ಸೋಲೊಪ್ಪಿಕೊಂಡಿತು. ಪಾಕ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದ ಜಿಂಬಾಬ್ವೆ ತಂಡಕ್ಕೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಜಿಂಬಾಬ್ವೆ ದೇಶದ ಅಧ್ಯಕ್ಷರಾದ ಎಮರ್ಸನ್ ಕೂಡ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಪಾಕ್ ತಂಡವನ್ನು ಹೀಯಾಳಿಸಿ ಟ್ವೀಟ್ ಮಾಡಿದ್ದರು. ಈಗ ಜಿಂಬಾಬ್ವೆ ಅಧ್ಯಕ್ಷರ ಟ್ವೀಟ್ಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ವಾಸ್ತವವಾಗಿ, ಪಾಕ್ ಎದುರು ಜಿಂಬಾಬ್ವೆ ಗೆದ್ದ ಬಳಿಕ ಟ್ವೀಟ್ ಮಾಡಿದ್ದ ಅಧ್ಯಕ್ಷ ಎಮರ್ಸನ್ ದಂಬುಡ್ಜೊ ಮ್ನಂಗಾಗ್ವಾ, ಜಿಂಬಾಬ್ವೆಗೆ ಎಂತಹ ಅದ್ಭುತ ಗೆಲುವು, ತಂಡದ ಆಟಗಾರರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. ಹಾಗೆಯೇ ಇದರ ಜೊತೆಗೆ ಪಾಕಿಸ್ತಾನದ ಕಾಲೆಳೆದಿದ್ದ ಎಮರ್ಸನ್, ಮುಂದಿನ ಬಾರಿ ನಿಜವಾದ ಮಿಸ್ಟರ್ ಬೀನ್ ಅನ್ನು ಕಳುಹಿಸಿ ಎಂದು ಟ್ವೀಟ್ನಲ್ಲಿ ಸೇರಿಸಿದ್ದರು.
ಈಗ ಜಿಂಬಾಬ್ವೆ ಅಧ್ಯಕ್ಷರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್, ನಮ್ಮಲ್ಲಿ ನಿಜವಾದ ಮಿಸ್ಟರ್ ಬೀನ್ ಇಲ್ಲದಿರಬಹುದು, ಆದರೆ ನಮ್ಮಲ್ಲಿ ನಿಜವಾದ ಕ್ರಿಕೆಟ್ ಸ್ಪಿರಿಟ್ ಇದೆ. ಹಾಗೆಯೇ ಪಾಕಿಸ್ತಾನಿಗಳಿಗೆ ಬೌನ್ಸ್ ಬ್ಯಾಕ್ ಮಾಡುವ ಫನ್ನಿ ಹ್ಯಾಬಿಟ್ ಕೂಡ ಇದೆ ಎಂದು ಟ್ವೀಟ್ ಮಾಡುವ ಮೂಲಕ ತೀರುಗೇಟು ನೀಡಿದ್ದಾರೆ. ಜೊತೆಗೆ ಜಿಂಬಾಬ್ವೆ ತಂಡದ ಆಟಕ್ಕೆ ಅಭಿನಂದನೆಗಳನ್ನು ಸಲ್ಲಿಸಿರುವ ಪಾಕ್ ಪ್ರಧಾನಿ, ಮಿಸ್ಟರ್ ಪ್ರೆಸಿಡೆಂಟ್ ನಿಮ್ಮ ತಂಡ ತುಂಬಾ ಚೆನ್ನಾಗಿ ಆಡಿದೆ ಎಂದು ಬರೆದುಕೊಂಡಿದ್ದಾರೆ.
We may not have the real Mr Bean, but we have real cricketing spirit .. and we Pakistanis have a funny habit of bouncing back 🙂
Mr President: Congratulations. Your team played really well today. ? https://t.co/oKhzEvU972
— Shehbaz Sharif (@CMShehbaz) October 27, 2022
ಏನಿದು ಮಿಸ್ಟರ್ ಬೀನ್ ರಾದ್ಧಾಂತ?
ವಾಸ್ತವವಾಗಿ, ಜಿಂಬಾಬ್ವೆ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ಆರಂಭವಾಗುವ ಮುಂಚೆಯೇ ಎರಡೂ ತಂಡಗಳ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದರು. ಹಾಗೆಯೇ ಪಂದ್ಯಕ್ಕೂ ಮೊದಲು, ಪಾಕಿಸ್ತಾನ ತಂಡ ಅಭ್ಯಾಸ ನಡೆಸಿದ ಕೆಲವು ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಈ ಪೋಸ್ಟ್ಗೆ, ಜಿಂಬಾಬ್ವೆಯ ನಗುಗಿ ಚಸೂರ ಎಂಬ ನೆಟ್ಟಿಗ, ಮಿಸ್ಟರ್ ಬೀನ್ ವಿಚಾರವನ್ನು ಮುನ್ನೆಲೆಗೆ ತಂದು ಬಾಬರ್ ಪಡೆಗೆ ಸೋಲು ಖಚಿತ ಎಂಬುದನ್ನು ಪ್ರಸ್ತಾಪಿಸಿದ್ದ.
ಈತ ತನ್ನ ಟ್ವೀಟ್ನಲ್ಲಿ ಜಿಂಬಾಬ್ವೆಯ ಪ್ರಜೆಯಾಗಿ ನಾವು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಒಮ್ಮೆ ನೀವು ನಿಜವಾದ ಮಿಸ್ಟರ್ ಬೀನ್ ಬದಲಿಗೆ ನಕಲಿ ಪಾಕ್ ಬೀನ್ ಅವರನ್ನು ನಮಗೆ ತೋರಿಸಿದ್ದೀರಿ. ನಿಮ್ಮ ಈ ಹಳೆಯ ಲೆಕ್ಕವನ್ನು ನಾಳಿನ ಪಂದ್ಯದಲ್ಲಿ ಚುಕ್ತಾ ಮಾಡುತ್ತೇವೆ. ಸದ್ಯಕ್ಕೆ ನೀವಿಗ, ಮಳೆ ನಿಮ್ಮನ್ನು ಸೋಲಿನಿಂದ ಪಾರು ಮಾಡಲಿ ಎಂದು ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿದ್ದ. ಹೀಗಾಗಿ ಪಾಕ್ ತಂಡ ಈ ಪಂದ್ಯದಲ್ಲಿ ಸೋತ ಬಳಿಕ ಈ ಟ್ವೀಟ್ ಸಖತ್ ಟ್ರೇಂಡ್ ಕ್ರಿಯೇಟ್ ಮಾಡಿತ್ತು. ಹಾಗೆಯೇ ಹಲವು ನೆಟ್ಟಿಗರು ಇದೇ ಟ್ವೀಟನ್ನು ರೀಪೋಸ್ಟ್ ಮಾಡಿದ್ದರು. ಆ ಬಳಿಕ ‘ಫ್ರಾಡ್ ಪಾಕ್ ಮಿಸ್ಟರ್ ಬೀನ್’ ಸಖತ್ ಟ್ರೆಂಡ್ ಆಗಿತ್ತು.
As Zimbabweans we wont forgive you…you once gave us that Fraud Pak Bean instead of Mr Bean Rowan ..we will settle the matter tommorow just pray the rains will save you…#ZIMVSPAK
— Ngugi Chasura (@mhanduwe0718061) October 25, 2022
ನಕಲಿ ಮಿಸ್ಟರ್ ಬೀನ್ ತೋರಿಸಿದ್ದೆ ಇದಕ್ಕೆ ಕಾರಣ
ಫ್ರಾಡ್ ಪಾಕ್ ಮಿಸ್ಟರ್ ಬೀನ್ ಇಷ್ಟೊಂದು ವೈರಲ್ ಆಗಲು ಪ್ರಮುಖವಾಗಿ 2016ರಲ್ಲಿ ನಡೆದಿದ್ದ ಅದೊಂದು ಘಟನೆ ಪ್ರಮುಖ ಕಾರಣವಾಗಿತ್ತು. ವರದಿಗಳ ಪ್ರಕಾರ, 2016 ರಲ್ಲಿ ಜಿಂಬಾಬ್ವೆಯ ಹರಾರೆಯಲ್ಲಿ ನಡೆದಿದ್ದ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ನಲ್ಲಿ ಪಾಕ್ ಮೂಲದ ಹಾಸ್ಯನಟರಾಗಿರುವ ಹಾಗೂ ಪಾಕಿಸ್ತಾನದಲ್ಲಿ ಹಾಸ್ಯನಾಟರಾಗಿ ಸಾಕಷ್ಟು ಪ್ರಸಿದ್ಧರಾಗಿರುವ ಆಸಿಫ್ ಮೊಹಮ್ಮದ್ ಎಂಬುವವರು ಮಿಸ್ಟರ್ ಬೀನ್ ಹೆಸರಲ್ಲಿ ಹಾಸ್ಯ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದರು. ಆದರೆ, ನಕಲಿ ಮಿಸ್ಟರ್ ಬೀನ್ ಎಂಬ ಸತ್ಯವರಿತ ಜಿಂಬಾಬ್ವೆ ಜನ ಈ ಕಾರ್ಯಕ್ರಮವನ್ನು ಅರ್ಧಕ್ಕೆ ತೊರೆದಿದ್ದರು. ಅಲ್ಲದೆ ಈ ನಕಲಿ ಬಿನ್ ಕಾರ್ಯಕ್ರಮವನ್ನು ಆಯೋಜಿಸಲು ನಮ್ಮ ಹಣವನ್ನು ವ್ಯರ್ಥ ಮಾಡಲಾಗಿದೆ ಎಂದು ಆಕ್ರೋಶಗೊಂಡಿದ್ದ ಜಿಂಬಾಬ್ವೆ ಜನ ಪಾಕಿಸ್ತಾನ ನಮಗೆ ವಂಚಿಸಿದೆ ಎಂದು ಆರೋಪಿಸಿದ್ದರು.
ಈಗ ಪಾಕ್ ತಂಡ ಜಿಂಬಾಬ್ವೆ ಎದುರು ಸೋತಿರುವ ಈ ಸಂದರ್ಭವನ್ನು ಬಳಸಿಕೊಂಡಿರುವ ಜಿಂಬಾಬ್ವೆ ಜನ, 2016 ರಂದು ನಡೆದಿದ್ದ ಮಿಸ್ಟರ್ ಬಿನ್ ಕಾರ್ಯಕ್ರಮದ ಫೋಟೋಗಳನ್ನು ವೈರಲ್ ಮಾಡುವುದರೊಂದಿಗೆ ಪಾಕಿಸ್ತಾನದ ವಂಚನೆಯನ್ನು ಜಗತ್ತಿನ ಮುಂದೆ ತೆರೆದಿಡುತ್ತಿದ್ದಾರೆ.
Published On - 11:56 am, Fri, 28 October 22