ಗಂಭೀರ್ ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದರು: ಶ್ರೀಶಾಂತ್ ಗಂಭೀರ ಆರೋಪ 

Gautam Gambhir vs Sreesanth: ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಶ್ರೀಶಾಂತ್ ಹಾಗೂ ಗೌತಮ್ ಗಂಭೀರ್ ನಡುವಣ ಸ್ನೇಹ ಅಷ್ಟಕ್ಕಷ್ಟೇ ಎಂಬುದು ಈ ಹಿಂದೆಯೇ ಜಗಜ್ಜಾಹೀರಾಗಿತ್ತು. ಅದರಲ್ಲೂ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಈ ಇಬ್ಬರು ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಈ ಕಿತ್ತಾಟದ ವೇಳೆ ಗಂಭೀರ್ ನನ್ನನ್ನು ವೈಯುಕ್ತಿಕವಾಗಿ ನಿಂದಿಸಿದ್ದಾರೆ ಎಂದು ಶ್ರೀಶಾಂತ್ ಗಂಭೀರ ಆರೋಪ ಮಾಡಿದ್ದಾರೆ.

ಗಂಭೀರ್ ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದರು: ಶ್ರೀಶಾಂತ್ ಗಂಭೀರ ಆರೋಪ 
Gambhir - Sreesanth
Image Credit source: Google

Updated on: Jun 20, 2026 | 11:59 AM

ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಗೌತಮ್ ಗಂಭೀರ್ ಹಾಗೂ ಎಸ್​. ಶ್ರೀಶಾಂತ್ ನಡುವಿನ ಹಳೆಯ ಜಗಳ ಮತ್ತೆ ಮುನ್ನಲೆಗೆ ಬಂದಿದೆ. ಹೀಗೆ ಹಳೆಯ ಕಿತ್ತಾಟದ ಮುನ್ನಲೆಗೆ ಬರಲು ಮುಖ್ಯ ಕಾರಣ ಶ್ರೀಶಾಂತ್ ಇತ್ತೀಚೆಗೆ ನೀಡಿದ ಹೇಳಿಕೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶ್ರೀಶಾಂತ್, ಗೌತಮ್ ಗಂಭೀರ್ ತನ್ನ ವಿರುದ್ಧ ಅತ್ಯಂತ ಅಸಭ್ಯ ಪದಗಳನ್ನು ಬಳಸಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್​ ಟೂರ್ನಿಯಲ್ಲಿ ಗೌತಮ್ ಗಂಭೀರ್ ಇಂಡಿಯಾ ಕ್ಯಾಪಿಟಲ್ಸ್​ ಹಾಗೂ ಶ್ರೀಶಾಂತ್ ಗುಜರಾತ್ ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಈ ಪಂದ್ಯದ ವೇಳೆ ಗಂಭೀರ್ ಕ್ರೀಸ್‌ನಿಂದ ಮುಂದೆ ಬಂದು ಶಾರ್ಟ್ ಬಾರಿಸಿದ್ದರು. ಇದಕ್ಕೆ ಪ್ರತಿಯಾಗಿ ಶ್ರೀಶಾಂತ್ ತೀಕ್ಷ್ಣವಾದ ಬೌನ್ಸರ್ ಎಸೆದಿದ್ದರು. ಇದರಿಂದ ಕೆರಳಿ ಕೆಂಡವಾದ ಗೌತಮ್ ಗಂಭೀರ್ ವೈಯುಕ್ತಿಕ ನಿಂದನೆಗೆ ಇಳಿದಿದ್ದರು.

ಈ ಬಗ್ಗೆ ಮಾತನಾಡಿದ ಶ್ರೀಶಾಂತ್, ಅಂದು ಗೌತಮ್ ಗಂಭೀರ್, ತನನ್ನು “ದೇಶದ್ರೋಹಿ” ಎಂದು ನಿಂದಿಸಿದ್ದರು. ಈ ನಿಂದನೆ ಅಷ್ಟಕ್ಕೆ ನಿಲ್ಲಲಿಲ್ಲ. ಬದಲಾಗಿ “ಫಿಕ್ಸರ್” ಎಂದು ಕರೆದು ಅವಮಾನಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಗೌತಮ್ ಗಂಭೀರ್ ಈ ಪಂದ್ಯದ ವೇಳೆ ತನ್ನ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದಷ್ಟೇ ಅಲ್ಲದೆ, ಅಸಭ್ಯವಾದ ‘ಎಫ್-ವರ್ಡ್’ (F-Word) ಅನ್ನು ನಿರಂತರವಾಗಿ ಬಳಸುತ್ತಿದ್ದರು ಎಂಬ ವಿಚಾರವನ್ನು ಶ್ರೀಶಾಂತ್ ಬಹಿರಂಗಪಡಿಸಿದ್ದಾರೆ.

ಕೋಚ್​ ಹುದ್ದೆಯಿಂದ ಕೆಳಗಿಳಿಸಿ:

ಈ ಗಂಭೀರ ಆರೋಪಗಳೊಂದಿಗೆ ಮಾತು ಮುಂದುವರೆಸಿದ ಶ್ರೀಶಾಂತ್, ಗೌತಮ್ ಗಂಭೀರ್ ಅವರ ಕೋಚಿಂಗ್​ನಿಂದ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸುತ್ತಿದೆ. ಇದಕ್ಕೆ ಸಾಕ್ಷಿ ಭಾರತ ಟೆಸ್ಟ್ ತಂಡದ ಕಳಪೆ ಪ್ರದರ್ಶನ. ಗಂಭೀರ್ ಅವರ ಕೆಟ್ಟ ನಡವಳಿಕೆ ಮತ್ತು ಸಾಂಪ್ರದಾಯಿಕ ಕೋಚಿಂಗ್ ಶೈಲಿಯಿಂದಾಗಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಸಬೇಕು ಎಂದು ಶ್ರೀಶಾಂತ್ ಆಗ್ರಹಿಸಿದ್ದಾರೆ.

ಕೋಚ್ ಯಾರಾಗಬೇಕು?

ಗೌತಮ್ ಗಂಭೀರ್ ಅವರ ನಡವಳಿಕೆ ಸರಿಯಿಲ್ಲ. ಅವರು ಕೋಚ್ ಹುದ್ದೆಗೆ ಸೂಕ್ತ ವ್ಯಕ್ತಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಶ್ರೀಶಾಂತ್, ಮಹೇಂದ್ರ ಸಿಂಗ್ ಧೋನಿಗೆ ಭಾರತ ತಂಡದ ಹೆಡ್ ಕೋಚ್ ಸ್ಥಾನ ಅಥವಾ ಮೆಂಟರ್ ಸ್ಥಾನ ನೀಡುವುದು ಉತ್ತಮ ಎಂದಿದ್ದಾರೆ.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿ ಕಂಬ್ಯಾಕ್ ಯಾವಾಗ?

ಏಕೆಂದರೆ ಟೀಮ್ ಇಂಡಿಯಾಗೆ ಈಗ ಕಠಿಣ ಕೋಚ್‌ಗಿಂತ ಹೆಚ್ಚಾಗಿ ಆಟಗಾರರನ್ನು ಪ್ರೀತಿಯಿಂದ ಮುನ್ನಡೆಸುವ ಎಂಎಸ್ ಧೋನಿ ಅವರಂತಹ ‘ಮೆಂಟರ್’ ಅಗತ್ಯವಿದೆ. ಹೀಗಾಗಿ ಗೌತಮ್ ಗಂಭೀರ್ ಅವರನ್ನು ಕೆಳಗಿಳಿಸಿ ಆ ಹುದ್ದೆಯಲ್ಲಿ ಧೋನಿ ಅವರನ್ನು ತಂದು ಕೂರಿಸಬೇಕು ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.

 

Follow Us