ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದರ ಬೆನ್ನಲ್ಲೇ ಭಾರತ ಟಿ20 ತಂಡದ ಮುಂದಿನ ಯಾರು ಪ್ರಶ್ನೆಗೆ ಕೇಳಿ ಬಂದ ಉತ್ತರ ಹಾರ್ದಿಕ್ ಪಾಂಡ್ಯ. ಟಿ20 ವಿಶ್ವಕಪ್ನಲ್ಲಿ ಉಪನಾಯಕನಾಗಿದ್ದರಿಂದ ಹಾರ್ದಿಕ್ಗೆ ನಾಯಕತ್ವ ಒಲಿಯುವುದು ಬಹುತೇಕ ಖಚಿತವಾಗಿತ್ತು. ಆದರೆ ಕೋಚ್ ಗೌತಮ್ ಗಂಭೀರ್ ಎಂಟ್ರಿಯೊಂದಿಗೆ ಎಲ್ಲವೂ ಬದಲಾಗಿದೆ.
ನಾಯಕನ ಸ್ಥಾನಕ್ಕೆ ಈವರೆಗೆ ಕೇಳಿ ಬರದಿದ್ದ ಸೂರ್ಯಕುಮಾರ್ ಹೆಸರು ಮುಂಚೂಣಿಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ತೆರೆಮರೆಯ ಶಿಫಾರಸ್ಸು ಎನ್ನಲಾಗುತ್ತಿದೆ. ಏಕೆಂದರೆ ಆಯ್ಕೆ ಸಮಿತಿ ಸದಸ್ಯರು ಹಾರ್ದಿಕ್ ಪಾಂಡ್ಯ ಅವರನ್ನೇ ನಾಯಕರನ್ನಾಗಿ ಮಾಡಲು ತುದಿಗಾಲಲ್ಲಿ ನಿಂತಿದ್ದರು.
ಆದರೆ ನೂತನ ಕೋಚ್ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯಗಳಲ್ಲಿ ಕೆಲ ಮುಖ್ಯ ವಿಷಯಗಳನ್ನು ಆಯ್ಕೆ ಸಮಿತಿಯ ಮುಂದಿಟ್ಟಿದ್ದಾರೆ. ಈ ಮುಖ್ಯ ವಿಷಯಗಳಲ್ಲಿ ಪಾಂಡ್ಯ ಅವರ ಫಿಟ್ನೆಸ್ ಸಮಸ್ಯೆ ಕೂಡ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಪರ ಖಾಯಂ ಆಗಿ ಕಾಣಿಸಿಕೊಳ್ಳುವ ಆಟಗಾರನಿಗೆ ನಾಯಕತ್ವ ನೀಡುವಂತೆ ಗಂಭೀರ್ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಚರ್ಚೆಯ ನಡುವೆ ಗೌತಮ್ ಗಂಭೀರ್ ಎಲ್ಲಿಯೂ ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ನೀಡುವಂತೆ ಬೇಡಿಕೆಯಿಟ್ಟಿಲ್ಲ. ಬದಲಾಗಿ ಹಾರ್ದಿಕ್ ಪಾಂಡ್ಯ ನಾಯಕನಾದರೆ, ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ಗಂಭೀರ್ ಖಂಡತುಂಡವಾಗಿ ಹೇಳಿದ್ದಾರೆ.
ಇದೇ ಕಾರಣದಿಂದಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಇಂಡಿಯಾ ಟಿ20 ತಂಡದ ನಾಯಕನಾಗಿ ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿದೆ ಎಂದು ವರದಿಗಳು ಹೇಳಿವೆ.
ಭಾರತ ತಂಡದ ನಾಯಕನ ನೇಮಕದಲ್ಲಾದ ಕೊನೆಯ ಕ್ಷಣದ ಬದಲಾವಣೆಯ ಬಗ್ಗೆ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇದೇ ವೇಳೆ ಪಾಂಡ್ಯಗೆ ನಾಯಕತ್ವದ ಬದಲಾವಣೆ ಏಕೆ ಎಂಬುದನ್ನು ಮನವರಿಕೆ ಮಾಡಿಕೊಡಲು ಗಂಭೀರ್ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಆಯ್ಕೆಯಾಗುವುದು ಬಹುತೇಕ ಖಚಿತ. ಅಲ್ಲದೆ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ರೋಹಿತ್ ಶರ್ಮಾ ಮುಂದುವರೆಯಲಿದ್ದಾರೆ.
Published On - 2:13 pm, Thu, 18 July 24