2011ರ ಏಕದಿನ ವಿಶ್ವಕಪ್ ಗೆಲುವಿನ ಶ್ರೇಯಸ್ಸನ್ನು ಎಲ್ಲಾ ಆಟಗಾರರಿಗೆ ನೀಡಲಾಗುತ್ತಿಲ್ಲ ಎಂಬ ಹೇಳಿಕೆಯನ್ನು ಗೌತಮ್ ಗಂಭೀರ್ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ. ಈ ಹಿಂದೆ ಇದೇ ಮಾದರಿಯ ಹೇಳಿಕೆ ಮೂಲಕ ಗಮನ ಸೆಳೆದಿದ್ದ ಗಂಭೀರ್, ಈ ಬಾರಿ ಏಕದಿನ ವಿಶ್ವಕಪ್ ಗೆಲುವಿನ ಹಿಂದೆ ಇರುವುದು ಯುವರಾಜ್ ಸಿಂಗ್ ಅವರ ಅದ್ಭುತ ಪ್ರದರ್ಶನ ಎಂಬುದನ್ನು ಒತ್ತಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, 2011 ವಿಶ್ವಕಪ್ ಗೆಲುವಿನ ವಿಷಯಕ್ಕೆ ಬಂದಾಗ ಅದರ ಶ್ರೇಯಸ್ಸು ಯುವರಾಜ್ ಸಿಂಗ್ ಅವರಿಗೆ ನೀಡಲಾಗುತ್ತಿಲ್ಲ. ಬದಲಿಗೆ ಮಾಧ್ಯಮಗಳು ಎಂಎಸ್ ಧೋನಿ ಅವರ ಫೈನಲ್ ಸಿಕ್ಸ್ ಅನ್ನು ತೋರಿಸುತ್ತಿದೆ. ಆದರೆ ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯುವರಾಜ್ ವಿಶ್ವಕಪ್ ಗೆಲುವಿನ ರೂವಾರಿಯಾಗಿದ್ದಾರೆ. ಇದಾಗ್ಯೂ ಒಂದು ಸಿಕ್ಸ್ ಅನ್ನು ದೊಡ್ಡದಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದ್ದಾರೆ.
2011 ರ ಏಕದಿನ ವಿಶ್ವಕಪ್ನ ಪ್ರದರ್ಶನವನ್ನೇ ಗಮನಿಸಿ, ಅಲ್ಲಿ ಯುವರಾಜ್ ಸಿಂಗ್, ಝಹೀರ್ ಖಾನ್, ಸುರೇಶ್ ರೈನಾ ಮತ್ತು ಮುನಾಫ್ ಪಟೇಲ್ ಸೇರಿದಂತೆ ಇತರರು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ನಾವು ಅದರ ಬಗ್ಗೆ ಯಾವತ್ತಾದರೂ ಮಾತನಾಡುತ್ತೇವೆಯೇ? ಎಂದು ಗಂಭೀರ್ ಪ್ರಶ್ನಿಸಿದ್ದಾರೆ.
ಇಲ್ಲಿ ಪ್ರತಿ ಬಾರಿಯು ಏಕದಿನ ವಿಶ್ವಕಪ್ ಗೆಲುವನ್ನು ಪ್ರತಿನಿಧಿಸುತ್ತಿರುವುದು ಎಂಎಸ್ ಧೋನಿಯ ಸಿಕ್ಸರ್. ಯಾವಾಗಲೂ ಅದರ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ಆದರೆ ಒಬ್ಬ ವ್ಯಕ್ತಿಯ ಗೀಳಿನಿಂದಾಗಿ ಇಲ್ಲಿ ಇಡೀ ತಂಡದ ಪ್ರದರ್ಶನವನ್ನೇ ಮರೆತಿದ್ದೀರಿ ಎಂದು ನೆನಪಿರಲಿ ಎಂದು ಗಂಭೀರ್ ಹೇಳಿದ್ದಾರೆ.
ಹೇಗಿತ್ತು ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ:
ಗೌತಮ್ ಗಂಭೀರ್ ಅವರ ಹೇಳಿಕೆಯಂತೆ 2011 ರ ಏಕದಿನ ವಿಶ್ವಕಪ್ ಗೆಲುವಿನ ರೂವಾರಿಗಳೆಂದರೆ ಯುವರಾಜ್ ಸಿಂಗ್, ಝಹೀರ್ ಖಾನ್ ಮತ್ತು ಸಚಿನ್ ತೆಂಡೂಲ್ಕರ್. ಏಕೆಂದರೆ 9 ಪಂದ್ಯಗಳಿಂದ ಯುವಿ 15 ವಿಕೆಟ್ ಹಾಗೂ 362 ರನ್ಗಳನ್ನು ಕಲೆಹಾಕಿದ್ದರು.
ಇನ್ನು ಝಹೀರ್ ಖಾನ್ ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ 9 ಪಂದ್ಯಗಳಿಂದ ಒಟ್ಟು 21 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಹಾಗೆಯೇ ಸಚಿನ್ ತೆಂಡೂಲ್ಕರ್ 9 ಪಂದ್ಯಗಳಿಂದ ಒಟ್ಟು 482 ರನ್ ಕಲೆಹಾಕಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು.
ಇದನ್ನೂ ಓದಿ: ODI World Cup 2023 Schedule: ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಇನ್ನು ಮಹೇಂದ್ರ ಸಿಂಗ್ ಧೋನಿ 9 ಪಂದ್ಯಗಳಿಂದ ಒಟ್ಟು 241 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಈ ಎಲ್ಲಾ ಕಾರಣಗಳಿಂದಾಗಿಯೇ ವಿಶ್ವಕಪ್ ಗೆಲುವಿನ ಶ್ರೇಯಸ್ಸನ್ನು ಧೋನಿಗೆ ಸಲ್ಲಿಸುತ್ತಿರುವುದನ್ನು ಗೌತಮ್ ಗಂಭೀರ್ ಪ್ರಶ್ನಿಸಿದ್ದಾರೆ.