ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮುಗಿದಿದೆ. 5 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ ತಂಡ 3-1 ಅಂತರದಿಂದ ಗೆದ್ದುಕೊಂಡಿದೆ. ಈ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾದ ಕೆಲ ಆಟಗಾರರ ಪ್ರದರ್ಶನದಿಂದ ಕೋಚ್ ಗೌತಮ್ ಗಂಭೀರ್ ಪ್ರಭಾವಿತರಾಗಿದ್ದಾರೆ. ಅದರಲ್ಲೂ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಗಂಭೀರ್ ಮುಕ್ತಕಂಠದಿಂದ ಹೊಗಳಿದ್ದಾರೆ.
ಸಿಡ್ನಿ ಟೆಸ್ಟ್ ಬಳಿಕ ಮಾತನಾಡಿದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಭಾರತ ತಂಡದ ಸೋಲಿನ ಹೊರತಾಗಿಯೂ ಕೆಲ ಧನಾತ್ಮಕ ವಿಷಯಗಳು ಸಹ ಕಂಡು ಬಂದಿದೆ. ಈ ಸರಣಿಯಲ್ಲಿ ಹೊಸ ಆಟಗಾರರ ಪ್ರದರ್ಶನ ಅತ್ಯಂತ ಶುಭ ಸೂಚನೆ ಎಂದು ಗಂಭೀರ್ ಬಣ್ಣಿಸಿದ್ದಾರೆ.
ಯಶಸ್ವಿ ಜೈಸ್ವಾಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್… ಎಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರೆಲ್ಲರೂ ಎಷ್ಟು ಟೆಸ್ಟ್ ಸರಣಿಗಳನ್ನು ಆಡಿದ್ದಾರೆ ಎಂಬುದು ಗೊತ್ತಿಲ್ಲ. ಇದಾಗ್ಯೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿರುವುದು ಪಾಸಿಟಿವ್ ವಿಷಯ ಎಂದರು.
ಅದರಲ್ಲೂ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರ ಅಟಿಟ್ಯೂಡ್ನಿಂದ ಪ್ರಭಾವಿತನಾಗಿದ್ದೇನೆ. ಸರಣಿಯುದ್ದಕ್ಕೂ ಸಿರಾಜ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಇದಾಗ್ಯೂ ಪ್ರತಿ ಬಾಲ್ನಲ್ಲಿ ಅವರು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಓಡುತ್ತಿದ್ದರು.
100% ಫಿಟ್ ಆಗಿಲ್ಲದ ಆಟಗಾರನೊಬ್ಬ ಹೀಗೆ ತಂಡಕ್ಕಾಗಿ ಸಂಪೂರ್ಣ ತೊಡಗಿಸಿಕೊಂಡಿರುವುದನ್ನು ನಾನು ನೋಡಿಲ್ಲ ಎಂದು ಭಾವಿಸುತ್ತೇನೆ. ಇದು ದೇಶದ ಮೇಲೆ ಮೊಹಮ್ಮದ್ ಸಿರಾಜ್ಗೆ ಇರುವ ಬದ್ಧತೆಯನ್ನು ತೋರಿಸುತ್ತದೆ. ಇಂತಹ ಅಟಿಟ್ಯೂಡ್ನಿಂದಲೇ ಕೊನೆಯವರೆಗೆ ಹೋರಾಡಿದ್ದೇವೆ.
ಎಲ್ಲರೂ ಜಸ್ಪ್ರೀತ್ ಬುಮ್ರಾ 32 ವಿಕೆಟ್ ಪಡೆದಿದ್ದಾರೆ, ಯಶಸ್ವಿ ಜೈಸ್ವಾಲ್ ಅತ್ಯಧಿಕ ರನ್ ಕಲೆಹಾಕಿದ್ದಾರೆ ಎಂದು ಮಾತನಾಡಬಹುದು. ಆದರೆ ಅಟಿಟ್ಯೂಡ್ ವಿಷಯದಲ್ಲಿ ಮೊಹಮ್ಮದ್ ಸಿರಾಜ್ ಅವರ ವರ್ತನೆಯು ಅತ್ಯಧ್ಭುತವಾಗಿತ್ತು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳಿದಂತೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮೊಹಮ್ಮದ್ ಸಿರಾಜ್ ಅಂತಹದೊಂದು ಬದ್ಧತೆ ತೋರಿದ್ರಾ ಎಂದು ಪರಿಶೀಲಿಸಿದರೆ, ಖಂಡಿತವಾಗಿಯೂ ಹೌದು. ಕೋಚ್ ಹೇಳಿದಂತೆ ಅವರು ಸಂಪೂರ್ಣ ಫಿಟ್ ಆಗಿಲ್ಲದಿದ್ದರೂ ತಂಡಕ್ಕಾಗಿ ಪ್ರತಿ ಪಂದ್ಯಗಳಲ್ಲೂ ಬೌಲಿಂಗ್ ಮಾಡಿದ್ದಾರೆ.
ಅಲ್ಲದೆ ಸರಣಿಯಲ್ಲಿ ಭಾರತದ ಪರ ಅತೀ ಹೆಚ್ಚು ಓವರ್‌ಗಳನ್ನು ಎಸೆದ ಬೌಲರ್ ಎನಿಸಿಕೊಂಡಿದ್ದಾರೆ. ಸಿರಾಜ್ 157.1 ಓವರ್‌ಗಳನ್ನು ಅಂದರೆ ಒಟ್ಟು 943 ಎಸೆತಗಳನ್ನು ಎಸೆದು 20 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ದಿನ 2 ಅರ್ಧಶತಕ ಬಾರಿಸಿದ ಬಾಬರ್ ಆಝಂ
ಅತ್ತ ಜಸ್ಪ್ರೀತ್ ಬುಮ್ರಾ 32 ವಿಕೆಟ್ ಕಬಳಿಸಿದರೆ, ಇತ್ತ ಮೊಹಮ್ಮದ್ ಸಿರಾಜ್ 20 ವಿಕೆಟ್ ಉರುಳಿಸಿ ಉತ್ತಮ ಸಾಥ್ ನೀಡಿದ್ದರು. ಇದಾಗ್ಯೂ ಭಾರತ ತಂಡದ ಮೂರನೇ ಬೌಲರ್ಗೆ 10 ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಮೊಹಮ್ಮದ್ ಸಿರಾಜ್ ಪ್ರದರ್ಶನಕ್ಕೆ ಗೌತಮ್ ಗಂಭೀರ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ