ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಟೆಸ್ಟ್ ಕ್ರಿಕೆಟ್್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 2 ವರ್ಷಗಳೇ ಕಳೆದಿತ್ತು. ಅದರಲ್ಲೂ ಸೌತ್ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಅವರ ಬ್ಯಾಟ್ನಿಂದ 50+ ಸ್ಕೋರ್ ಮೂಡಿಬಂದಿದ್ದು 2022 ರಲ್ಲಿ. ಇದಾದ ಬಳಿಕ ಒಮ್ಮೆಯೂ ಅರ್ಧಶತಕ ಬಾರಿಸಿರಲಿಲ್ಲ. ಆದರೀಗ ಹರಿಣರ ನಾಡಿನಲ್ಲಿ ಬಾಬರ್ ಹಾಫ್ ಸೆಂಚುರಿಯ ಬರ ನೀಗಿಸಿದ್ದಾರೆ. ಅದು ಕೂಡ ಸತತ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ.
ಕೇಪ್ಟೌನ್ನ ನ್ಯೂಲಾಂಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಬಾಬರ್ ಆಝಂ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿದ್ದ ಕಳಪೆ ದಾಂಡಿಗನೆಂಬ ಟೀಕೆಗೆ ಒಂದೇ ದಿನ 2 ಅರ್ಧಶತಕ ಬಾರಿಸಿ ಉತ್ತರ ನೀಡಿದ್ದಾರೆ.
ಇಲ್ಲಿ ಒಂದೇ ದಿನ ಅದೇಗೆ ಎರಡು ಅರ್ಧಶತಕ ಬಾರಿಸಿದ್ರು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ 58 ರನ್ ಬಾರಿಸಿದ್ದರು. ಬಾಬರ್ ಅವರ ಈ ಅರ್ಧಶತಕದ ಪಾಕಿಸ್ತಾನ್ ತಂಡವು ದಿಢೀರ್ ಕುಸಿತಕ್ಕೊಳಗಾಗಿ ಕೇವಲ 194 ರನ್ ಗಳಿಗೆ ಆಲೌಟ್ ಆಗಿದೆ.
ಅತ್ತ ಮೊದಲ ಇನಿಂಗ್ಸ್ನಲ್ಲಿ 615 ರನ್ ಕಲೆಹಾಕಿದ್ದ ಸೌತ್ ಆಫ್ರಿಕಾ ತಂಡವು ಪಾಕಿಸ್ತಾನ್ ಮೇಲೆ ಫಾಲೋಆನ್ ಹೇರಿದೆ. ಹೀಗಾಗಿ ಮೊದಲ ಇನಿಂಗ್ಸ್ ನಲ್ಲಿ ಆಲೌಟ್ ಆದ ಬೆನ್ನಲ್ಲೇ ಪಾಕಿಸ್ತಾನ್ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.
ದ್ವಿತೀಯ ಇನಿಂಗ್ಸ್ ನಲ್ಲೂ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ 3ನೇ ದಿನದಾಟದೊಳಗೆ 124 ಎಸೆತಗಳಲ್ಲಿ 10 ಫೋರ್ ಗಳೊಂದಿಗೆ 81 ರನ್ ಬಾರಿಸಿದ್ದಾರೆ. ಈ ಮೂಲಕ ಒಂದೇ ದಿನ ಎರಡು ಅರ್ಧಶತಕ ಬಾರಿಸಿ ಮಿಂಚಿದರು.
ಇನ್ನು ಬಾಬರ್ ಆಝಂ (81) ಹಾಗೂ ಶಾನ್ ಮಸೂದ್ (101*) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿದೆ. ಈ ಮೂಲಕ ಫಾಲೋಆನ್ ಹೇರಿದ ಸೌತ್ ಆಫ್ರಿಕಾ ವಿರುದ್ಧ ಪಾಕ್ ಬ್ಯಾಟರ್ ದಿಟ್ಟ ಹೋರಾಟವನ್ನು ಪ್ರದರ್ಶಿಸಿದ್ದಾರೆ.
Published On - 7:30 am, Mon, 6 January 25