ಪಾಕಿಸ್ತಾನ್, ಬಾಂಗ್ಲಾದೇಶ್ ಹಾಗೂ ನ್ಯೂಜಿಲೆಂಡ್ ನಡುವಣ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಕಿವೀಸ್ ಬ್ಯಾಟರ್ ಗ್ಲೆನ್ ಫಿಲಿಪ್ಸ್ (Glenn Phillips) ದಾಖಲೆಯ ಇನಿಂಗ್ಸ್ ಆಡಿದ್ದಾರೆ. ಓವಲ್ನ ಕ್ರಿಸ್ಟ್ಚರ್ಚ್ನಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಡೆವೊನ್ ಕಾನ್ವೆ ಹಾಗೂ ಫಿನ್ ಅಲೆನ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 45 ರನ್ ಕಲೆಹಾಕಿದ್ದ ವೇಳೆ ಅಲೆನ್ (32) ಔಟಾದರು. ಆ ಬಳಿಕ ಬಂದ ಮಾರ್ಟಿನ್ ಗಪ್ಟಿಲ್ ಕೂಡ 34 ರನ್ ಬಾರಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಮತ್ತೊಂದೆಡೆ 40 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಡೆವೊನ್ ಕಾನ್ವೆ 64 ರನ್ ಬಾರಿಸಿ ಮಿಂಚಿದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಫಿಲಿಪ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮ ಓವರ್ಗಳ ವೇಳೆ ಬ್ಯಾಟ್ ಬೀಸಿದ ಫಿಲಿಪ್ಸ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ನ್ಯೂಜಿಲೆಂಡ್ ಪರ ಟಿ20 ಕ್ರಿಕೆಟ್ ಅತೀ ವೇಗವಾಗಿ ಹಾಫ್ ಸೆಂಚುರಿ ಸಿಡಿಸಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಅರ್ಧಶತಕದ ಬಳಿಕ ಮತ್ತಷ್ಟು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಫಿಲಿಪ್ಸ್ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ 24 ಎಸೆತಗಳಲ್ಲಿ 60 ರನ್ ಬಾರಿಸಿದರು. ಪರಿಣಾಮ ನ್ಯೂಜಿಲೆಂಡ್ ಮೊತ್ತವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ಕ್ಕೆ ಬಂದು ನಿಂತಿತು.
209 ರನ್ಗಳ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶ್ ತಂಡದ ಪರ ನಾಯಕ ಶಕೀಬ್ ಅಲ್ ಹಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 44 ಎಸೆತಗಳಲ್ಲಿ 70 ರನ್ ಬಾರಿಸಿದ ಶಕೀಬ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಅಂತಿಮವಾಗಿ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು. ಇದರೊಂದಿಗೆ 48 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ನ್ಯೂಜಿಲೆಂಡ್ ತಂಡವು ತ್ರಿಕೋನ ಸರಣಿಯ ಫೈನಲ್ ಪ್ರವೇಶಿಸಿದೆ. ಇನ್ನು ಈ ಸರಣಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ಸೋತಿರುವ ಬಾಂಗ್ಲಾದೇಶ್ ತಂಡವು ಸರಣಿಯಿಂದ ಹೊರಬಿದ್ದಿದೆ. ಅಲ್ಲದೆ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಫೈನಲ್ ಆಡುವುದು ಬಹುತೇಕ ಖಚಿತವಾಗಿದೆ.