ಕೊಹ್ಲಿ ತಡೆದರೂ ನಿಲ್ಲದ ಆಕ್ರೋಶ; ನ್ಯೂಜಿಲೆಂಡ್ ಆಟಗಾರನಿಗೆ ಗುರ್ನೂರ್ ಖಡಕ್ ವಾರ್ನಿಂಗ್
ಭಾರತ-ನ್ಯೂಜಿಲೆಂಡ್ ಏಕದಿನ ಪಂದ್ಯದಲ್ಲಿ ವೇಗಿ ಗುರ್ನೂರ್ ಬ್ರಾರ್ ವಿಕೆಟ್ ಪಡೆದ ಬಳಿಕ ಟಿಮ್ ಸೀಫರ್ಟ್‌ಗೆ ಆಕ್ರಮಣಕಾರಿಯಾಗಿ ಬೀಳ್ಕೊಡುಗೆ ನೀಡಿದರು. ಇದರಿಂದ ಉದ್ವಿಗ್ನತೆ ಸೃಷ್ಟಿಯಾಗಿದ್ದು, ವಿರಾಟ್ ಕೊಹ್ಲಿ ಮಧ್ಯಪ್ರವೇಶಿಸಿ ಗುರ್ನೂರ್‌ರನ್ನು ಸಮಾಧಾನಪಡಿಸಿದರು. ಈ ಅತೀವ ಸಂಭ್ರಮಕ್ಕೆ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಶಿಸ್ತು ಕ್ರಮ ಎದುರಿಸುವ ಸಾಧ್ಯತೆ ಇದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆದ ಬಳಿಕ ಭಾರತದ ವೇಗಿ ಗುರ್ನೂರ್ ಬ್ರಾರ್ ತಾಳ್ಮೆ ಕಳೆದುಕೊಂಡ ಘಟನೆ ಮೈದಾನದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಸಿತು. ಪಂದ್ಯದ ಮೊದಲ ವಿಕೆಟ್ ಪಡೆಯಲು ಭಾರತ ತಂಡ 12 ಓವರ್‌ಗಳವರೆಗೆ ಕಾಯಬೇಕಾಯಿತು. ಕೊನೆಗೂ 12ನೇ ಓವರ್‌ನ ಕೊನೆಯ ಎಸೆತದಲ್ಲಿ ಗುರ್ನೂರ್ ಬ್ರಾರ್ ನ್ಯೂಜಿಲೆಂಡ್ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಅವರನ್ನು ಔಟ್ ಮಾಡಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.
ಆದರೆ ವಿಕೆಟ್ ಪಡೆದ ಸಂಭ್ರಮದಲ್ಲಿ ಗುರ್ನೂರ್ ಆಕ್ರಮಣಕಾರಿ ವರ್ತನೆ ತೋರಿದರು. ಔಟಾದ ಟಿಮ್ ಸೀಫರ್ಟ್‌ಗೆ ಕೋಪದಿಂದಲೇ ಬೀಳ್ಕೊಡುಗೆ ನೀಡಲು ಮುಂದಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ತಕ್ಷಣ ಮಧ್ಯಪ್ರವೇಶಿಸಿ ಗುರ್ನೂರ್ ಅವರನ್ನು ಸೀಫರ್ಟ್‌ನಿಂದ ದೂರ ಸರಿಸಿದರು.
INCREDIBLE CATCH BY ISHAN 😍
– Watchout the aggressive celebration by Gurnoor Brar and Kohli trying to pull out Gurnoor from the scene. https://t.co/OjjVrPBA54
— Johns. (@CricCrazyJohns) November 13, 2026
ಗುರ್ನೂರ್ ಎಸೆತಕ್ಕೆ ಸೀಫರ್ಟ್ ಔಟ್
12ನೇ ಓವರ್‌ನ ಕೊನೆಯ ಎಸೆತದಲ್ಲಿ ಗುರ್ನೂರ್ ಬ್ರಾರ್ ಗಂಟೆಗೆ 144 ಕಿ.ಮೀ ವೇಗದಲ್ಲಿ ಶಾರ್ಟ್ ಬಾಲ್ ಎಸೆದರು. ಆಗಾಗಲೇ 58 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಟಿಮ್ ಸೀಫರ್ಟ್ ಈ ಎಸೆತದ ವೇಗ ಮತ್ತು ಬೌನ್ಸ್‌ಗೆ ಸರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಪುಲ್ ಶಾಟ್ ಆಡಲು ಮುಂದಾದ ಸೀಫರ್ಟ್ ಅವರ ಬ್ಯಾಟ್‌ನ ಮೇಲ್ಭಾಗಕ್ಕೆ ಚೆಂಡು ತಾಗಿ ಗಾಳಿಯಲ್ಲಿ ಮೇಲಕ್ಕೆ ಹಾರಿತು. ಈ ವೇಳೆ ವಿಕೆಟ್ ಕೀಪರ್ ಇಶಾನ್ ಕಿಶನ್ ತಮ್ಮ ಎಡಭಾಗಕ್ಕೆ ಹಿಂದಕ್ಕೆ ಓಡಿ ಅದ್ಭುತ ಕ್ಯಾಚ್ ಹಿಡಿದರು. ಇದರೊಂದಿಗೆ ಸೀಫರ್ಟ್ ಅವರ ಇನಿಂಗ್ಸ್ ಅಂತ್ಯಗೊಂಡಿತು.
Kohli saved Gurnoor Brar from a potential match ban https://t.co/aGkKEXoJ6q
— Gaurav (@Melbourne__82) November 13, 2026
ಗುರ್ನೂರ್ ಆಕ್ರಮಣಕಾರಿ ಆಚರಣೆ
ವಿಕೆಟ್ ಪಡೆದ ಬಳಿಕ ಗುರ್ನೂರ್ ಬ್ರಾರ್ ನೇರವಾಗಿ ಟಿಮ್ ಸೀಫರ್ಟ್ ಬಳಿಗೆ ತೆರಳಿ ಆಕ್ರಮಣಕಾರಿಯಾಗಿ ಕೂಗುತ್ತಾ ಬೀಳ್ಕೊಡುಗೆ ನೀಡಿದರು. ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಸಿಗದೆ ಇದ್ದ ಹತಾಶೆ ಮತ್ತು ವಿಕೆಟ್ ಪಡೆದ ಉತ್ಸಾಹ ಅವರ ವರ್ತನೆಯಲ್ಲಿ ಕಾಣಿಸಿತು. ಮೈದಾನದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ವಿರಾಟ್ ಕೊಹ್ಲಿ ತಕ್ಷಣವೇ ಮಧ್ಯಪ್ರವೇಶಿಸಿದರು. ಗುರ್ನೂರ್ ಅವರನ್ನು ಹಿಡಿದು ಸೀಫರ್ಟ್‌ನಿಂದ ದೂರ ಸರಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೇ ವೇಳೆ ಮೈದಾನದಲ್ಲಿದ್ದ ಅಂಪೈರ್ ಕ್ರಿಸ್ ಬ್ರೌನ್ ಕೂಡ ಗುರ್ನೂರ್ ಜೊತೆ ಮಾತನಾಡಿ ಶಾಂತವಾಗಿರುವಂತೆ ಸೂಚಿಸಿದರು.
ಎರಡು ಎಸೆತಗಳಲ್ಲಿ ಎರಡು ಕ್ಯಾಚ್ ಮಿಸ್; ರೋಹಿತ್-ಇಶಾನ್ ಎಡವಟ್ಟಿಗೆ ಆಕಿಬ್ ನಬಿಗೆ ಸಿಗದ ವಿಕೆಟ್
ಗುರ್ನೂರ್ಗೆ ಐಸಿಸಿ ಶಿಕ್ಷೆ ಬೀಳುತ್ತಾ?
ಗುರ್ನೂರ್ ಬ್ರಾರ್ ಅವರ ಈ ಆಕ್ರಮಣಕಾರಿ ವರ್ತನೆ ಇದೀಗ ಚರ್ಚೆಗೆ ಕಾರಣವಾಗಿದೆ. ಅವರ ಸಂಭ್ರಮಾಚರಣೆಯನ್ನು ಪಂದ್ಯದ ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. ಒಂದು ವೇಳೆ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆ ಕಂಡುಬಂದರೆ, ಭಾರತದ ಯುವ ವೇಗಿ ದಂಡ ಅಥವಾ ಇತರ ಶಿಸ್ತು ಕ್ರಮ ಎದುರಿಸಬೇಕಾಗಬಹುದು.
