ಭಾರತದ ವಿಶ್ವಕಪ್ ಹೀರೋ ಗೌತಮ್​ ಗಂಭೀರ್​ಗೆ ಹುಟ್ಟುಹಬ್ಬದ ಶುಭಾಶಯಗಳು

|

Updated on: Oct 14, 2024 | 10:53 AM

Gautam Gambhir: 2003 ರಿಂದ 2016 ರವರೆಗೆ ಟೀಮ್ ಇಂಡಿಯಾ ಪರ 283 ಇನಿಂಗ್ಸ್ ಆಡಿರುವ ಗೌತಮ್ ಗಂಭೀರ್ 20 ಶತಕ ಹಾಗೂ 63 ಅರ್ಧಶತಕಗಳೊಂದಿಗೆ ಒಟ್ಟು 10324 ರನ್​ ಕಲೆಹಾಕಿದ್ದಾರೆ. ಈ ಮೂಲಕ ಭಾರತದ ಪರ 10 ಸಾವಿರಕ್ಕೂ ಅಧಿಕ ರನ್​ಗಳಿಸಿದ 14ನೇ ಆಟಗಾರ ಎನಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರು ಇಂದು 43ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1981, ಅಕ್ಟೋಬರ್ 14 ರಂದು ದೆಹಲಿಯಲ್ಲಿ ಜನಿಸಿದ ಗಂಭೀರ್ 2003 ರಲ್ಲಿ ಟೀಮ್ ಇಂಡಿಯಾ ಪರ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. ಹೀಗೆ ಆರಂಭವಾದ ಗಂಭೀರ್ ಅವರ ಅಂತಾರಾಷ್ಟ್ರೀಯ ಕೆರಿಯರ್​ನಲ್ಲಿ ಭಾರತ ತಂಡಕ್ಕೆ ಎರಡು ವಿಶ್ವಕಪ್​ ದೊರೆತಿದ್ದವು ಎಂಬುದು ವಿಶೇಷ. ಈ ಎರಡು ವರ್ಲ್ಡ್​​ ಕಪ್​ ಗೆಲುವಿನ ಹಿಂದಿನ ರೂವಾರಿ ಗಂಭೀರ್ ಎಂಬುದು ಇಲ್ಲಿ ಉಲ್ಲೇಖಾರ್ಹ.

ಏಕೆಂದರೆ ಗಂಭೀರ್ 2007ರ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ 54 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 75 ರನ್ ಬಾರಿಸಿದ್ದರು. ಈ ಮೂಲಕ ಪಾಕ್ ವಿರುದ್ಧ ಭಾರತ ತಂಡ 157 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ನೆರವಾಗಿದ್ದರು.

ಹಾಗೆಯೇ 2011ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡವು 31 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಇನಿಂಗ್ಸ್ ಕಟ್ಟಿದ್ದು ಗೌತಮ್ ಗಂಭೀರ್. ಶ್ರೀಲಂಕಾ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಕ್ರೀಸ್ ಕಚ್ಚಿ ಆಡಿದ ಗಂಭೀರ್ 97 ರನ್​ ಬಾರಿಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಈ ಮೂಲಕ ಎರಡು ಫೈನಲ್​ಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಭಾರತ ತಂಡವು ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಗೌತಮ್ ಗಂಭೀರ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗಂಭೀರ್ ಮುಂದಾಳತ್ವದಲ್ಲಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಚಾಂಪಿಯನ್ ಆಗುವುದನ್ನು ನಿರೀಕ್ಷಿಸಬಹುದು.

Published On - 7:25 am, Mon, 14 October 24