ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ

ಝಾಹಿರ್ ಯೂಸುಫ್
|

Updated on: Nov 24, 2024 | 9:36 AM

Hardik Pandya: ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಮೂಲಕ ಹಾರ್ದಿಕ್ ಪಾಂಡ್ಯ ದೇಶೀಯ ಅಂಗಳಕ್ಕೆ ಮರಳಿದ್ದಾರೆ. ಅಲ್ಲದೆ ವರ್ಷಗಳ ಬಳಿಕ ಆಡಿದ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಬರೋಡಾ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟಿದ್ದಾರೆ.

ಇಂದೋರ್​ನ ಹೋಲ್ಕರ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಬರೋಡಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.

ಗುಜರಾತ್ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕ ಆಟಗಾರ ಆರ್ಯ ದೇಸಾಯಿ 52 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 78 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಗುಜರಾತ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು.

185 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಬರೋಡಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 16 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಆಸರೆಯಾದರು. ಅಷ್ಟೇ ಅಲ್ಲದೆ ತೂಫಾನ್ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 35 ಎಸೆತಗಳಲ್ಲಿ 5 ಸಿಕ್ಸ್​ ಹಾಗೂ 6 ಫೋರ್​ಗಳೊಂದಿಗೆ ಅಜೇಯ 74 ರನ್​ ಬಾರಿಸಿದರು. ಈ ಮೂಲಕ 19.3 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿ 5 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.

ಬರೋಡಾ ಪ್ಲೇಯಿಂಗ್ 11: ಮಿತೇಶ್ ಪಟೇಲ್ (ವಿಕೆಟ್ ಕೀಪರ್) , ಭಾನು ಪಾನಿಯಾ , ವಿಷ್ಣು ಸೋಲಂಕಿ , ಹಾರ್ದಿಕ್ ಪಾಂಡ್ಯ , ಕೃನಾಲ್ ಪಾಂಡ್ಯ (ನಾಯಕ) , ನಿನಾದ್ ಅಶ್ವಿನ್​​ಕುಮಾರ್ ರಥ್ವಾ , ಶಿವಾಲಿಕ್ ಶರ್ಮಾ , ಮಹೇಶ್ ಪಿಥಿಯಾ , ರಾಜ್ ಲಿಂಬಾನಿ , ಲುಕ್ಮಾನ್ ಮೇರಿವಾಲಾ , ಅತಿತ್ ಶೇತ್.

ಗುಜರಾತ್ ಪ್ಲೇಯಿಂಗ್ 11: ಆರ್ಯ ದೇಸಾಯಿ , ಉರ್ವಿಲ್ ಪಟೇಲ್ (ವಿಕೆಟ್ ಕೀಪರ್) , ಸೌರವ್ ಚೌಹಾಣ್ , ಉಮಂಗ್ ಕುಮಾರ್ , ರಿಪಾಲ್ ಪಟೇಲ್ , ಅಕ್ಷರ್ ಪಟೇಲ್ (ನಾಯಕ) , ಹೇಮಾಂಗ್ ಪಟೇಲ್ , ಚಿಂತನ್ ಗಜ , ರವಿ ಬಿಷ್ಣೋಯ್ , ಅರ್ಝಾನ್ ನಾಗವಾಸ್ವಾಲ್ಲಾ , ತೇಜಸ್ ಪಟೇಲ್.