IND vs ENG: ಇಂಗ್ಲೆಂಡ್ ವಿರುದ್ಧವೂ ಹಾರ್ದಿಕ್ ಪಾಂಡ್ಯ ಆಡುವುದು ಅನುಮಾನ..!

|

Updated on: Oct 25, 2023 | 6:51 AM

Hardik Pandya Injury: ನ್ಯೂಜಿಲೆಂಡ್ ವಿರುದ್ಧದ ಐದನೇ ಪಂದ್ಯದಲ್ಲಿ ಆಡದ ಹಾಗೂ ನಾಲ್ಕನೇ ಪಂದ್ಯದಲ್ಲಿ ಕೇವಲ 3 ಎಸೆತಗಳನ್ನು ಎಸೆದಿದ್ದ ಹಾರ್ದಿಕ್ ಪಾಂಡ್ಯ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ.

IND vs ENG: ಇಂಗ್ಲೆಂಡ್ ವಿರುದ್ಧವೂ ಹಾರ್ದಿಕ್ ಪಾಂಡ್ಯ ಆಡುವುದು ಅನುಮಾನ..!
ಹಾರ್ದಿಕ್ ಪಾಂಡ್ಯ
Follow us on

2023ರ ವಿಶ್ವಕಪ್‌ನಲ್ಲಿ (ICC World Cup 2023) ಸತತ ಐದು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು (India vs England) ಎದುರಿಸಲಿದೆ. ಆದರೆ ಆ ಪಂದ್ಯಕ್ಕೂ ಮುನ್ನ ತಂಡಕ್ಕೆ ಕೊಂಚ ಹಿನ್ನಡೆಯುಂಟಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಐದನೇ ಪಂದ್ಯದಲ್ಲಿ ಆಡದ ಹಾಗೂ ನಾಲ್ಕನೇ ಪಂದ್ಯದಲ್ಲಿ ಕೇವಲ 3 ಎಸೆತಗಳನ್ನು ಎಸೆದಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಇದೇ ಅಕ್ಟೋಬರ್ 29ರ ಭಾನುವಾರ ಲಕ್ನೋದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

ಗಾಯ ಗಂಭೀರವಾಗಿಲ್ಲ

ಕ್ರಿಕೆಟ್ ನೆಕ್ಸ್ಟ್ ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ಭಾನುವಾರ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ‘ಹೌದು, ಹಾರ್ದಿಕ್ ಅವರು ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ಆಗಿರುವ ಗಾಯ ಗಂಭೀರವಾಗಿಲ್ಲದಿದ್ದರೂ, ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಮುಂದಿನ ಪಂದ್ಯದಿಂದಲೂ ಹೊರಗಿಡಲು ತೀರ್ಮಾನಿಸಲಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.ಮುಂಬರುವ ಪಂದ್ಯಗಳಿಗೆ ಹಾರ್ದಿಕ್ ಸಂಪೂರ್ಣವಾಗಿ ಫಿಟ್ ಆಗಬೇಕೆಂದು ತಂಡದ ಮ್ಯಾನೇಜ್‌ಮೆಂಟ್ ಬಯಸಿದೆ. ಇಂತಹ ಪರಿಸ್ಥಿತಿಯಲ್ಲಿ ಹಾರ್ದಿಕ್​ಗೆ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಕಾಲಾವಕಾಶ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

AFG vs PAK, ICC World Cup: ವಿಶ್ವಕಪ್ ಸೆಮಿ ಫೈನಲ್ ರೇಸ್​ನಲ್ಲಿ ಅಫ್ಘಾನಿಸ್ತಾನ ತಂಡ: ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಮುರಿತ ಕಂಡುಬಂದಿಲ್ಲ

ಟೀಂ ಇಂಡಿಯಾದ ವಿಶ್ವಕಪ್ 2023 ರ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಬೌಲಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಬೌಲಿಂಗ್ ಮಾಡುವಾಗ, ಸ್ಟ್ರೈಟ್ ಡ್ರೈವ್ ಅನ್ನು ನಿಲ್ಲಿಸಲು ಪ್ರಯತ್ನಿಸುವಾಗ ಅವರು ಎಡಗಾಲಿನ ನೋವಿಗೆ ತುತ್ತಾದರು. ಹೀಗಾಗಿ ಅವರನ್ನು ಸ್ಕ್ಯಾನ್​ಗೆ ಒಳಪಡಿಸಲಾಯಿತು. ವರದಿಯಲ್ಲಿ ಪಾಂಡ್ಯ ಕಾಲಿನಲ್ಲಿ ಯಾವುದೇ ಯಾವುದೇ ಒತ್ತಡ ಅಥವಾ ಮುರಿತ ಕಂಡುಬರದಿದ್ದರೂ, ಅವರು ಚಿಕಿತ್ಸೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಹೋಗಬೇಕಾಯಿತು.

ಪಾಂಡ್ಯ ಅನುಪಸ್ಥಿತಿ

ಇದೀಗ ಎನ್​ಸಿಎನಲ್ಲಿ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ, ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಬೆಂಗಳೂರಿನಿಂದ ಲಕ್ನೋಗೆ ತರೆಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಸದ್ಯಕ್ಕೆ ಅವರು ಅಲ್ಲಿಯೇ ಉಳಿದುಕೊಳ್ಳುತ್ತಾರೆ ಮತ್ತು ಅಲ್ಲಿಯೇ ಚೇತರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಉಪನಾಯಕ ಹಾರ್ದಿಕ್ ತಂಡದಲ್ಲಿ ಇಲ್ಲದ ಕಾರಣ ತಂಡದ ಆಡುವ ಹನ್ನೊಂದರ ಸಂಯೋಜನೆಗೆ ಹೊಡೆತಬಿದ್ದಿದೆ. ಲಕ್ನೋ ಪಿಚ್ ಸ್ಪಿನ್​ರಗಳಿಗೆ ಹೆಚ್ಚು ನೆರವಾಗುವುದರಿಂದ ತಂಡದ ನಿರ್ವಹಣೆಯು ಆರ್. ಅಶ್ವಿನ್ ಅವರನ್ನು ಕಣಕ್ಕಿಳಿಸಲು ಯೋಜಿಸುತ್ತಿದೆ. ಆದರೆ ಆಡುವ ಹನ್ನೊಂದರಿಂದ ಯಾರನ್ನು ಹೊರಗಿಡಲಾಗುತ್ತದೆ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ತಂಡದಲ್ಲಿ ಪ್ರಸ್ತುತ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳಿದ್ದು, 6 ಬ್ಯಾಟ್ಸ್‌ಮನ್‌ಗಳೊಂದಿಗೆ ಆಡುತ್ತಿದೆ. ಹೀಗಾಗಿ ಒಬ್ಬ ಬೌಲಿಂಗ್ ಆಲ್​ರೌಂಡರ್​ನ ಅವಶ್ಯಕತೆ ತಂಡಕ್ಕಿದ್ದು, ಪಾಂಡ್ಯ ಅಲಭ್ಯತೆಯನ್ನು ರೋಹಿತ್ ಪಡೆ ಹೇಗೆ ಸರಿದೂಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:30 am, Wed, 25 October 23