IND vs NZ: ಟೀಂ ಇಂಡಿಯಾಗೆ ಆಘಾತ; ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯುವುದಿಲ್ಲ ಹಾರ್ದಿಕ್ ಪಾಂಡ್ಯ..!

Hardik Pandya injury: ಏಕದಿನ ವಿಶ್ವಕಪ್​ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾಕ್ಕೆ ಬಿಗ್ ಶಾಕ್ ಎದುರಾಗಿದೆ. ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನಾಡಲಿರುವ ರೋಹಿತ್ ಪಡೆ, ತಂಡದ ಉಪನಾಯಕನಿಲ್ಲದೆ ಕಣಕ್ಕಿಳಿಯಬೇಕಾಗಿದೆ.

IND vs NZ: ಟೀಂ ಇಂಡಿಯಾಗೆ ಆಘಾತ; ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯುವುದಿಲ್ಲ ಹಾರ್ದಿಕ್ ಪಾಂಡ್ಯ..!
ಹಾರ್ದಿಕ್ ಪಾಂಡ್ಯ

Updated on: Oct 20, 2023 | 3:18 PM

ಏಕದಿನ ವಿಶ್ವಕಪ್​ನ (ICC World Cup 2023) ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾಕ್ಕೆ ಬಿಗ್ ಶಾಕ್ ಎದುರಾಗಿದೆ. ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನಾಡಲಿರುವ ರೋಹಿತ್ ಪಡೆ (India vs New Zealand), ತಂಡದ ಉಪನಾಯಕನಿಲ್ಲದೆ ಕಣಕ್ಕಿಳಿಯಬೇಕಾಗಿದೆ. ನಿನ್ನೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ (Hardik Pandya), ಕಿವೀಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆದರೆ ಈ ಬಾರಿ ಆ ದಾಖಲೆ ಮುರಿಯುವ ಹೊಸ್ತಿಲಿನಲ್ಲಿದ್ದ ತಂಡಕ್ಕೆ ಪಾಂಡ್ಯ ಅಲಭ್ಯತೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ.

ಬಿಸಿಸಿಐ ಹೇಳಿದ್ದೇನು?

ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ಟೀಂ ಇಂಡಿಯಾ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಆದರೆ ಟೂರ್ನಿಯಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿ ಎಲ್ಲರ ಮನಗೆದ್ದಿದ್ದ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿರುವುದು ತಂಡಕ್ಕೆ ಸಂಕಷ್ಟ ತಂದೊಡ್ಡಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಹೇಳಿಕೆ ನೀಡಿದ್ದು, ತನ್ನ ಹೇಳಿಕೆಯಲ್ಲಿ, ‘ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಭಾರತ ಪಂದ್ಯದ ವೇಳೆ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಎಡ ಪಾದದ ಗಾಯಕ್ಕೆ ಒಳಗಾಗಿದ್ದರು.

ಬಳಿಕ ಪಾಂಡ್ಯರ ಪಾದದ ಸ್ಕ್ಯಾನ್ನಿಂಗ್ ಮಾಡಲಾಗಿದ್ದು, ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಪಾಂಡ್ಯ, ಬಿಸಿಸಿಐ ವೈದ್ಯಕೀಯ ತಂಡದ ನಿರಂತರ ಮೇಲ್ವಿಚಾರಣೆಯಲ್ಲಿದ್ದಾರೆ. ಹೀಗಾಗಿ ಅವರು ಅಕ್ಟೋಬರ್ 20 ರಂದು ತಂಡದೊಂದಿಗೆ ಧರ್ಮಶಾಲಾಗೆ ಹೋಗುತ್ತಿಲ್ಲ. ಬದಲಿಗೆ ಲಕ್ನೋದಲ್ಲಿ ನಡೆಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ನೇರವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದೆ.

ಯಾರಿಗೆ ಅವಕಾಶ?

ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಪಾಂಡ್ಯ ಹೊರಬಿದ್ದಿದ್ದು, ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ಟೀಂ ಇಂಡಿಯಾ ಬೌಲಿಂಗ್ ಆಯ್ಕೆಯನ್ನು ಪರಿಗಣಿಸಿದರೆ ಮೊಹಮ್ಮದ್ ಶಮಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Fri, 20 October 23