ಒಂದೇ ದಿನದಲ್ಲಿ ಬದಲಾದ ಪಾಂಡ್ಯ ಪ್ಲ್ಯಾನ್: ಇದುವೇ ಟೀಮ್ ಇಂಡಿಯಾ ಸೋಲಿಗೆ ಮುಖ್ಯ ಕಾರಣ

IND vs WI: ಮೊದಲೇ ಹೇಳಿದಂತೆ ಮಳೆ ಬರುವ ಮುನ್ಸೂಚನೆ ಹೊಂದಿದ್ದ ವೆಸ್ಟ್ ಇಂಡೀಸ್ ತಂಡವು ಡಕ್​ವರ್ಥ್ ಲೂಯಿಸ್ ನಿಯಮದಂತೆ ಟಾರ್ಗೆಟ್ ರೂಪಿಸಿ ಬ್ಯಾಟಿಂಗ್​ಗೆ ಇಳಿಯಿತು. ಅದರಂತೆ ಪ್ರತಿ ಹಂತದಲ್ಲೂ ಮಳೆಯಿಂದ ಪಂದ್ಯ ರದ್ದಾದರೆ ಜಯಗಳಿಸಲು ಬೇಕಾದ ಗುರಿಯೊಂದಿಗೆ ವಿಂಡೀಸ್ ದಾಂಡಿಗರು ಬ್ಯಾಟ್ ಬೀಸಿದ್ದರು.

ಒಂದೇ ದಿನದಲ್ಲಿ ಬದಲಾದ ಪಾಂಡ್ಯ ಪ್ಲ್ಯಾನ್: ಇದುವೇ ಟೀಮ್ ಇಂಡಿಯಾ ಸೋಲಿಗೆ ಮುಖ್ಯ ಕಾರಣ
Hardik Pandya
Edited By:

Updated on: Aug 14, 2023 | 4:16 PM

ಭಾರತ-ವೆಸ್ಟ್ ಇಂಡೀಸ್ ನಡುವಣ 4ನೇ ಟಿ20 ಪಂದ್ಯ…ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್​ಮನ್ ಪೊವೆಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 8 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ (77) ಹಾಗೂ ಯಶಸ್ವಿ ಜೈಸ್ವಾಲ್ (84) ಅಬ್ಬರಿಸಿದರು. ಅಲ್ಲದೆ 17 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತು.

ಈ ಅಮೋಘ ಗೆಲುವು ಸಾಧಿಸಿ 24 ಗಂಟೆಯೊಳಗೆ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ನಿರ್ಧಾರ ಬದಲಿಸಿದ್ದರು. ಫ್ಲೋರಿಡಾದಲ್ಲೇ ನಡೆದ 5ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡರು.
ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್​ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿಯನ್ನು 18 ಓವರ್​ಗಳಲ್ಲಿ ಬೆನ್ನತ್ತುವ ಮೂಲಕ ವೆಸ್ಟ್ ಇಂಡೀಸ್ ತಂಡ 8 ವಿಕೆಟ್​ಗಳ ಜಯ ಸಾಧಿಸಿತು.

ಅಂದರೆ 4ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್​ ಅನ್ನು ಟೀಮ್ ಇಂಡಿಯಾ ಯಾವ ರೀತಿಯಾಗಿ ಭರ್ಜರಿ ಚೇಸಿಂಗ್ ಮೂಲಕ ಸೋಲಿಸಿತೋ, ಅದೇ ಮಾದರಿಯಲ್ಲಿ 5ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ದಾಖಲಿಸಿತ್ತು. ಈ ಸೋಲಿಗೆ ಮುಖ್ಯ ಕಾರಣ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ರಾಹುಲ್ ದ್ರಾವಿಡ್ ತೆಗೆದುಕೊಂಡ ನಿರ್ಧಾರ ಎಂದರೆ ತಪ್ಲಾಗಲಾರದು. ಏಕೆಂದರೆ…

  1.  4ನೇ ಟಿ20 ಪಂದ್ಯದಲ್ಲಿ ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾಗೆ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಪಿಚ್​ ಬೃಹತ್ ಮೊತ್ತದ ಚೇಸಿಂಗ್​ಗೆ ಸಹಕಾರಿ ಎಂಬುದು ತಿಳಿದಿತ್ತು. ಇದಾಗ್ಯೂ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡರು.
  2.  ಈ ಪಂದ್ಯಕ್ಕೂ ಒಂದು ದಿನ ಮೊದಲೇ ಫ್ಲೋರಿಡಾ ಭಾಗದಲ್ಲಿ ಮಳೆಯಾಗಲಿದೆ ಎಂಬ ವರದಿಗಳಾಗಿದ್ದವು. ಅಲ್ಲದೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಲಿದೆ ಎಂದು ಕೂಡ ತಿಳಿಸಲಾಗಿತ್ತು. ಮಳೆ ಬಾಧಿತ ಪಂದ್ಯಗಳಲ್ಲಿ ಡರ್ಕ್​ ವರ್ಥ್ ಲೂಯಿಸ್ ನಿಯಮದ ಪ್ರಕಾರ ಟಾರ್ಗೆಟ್ ನೀಡಲಾಗುತ್ತದೆ. ಅಂದರೆ ಮಳೆ ಬರುವ ಪಂದ್ಯಗಳಲ್ಲಿ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ಮೊದಲೇ ಇಂತಹದೊಂದು ಅವಕಾಶವನ್ನು ಟೀಮ್ ಇಂಡಿಯಾ ಮನಗಾಣಬೇಕಿತ್ತು. ಆದರೆ ಟಾಸ್ ಗೆದ್ದ ಭಾರತ ತಂಡಕ್ಕೆ ಅಂತಹ ಯಾವುದೇ ಪ್ಲ್ಯಾನ್​ಗಳಿರಲಿಲ್ಲ.
  3.  ಮಳೆ ಬಾಧಿತ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದು ಕೂಡ ಕಷ್ಟಕರ. ಹೀಗಾಗಿಯೇ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಬೇಕಿತ್ತು. ಆದರೆ ಮೊದಲು ಬ್ಯಾಟ್ ಮಾಡಿದ ಪರಿಣಾಮ ಟೀಮ್ ಇಂಡಿಯಾ ಬೌಲರ್​ಗಳು ಒದ್ದೆಯಾದ ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾದರು. ಇದರ ಸಂಪೂರ್ಣ ಲಾಭ ಪಡೆದ ವಿಂಡೀಸ್ ದಾಂಡಿಗರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ವೆಸ್ಟ್ ಇಂಡೀಸ್ ಮಾಸ್ಟರ್​ ಪ್ಲ್ಯಾನ್:

ಮೊದಲೇ ಹೇಳಿದಂತೆ ಮಳೆ ಬರುವ ಮುನ್ಸೂಚನೆ ಹೊಂದಿದ್ದ ವೆಸ್ಟ್ ಇಂಡೀಸ್ ತಂಡವು ಡಕ್​ವರ್ಥ್ ಲೂಯಿಸ್ ನಿಯಮದಂತೆ ಟಾರ್ಗೆಟ್ ರೂಪಿಸಿ ಬ್ಯಾಟಿಂಗ್​ಗೆ ಇಳಿಯಿತು. ಅದರಂತೆ ಪ್ರತಿ ಹಂತದಲ್ಲೂ ಮಳೆಯಿಂದ ಪಂದ್ಯ ರದ್ದಾದರೆ ಜಯಗಳಿಸಲು ಬೇಕಾದ ಗುರಿಯೊಂದಿಗೆ ವಿಂಡೀಸ್ ದಾಂಡಿಗರು ಬ್ಯಾಟ್ ಬೀಸಿದ್ದರು.

ಇದನ್ನೂ ಓದಿ: Team India: ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

ಪಂದ್ಯಕ್ಕೆ ಎರಡ್ಮೂರು ಬಾರಿ ಮಳೆ ಅಡಚಣೆಯನ್ನುಂಟು ಮಾಡಿದರೂ ಡರ್ಕ್​ವರ್ಥ್ ಲೂಯಿಸ್ ನಿಯಮದಂತೆ ಗೆಲುವು ದಾಖಲಿಸಲು ಬೇಕಾದ ಗುರಿಯನ್ನು ಅದಾಗಲೇ ವೆಸ್ಟ್ ಇಂಡೀಸ್ ದಾಟಿ ಮುನ್ನುಗ್ಗಿತ್ತು. ಹೀಗಾಗಿಯೇ ಯಾವುದೇ ಹಂತದಲ್ಲೂ ವೆಸ್ಟ್ ಇಂಡೀಸ್ ಬ್ಯಾಟರ್​ಗಳು ಒತ್ತಡಕ್ಕೆ ಒಳಗಾಗಲಿಲ್ಲ. ಅಲ್ಲದೆ 18 ಓವರ್​ಗಳಲ್ಲಿ 171 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ಇದೀಗ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಗುಣಗಳ ಬಗ್ಗೆ ಹೊಸ ಚರ್ಚೆಯೊಂದು ಶುರುವಾಗಿದೆ.

 

Published On - 3:27 pm, Mon, 14 August 23