ಕೆಲವೇ ಕೆಲವು ತಿಂಗಳ ಹಿಂದೆ ಭಾರತದ ಯುವ ಕ್ರಿಕೆಟಿಗ ಹರ್ಷಿತ್ ರಾಣಾ ಎಂದರೆ ಎಲ್ಲರಿಗೂ ಥಟ್ಟನೇ ನೆನಪಾಗುತ್ತಿದ್ದಿದ್ದು, ಐಪಿಎಲ್ ವೇಳೆ ತನ್ನ ಆಕ್ರಮಣಕಾರಿ ಆಚರಣೆಯಿಂದ, ಶಿಕ್ಷೆಗೆ ಗುರಿಯಾಗಿದ್ದ ಕೆಕೆಆರ್ ತಂಡದ ಬೌಲರ್. ಆದರೀಗ ತನ್ನ ಅದ್ಭುತ ಪ್ರದರ್ಶನದ ಮೂಲಕ ಟೀಂ ಇಂಡಿಯಾವನ್ನು ಸೇರಿಕೊಂಡಿರುವ ಹರ್ಷಿತ್ ರಾಣಾ ಕಾಂಗರೂಗಳ ನಾಡಲ್ಲಿ ತನ್ನ ಕೈಚಳಕ ತೊರಲು ಸಜ್ಜಾಗಿದ್ದಾರೆ. ವಾಸ್ತವವಾಗಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ಪ್ರವಾಸಕ್ಕಾಗಿ ಈಗಾಗಲೇ ಬಿಸಿಸಿಐ ತಂಡವನ್ನು ಸಹ ಪ್ರಕಟಿಸಿದೆ. ಆ ಪ್ರವಾಸಕ್ಕೆ ಇದೇ ಮೊದಲ ಬಾರಿಗೆ ಹರ್ಷಿತ್ ರಾಣಾರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಕೂಡಲೇ ಮಿಂಚಿನ ಪ್ರದರ್ಶನ ನೀಡಿರುವ ಹರ್ಷಿತ್ ರಾಣಾ, ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಹರ್ಷಿತ್ ರಾಣಾ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ದೇಶೀ ಟೂರ್ನಿಯಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅದರಂತೆ ದೆಹಲಿ ಹಾಗೂ ಅಸ್ಸಾಂ ನಡುವೆ ರಣಜಿ ಪಂದ್ಯ ನಡೆಯುತ್ತಿದ್ದು, ಆ ಪಂದ್ಯದಲ್ಲಿ ಮೊದಲು ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದ ರಾಣಾ, 19.3 ಓವರ್ಗಳಲ್ಲಿ 80 ರನ್ ನೀಡಿ 5 ವಿಕೆಟ್ ಪಡೆದರು. ರಾಣಾ ಮಾರಕ ದಾಳಿಗೆ ಬೆದರಿದ ಅಸ್ಸಾಂ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 330 ರನ್ ಗಳಿಸಲಷ್ಟೇ ಶಕ್ತವಾಯಿತು.
ಬೌಲಿಂಗ್ ಬಳಿಕ ಬ್ಯಾಟಿಂಗ್ನಲ್ಲೂ ತಮ್ಮ ಸಾಮರ್ಥ್ಯ ತೋರಿದ ಹರ್ಷಿತ್ ರಾಣಾ 78 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಿತ 59 ರನ್ಗಳ ಇನ್ನಿಂಗ್ಸ್ ಆಡಿದರು. ರಾಣಾ ಅವರ ಈ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ದೆಹಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ 400ಕ್ಕೂ ಹೆಚ್ಚು ರನ್ ಕಲೆಹಾಕಿದೆ.
ಹರ್ಷಿತ್ ರಾಣಾ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಇದುವರೆಗೆ ಐಪಿಎಲ್‌ನಲ್ಲಿ 20 ಪಂದ್ಯಗಳನ್ನಾಡಿರುವ ಅವರು ಒಟ್ಟು 25 ವಿಕೆಟ್ ಪಡೆದಿದ್ದಾರೆ. ಇದಲ್ಲದೆ ಇದುವರೆಗೆ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ರಾಣಾ ಇದರಲ್ಲಿ 36 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ಲಿಸ್ಟ್ ಎ ನಲ್ಲಿ 22 ವಿಕೆಟ್ ಪಡೆದಿದ್ದಾರೆ. ಈ ಅತ್ಯುತ್ತಮ ಪ್ರದರ್ಶನದಿಂದಾಗಿ ರಾಣಾ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಯ್ಕೆಯಾಗಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Mon, 28 October 24