- Kannada News Photo gallery Cricket photos Royal Challengers Bangalore: Retained Players for IPL 2025 Mega Auction
IPL 2025: ಹರಾಜಿಗೂ ಮುನ್ನ ತಂಡದಲ್ಲಿ 6 ಆಟಗಾರನನ್ನು ಉಳಿಸಿಕೊಳ್ಳಲಿದೆ ಆರ್ಸಿಬಿ
RCB player retention: 2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದರ ಕುರಿತು ಚರ್ಚಿಸಲಾಗಿದೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ. ಈ ಆಟಗಾರರ ಅನುಭವ ಮತ್ತು ಪ್ರದರ್ಶನ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Updated on: Oct 28, 2024 | 8:37 PM

2025 ರ ಐಪಿಎಲ್ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ ತಂಡಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಅಕ್ಟೋಬರ್ 31 ರೊಳಗೆ ಸಲ್ಲಿಸಬೇಕು. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಯಾರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಿವೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟು ಆಟಗಾರನನ್ನು ಉಳಿಸಿಕೊಳ್ಳಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ.

ವಿರಾಟ್ ಕೊಹ್ಲಿ: ಆರ್ಸಿಬಿ ಖಚಿತವಾಗಿ ಉಳಿಸಿಕೊಳ್ಳುವ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ. ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದಾಗಿನಿಂದಲೂ ಆರ್ಸಿಬಿ ಪರ ಆಡುತ್ತಿರುವ ಕೊಹ್ಲಿ, ಈ ಬಾರಿಯೂ ತಂಡದಲ್ಲಿ ಮುಂದುವರೆಯುವುದು ಖಚಿತವಾಗಿದೆ. ಇದಕ್ಕೆ ಪೂರಕವಾಗಿ ಪ್ರತಿ ಆವೃತ್ತಿಯಲ್ಲೂ ಕೊಹ್ಲಿ ಪ್ರದರ್ಶನ ಅದ್ಭುತವಾಗಿದ್ದು, ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳುವುದು ಸ್ಪಷ್ಟ.

ಮೊಹಮ್ಮದ್ ಸಿರಾಜ್: ಆರ್ಸಿಬಿ ಸೇರಿದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ ಮೊಹಮ್ಮದ್ ಸಿರಾಜ್, ಇದೀಗ ಭಾರತ ತಂಡದ ಅಗ್ರ ಬೌಲರ್ಗಳಲ್ಲಿ ಒಬ್ಬರು. ಹೀಗಾಗಿ ತಂಡದಲ್ಲಿ ಇಬ್ಬ ಅನುಭವಿ ಬೌಲರ್ ಇರಬೇಕು ಎನ್ನುವ ಕಾರಣದಿಂದಾಗಿ ಆರ್ಸಿಬಿ ಸಿರಾಜ್ರನ್ನು ಉಳಿಸಿಕೊಳ್ಳುವುದು ಸಹಜ.

ಫಾಫ್ ಡು ಪ್ಲೆಸಿಸ್: ಪ್ರಸ್ತುತ ಫಾಫ್ ಡು ಪ್ಲೆಸಿಸ್ ಆರ್ಸಿಬಿ ತಂಡದ ನಾಯಕರಾಗಿದ್ದಾರೆ. ಫಾಫ್ ತನ್ನ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿರಬಹುದು ಆದರೆ 40 ವರ್ಷ ವಯಸ್ಸಿನ ಫಾಫ್ ಪ್ರಪಂಚದಾದ್ಯಂತದ ಫ್ರಾಂಚೈಸ್ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಡು ಪ್ಲೆಸಿಸ್ ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಹೀಗಾಗಿ ಫಾಫ್ ತಂಡದಲ್ಲೇ ಉಳಿಯಬಹುದು.

ಗ್ಲೆನ್ ಮ್ಯಾಕ್ಸ್‌ವೆಲ್: ಕಳೆದ ವರ್ಷ ಐಪಿಎಲ್‌ನಲ್ಲಿ ಆಸೀಸ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡಿಲ್ಲ. ಆದಾಗ್ಯೂ ಮ್ಯಾಕ್ಸ್‌ವೆಲ್ ತಂಡದಲ್ಲಿ ಉಳಿಯಬಹುದು. ಏಕೆಂದರೆ ಮ್ಯಾಕ್ಸ್‌ವೆಲ್ ಯಾವುದೇ ಹಂತದಲ್ಲೂ ತಂಡದ ಫಲಿತಾಂಶವನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದರ ಜೊತೆಗೆ ಅನುಭವಿ ಸ್ಪಿನ್ ಬೌಲರ್ ಕೂಡ ಆಗಿದ್ದಾರೆ.

ರಜತ್ ಪಾಟಿದಾರ್: ನಿಂತ ನಿಂತಲೇ ಬೌಂಡರಿ ಸಿಕ್ಸರ್ಗಳನ್ನು ಬಾರಿಸುವ ಸಾಮರ್ಥ್ಯವನ್ನು ಹೊಂದಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ತಂಡದಲ್ಲಿ ಉಳಿಯುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಕಳೆದೆರಡು ಆವೃತ್ತಿಗಳಲ್ಲಿ ರಜತ್ ಅವರ ಪ್ರದರ್ಶನವು ಉತ್ತಮವಾಗಿದೆ.

ಯಶ್ ದಯಾಳ್ (ಅನ್‌ಕ್ಯಾಪ್ಡ್): ಕಳೆದ ಸೀಸನ್ನಲ್ಲಿ ಆರ್ಸಿಬಿ ಸೇರಿದ ದಯಾಳ್ ಉತ್ತಮ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ಅವರಿಗೆ ಟೀಂ ಇಂಡಿಯಾದ ಕದ ಕೂಡ ತೆರೆದಿದೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಸಿರಾಜ್ ಜೊತೆಗೆ ಇನ್ನೊಬ್ಬ ದೇಶಿ ಬೌಲರ್ ಬೇಕಿರುವ ಕಾರಣ ದಯಾಳ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದಾಗಿದೆ.
