IND vs ENG: 170 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ 115 ರನ್​ಗಳ ಮುನ್ನಡೆ

India Women Dominate Lord's Test: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಭಾರತ-ಇಂಗ್ಲೆಂಡ್ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 285 ರನ್ ಗಳಿಸಿದರೆ, ಇಂಗ್ಲೆಂಡ್ ಕೇವಲ 170 ರನ್‌ಗಳಿಗೆ ಆಲೌಟ್ ಆಯಿತು. ಕ್ರಾಂತಿ ಗೌಡ್ ಅವರ 5 ವಿಕೆಟ್‌ಗಳ ಅದ್ಭುತ ಪ್ರದರ್ಶನದಿಂದ ಭಾರತ 115 ರನ್‌ಗಳ ಬೃಹತ್ ಮುನ್ನಡೆ ಗಳಿಸಿದೆ. ಇದು ಪಂದ್ಯದಲ್ಲಿ ಭಾರತಕ್ಕೆ ಭದ್ರವಾದ ನೆಲೆಯನ್ನು ಒದಗಿಸಿದೆ.

IND vs ENG: 170 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ 115 ರನ್​ಗಳ ಮುನ್ನಡೆ
Ind Vs Eng Women

Updated on: Jul 11, 2026 | 9:01 PM

ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ (Lord’s Test) ಭಾರತ ಹಾಗೂ ಇಂಗ್ಲೆಂಡ್‌ ವನಿತಾ (India vs England Women) ತಂಡಗಳ ನಡುವೆ ಮೊಟ್ಟ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 285 ರನ್ ಕಲೆಹಾಕಿತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ಇಂಗ್ಲೆಂಡ್‌ ತಂಡ ಪಂದ್ಯದ ಎರಡನೇ ದಿನದ ಎರಡನೇ ಸೆಷನ್​ನಲ್ಲಿಯೇ ತನ್ನೇಲ್ಲ ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 115 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್‌ ಪರ ಆಮಿ ಜೋನ್ಸ್ 52 ರನ್​ಗಳ ಇನ್ನಿಂಗ್ಸ್ ಆಡಿದರೆ, ನ್ಯಾಟ್ ಸಿವರ್-ಬ್ರಂಟ್ 44 ರನ್​ಗಳ ಕಾಣಿಕೆ ನೀಡಿದರು. ಇತ್ತ ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಕ್ರಾಂತಿ ಗೌಡ್ 5 ವಿಕೆಟ್​ಗಳ ಗೊಂಚಲು ಪಡೆದರು.

ಮೊದಲ ದಿನದಾಟದಲ್ಲಿ ಟೀಂ ಇಂಡಿಯಾವನ್ನು 285 ರನ್​ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್‌, ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 22 ರನ್ ಕಲೆಹಾಕಿತ್ತು. ಮೊದಲ ದಿನದಂದು ಕ್ರಾಂತಿ ಗೌಡ್​ ಮೊದಲ ವಿಕೆಟ್ ಉರುಳಿಸಿದ್ದರು. ಇಲ್ಲಿಂದ ಎರಡನೇ ದಿನದಾಟವನ್ನು ಆರಂಭಿಸಿದ ಇಂಗ್ಲೆಂಡ್​ಗೆ ಆರಂಭದಲ್ಲೇ ಆಘಾತ ಎದುರಾಯಿತು. ಎರಡನೇ ದಿನದ ಮೊದಲ ಸೆಷನ್‌ನಲ್ಲಿಯೇ, ಟೀಂ ಇಂಡಿಯಾ ಇಂಗ್ಲೆಂಡ್‌ನ ಮೂರು ವಿಕೆಟ್‌ಗಳನ್ನು ಕಬಳಿಸಿತು, ಅದರಲ್ಲಿ ಎರಡು ವಿಕೆಟ್‌ಗಳನ್ನು ಕ್ರಾಂತಿ ಉರುಳಿಸಿದರು.

40 ರನ್‌ಗಳಿಗೆ ಐದು ವಿಕೆಟ್‌

ಆ ನಂತರ ಜೊತೆಯಾದ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಮತ್ತು ವಿಕೆಟ್ ಕೀಪರ್ ಆಮಿ ಜೋನ್ಸ್ 84 ರನ್‌ಗಳ ಜೊತೆಯಾಟವನ್ನು ಕಟ್ಟಿ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಜೋನ್ಸ್ ಅರ್ಧಶತಕ ಗಳಿಸಿದರೆ, ನಾಯಕಿ 44 ರನ್ ಗಳಿಸಿದರು. ಈ ಪಾಲುದಾರಿಕೆಯು ಇಂಗ್ಲೆಂಡ್ ತಂಡವನ್ನು 47/4 ರಿಂದ 131 ಕ್ಕೆ ಕೊಂಡೊಯ್ದಿತು. ಸ್ಪಿನ್ನರ್ ಸ್ನೇಹ್ ರಾಣಾ ಪಾಲುದಾರಿಕೆಯನ್ನು ಮುರಿದರು. ಈ ಜೊತೆಯಾಟ ಅಂತ್ಯವಾದ ಬಳಿಕ ಇಂಗ್ಲೆಂಡ್​ನ ಮುಂದಿನ ಐದು ವಿಕೆಟ್‌ಗಳು ಕೇವಲ 40 ರನ್‌ಗಳಿಗೆ ಪತನಗೊಂಡವು, ಅವುಗಳಲ್ಲಿ ಎರಡು ವಿಕೆಟ್‌ಗಳನ್ನು ಕ್ರಾಂತಿ ಪಡೆದರು. ಈ ಮೂಲಕ ಕ್ರಾಂತಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ ಇತಿಹಾಸ ನಿರ್ಮಿಸಿದರು.

IND vs ENG: ಲಾರ್ಡ್ಸ್‌ನಲ್ಲಿ ಟೆಸ್ಟ್ ಅರ್ಧಶತಕ ಬಾರಿಸಿದ ಮೊದಲ ಮಹಿಳಾ ಬ್ಯಾಟರ್ ಸ್ಮೃತಿ ಮಂಧಾನ

ಇತಿಹಾಸ ಸೃಷ್ಟಿಸಿದ ಕ್ರಾಂತಿ

ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಮಹಿಳಾ ಬೌಲರ್ ಕ್ರಾಂತಿ ಗೌಡ್. ಇಂಗ್ಲೆಂಡ್ ವಿರುದ್ಧದ ಭಾರತದ ಇನ್ನಿಂಗ್ಸ್‌ನಲ್ಲಿ ಯಾವುದೇ ಬೌಲರ್ ಈ ಸಾಧನೆ ಮಾಡಿರಲಿಲ್ಲ, ಆದ್ದರಿಂದ ಈ ಸಾಧನೆಯನ್ನು ಕ್ರಾಂತಿ ಅವರ ಹೆಸರಿನಲ್ಲಿ ದಾಖಲಿಸಲಾಗಿದೆ. ಇದಲ್ಲದೆ, ಅವರು ಟೆಸ್ಟ್‌ನಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಕಿರಿಯ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಾಂತಿ ಕೇವಲ 22 ವರ್ಷ ಮತ್ತು 333 ದಿನಗಳಲ್ಲಿ ಈ ಸಾಧನೆ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Sat, 11 July 26

Follow Us