ರಣಜಿಯಲ್ಲಿ ಇತಿಹಾಸ ಸೃಷ್ಟಿ: ದಾಖಲೆಯ ತ್ರಿಶತಕ ಸಿಡಿಸಿದ ಒಂದೇ ತಂಡದ ಇಬ್ಬರು ಬ್ಯಾಟರ್ಸ್

|

Updated on: Nov 14, 2024 | 3:56 PM

Ranji Trophy 2024: ಗೋವಾ ಮತ್ತು ಅರುಣಾಚಲ ಪ್ರದೇಶದ ನಡುವಿನ ರಣಜಿ ಟ್ರೋಫಿಯ ಪಂದ್ಯದಲ್ಲಿ ಗೋವಾದ ಕಶ್ಯಪ್ ಬಾಕ್ಲೆ (300 ರನ್) ಮತ್ತು ಸ್ನೇಹಲ್ ಕೌತಾಂಕರ್ (314 ರನ್) ಅವರು ತ್ರಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಒಂದೇ ಇನ್ನಿಂಗ್ಸ್‌ನಲ್ಲಿ ತ್ರಿಶತಕ ಬಾರಿಸಿದ್ದು ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ. ಈ ಅದ್ಭುತ ಜೊತೆಯಾಟದಿಂದ ಗೋವಾ ತಂಡ 552 ರನ್‌ಗಳಿಂದ ಗೆಲುವು ಸಾಧಿಸಿದೆ.

ರಣಜಿಯಲ್ಲಿ ಇತಿಹಾಸ ಸೃಷ್ಟಿ: ದಾಖಲೆಯ ತ್ರಿಶತಕ ಸಿಡಿಸಿದ ಒಂದೇ ತಂಡದ ಇಬ್ಬರು ಬ್ಯಾಟರ್ಸ್
ಕಶ್ಯಪ್ ಹಾಗೂ ಕೌತಾಂಕರ್
Follow us on

ಪ್ರಸ್ತುತ ಭಾರತದಲ್ಲಿ ದೇಶೀ ಟೂರ್ನಿ, ರಣಜಿ ಟ್ರೋಫಿಯ 5ನೇ ಸುತ್ತಿನ ಪಂದ್ಯಗಳು ಶುರುವಾಗಿವೆ. ಅದರಂತೆ ನವೆಂಬರ್ 13 ರಿಂದ ಆರಂಭವಾಗಿರುವ ಗೋವಾ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯದಲ್ಲಿ ದಾಖಲೆ ಸೃಷ್ಟಿಯಾಗಿದೆ. ಗೋವಾ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಗೋವಾ ತಂಡದ ಇಬ್ಬರು ಬ್ಯಾಟ್ಸ್‌ಮನ್​ಗಳು ದಾಖಲೆಯ ತ್ರಿಶತಕ ಸಿಡಿಸಿ, ರಣಜಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಗೋವಾ ತಂಡದ ಕಶ್ಯಪ್ ಬಾಕ್ಲೆ ಮತ್ತು ಸ್ನೇಹಲ್ ಕೌತಾಂಕರ್ ಇಬ್ಬರೂ ತ್ರಿಶತಕ ಬಾರಿಸಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಒಂದೇ ಇನ್ನಿಂಗ್ಸ್‌ನಲ್ಲಿ ತ್ರಿಶತಕ ಸಿಡಿಸಿದ ಇತಿಹಾಸ ನಿರ್ಮಿಸಿದ್ದಾರೆ.

ವಾಸ್ತವವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಅರುಣಾಚಲ ಪ್ರದೇಶ ತಂಡವನ್ನು 84 ರನ್​ಗಳಿಗೆ ಆಲೌಟ್ ಮಾಡಿದ ಗೋವಾ ತಂಡ ಅದ್ಭುತ ಆರಂಭ ಪಡೆದುಕೊಂಡಿತು. 121 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ಜೊತೆಯಾದ ಕಶ್ಯಪ್ ಹಾಗೂ ಕೌತಾಂಕರ್ ಎದುರಾಳಿ ಬೌಲಿಂಗ್ ವಿಭಾಗವನ್ನು ದ್ವಂಸಗೊಳಿಸಿದರು. ಈ ವೇಳೆ ಕಶ್ಯಪ್ 300 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್​ನಲ್ಲಿ 39 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಇವಲ್ಲದೇ ಸ್ನೇಹಲ್ ಕೌತಾಂಕರ್ 314 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದರು.

552 ರನ್​ಗಳ ಗೆಲುವು

ಈ ಇಬ್ಬರ ದಾಖಲೆಯ ತ್ರಿಶತಕದ ಇನ್ನಿಂಗ್ಸ್​ನಿಂದಾಗಿ ಗೋವಾ ತಂಡ 727 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರಲ್ಲಿ ಕಶ್ಯಪ್ ಮತ್ತು ಕೌತಾಂಕರ್ ನಡುವೆ ದಾಖಲೆಯ 606 ಜೊತೆಯಾಟವಿತ್ತು. ಆದರೆ, ಈ ಗೋವಾ ಬ್ಯಾಟ್ಸ್‌ಮನ್‌ಗಳಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್‌ಗಳಾದ ಮಹೇಲಾ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಜೋಡಿ 624 ರನ್‌ಗಳ ಜೊತೆಯಾಟವಾಡಿತ್ತು.

552 ರನ್​ಗಳ ಗೆಲುವು

ಇನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 84 ರನ್‌ಗಳಿಗೆ ಆಲೌಟ್ ಆಗಿದ್ದ ಅರುಣಾಚಲ ಪ್ರದೇಶ ತಂಡ, ಎರಡನೇ ಇನ್ನಿಂಗ್ಸ್​ನಲ್ಲಿ 91 ರನ್​ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಗೋವಾ ತಂಡ 552 ರನ್​ಗಳ ಗೆಲುವು ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಗೋವಾ ಪರ ಮಾರಕ ದಾಳಿ ನಡೆಸಿದ್ದ ಅರ್ಜುನ್ ತೆಂಡೂಲ್ಕರ್ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ