
ಭಾರತ ಎ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ್ ಎ ತಂಡಗಳ ನಡುವಣ ತ್ರಿಕೋನ ಸರಣಿಯಲ್ಲಿ ಟೀಮ್ ಇಂಡಿಯಾ ಫೈನಲ್ಗೇರಿದೆ. ದಂಬುಲ್ಲಾದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಎ ತಂಡದ ವಿರುದ್ಧ ಭಾರತ ಎ ತಂಡ ಅಮೋಘ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ನಾಯಕ ತಿಲಕ್ ವರ್ಮಾ (59), ಪ್ರಿಯಾಂಶ್ ಆರ್ಯ (58) ಮತ್ತು ಕುಮಾರ್ ಕುಶಾಗ್ರ (58) ಅರ್ಧಶತಕಗಳನ್ನು ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ 50 ಓವರ್ಗಳಲ್ಲಿ 319 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ಎ ತಂಡವು 36.5 ಓವರ್ಗಳಲ್ಲಿ ಕೇವಲ 218 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ಎ ತಂಡವು 101 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಟೀಮ್ ಇಂಡಿಯಾದ ನೆಟ್ ರನ್ ರೇಟ್ +0.797 ಕ್ಕೇರಿದೆ.
ಭಾರತ ತಂಡವು 101 ರನ್‌ಗಳ ಭರ್ಜರಿ ಜಯ ಸಾಧಿಸಿದ ಪರಿಣಾಮ +0.797 ನೆಟ್ ರನ್ ರೇಟ್ ಪಡೆದುಕೊಂಡಿದೆ. ಈ ನೆಟ್ ರನ್ ರೇಟ್ನೊಂದಿಗೆ 4 ಅಂಕಗಳನ್ನು ಪಡೆದಿರುವ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ್ ಎ ನಡುವೆ ಒಂದು ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಆ ಪಂದ್ಯದ ಫಲಿತಾಂಶ ಏನೇ ಆದರೂ ಭಾರತದ ಫೈನಲ್ ಸ್ಥಾನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ.
ಏಕೆಂದರೆ ಉಭಯ ತಂಡಗಳ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಮೊದಲ ಅಥವಾ ಎರಡನೇ ಸ್ಥಾನ ಪಡೆಯಲಿದೆ. ಅತ್ತ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಟೀಮ್ ಇಂಡಿಯಾ ದ್ವಿತೀಯ ಸ್ಥಾನಕ್ಕೆ ಕುಸಿಯಬಹುದೇ ಹೊರತು, ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆ ತುಂಬಾ ಕಡಿಮೆ.
ಭಾರತ ಎ ತಂಡವು ಅಫ್ಘಾನಿಸ್ತಾನ್ ಎ ವಿರುದ್ಧ 101 ರನ್‌ಗಳ ಬೃಹತ್ ಆಂತರದಿಂದ ಗೆದ್ದಿರುವುದರಿಂದ, ಟೀಮ್ ಇಂಡಿಯಾ ರನ್ ರೇಟ್ (+0.797) ಅತ್ಯಂತ ಬಲಿಷ್ಠವಾಗಿದೆ. ಅಫ್ಘಾನಿಸ್ತಾನ್ ಎ ತಂಡವು ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದರೂ, ಕಳಪೆ ರನ್ ರೇಟ್ (-1.983) ಹೊಂದಿರುವ ಕಾರಣ ಅವರು ಭಾರತದ ನೆಟ್ ರನ್ ರೇಟ್ ಮಟ್ಟಕ್ಕೆ ತರುವುದು ಕಷ್ಟಸಾಧ್ಯ. ಹೀಗಾಗಿ ಶ್ರೀಲಂಕಾ ತಂಡವನ್ನು ರನ್ ರೇಟ್ ಆಧಾರದಲ್ಲಿ ಹಿಂದಿಕ್ಕಬಹುದೇ ಹೊರತು, ಭಾರತದ ನೆಟ್ ರನ್ ರೇಟ್ ಮೀರಿಸಲು ಪವಾಡವೇ ನಡೆಯಬೇಕು.
ಒಂದು ವೇಳೆ ಅಫ್ಘಾನಿಸ್ತಾನ್ ಎ ತಂಡವು ಭಾರತವನ್ನು ರನ್ ರೇಟ್‌ನಲ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಬೇಕಾದರೆ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಈ ರೀತಿಯಾಗಿ ಅಸಾಧ್ಯವಾದ ಗೆಲುವು ಸಾಧಿಸಬೇಕಾಗುತ್ತದೆ.
ಅಂದರೆ ಟೀಮ್ ಇಂಡಿಯಾದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲು ಅಫ್ಘಾನಿಸ್ತಾನ್ ಎ ತಂಡವು ಕನಿಷ್ಠ 200 ರನ್‌ಗಳ ಗುರಿಯನ್ನು 3 ಓವರ್ಗಳೊಗೆ ಚೇಸ್ ಮಾಡಬೇಕು. ಇನ್ನು ಅಫ್ಘಾನ್ ಪಡೆ 300 ರನ್‌ಗಳ ಗುರಿ ನೀಡಿದರೆ ಶ್ರೀಲಂಕಾ ತಂಡವನ್ನು 20-30 ರನ್ಗಳಿಗೆ ಆಲೌಟ್ ಮಾಡಬೇಕು.
ಈ ಎರಡೂ ಫಲಿತಾಂಶಗಳು ಮೂಡಿಬರಬೇಕಿದ್ದರೆ ಪವಾಡವೇ ಸಂಭವಿಸಬೇಕು. ಒಂದು ವೇಳೆ ಪವಾಡ ನಡೆದು ಅಂತಹದೊಂದು ಫಲಿತಾಂಶ ಮೂಡಿಬಂದರೂ ಭಾರತ ತಂಡವು ಅಗ್ರಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಕುಸಿಯಬಹುದೇ ಹೊರತು ಮೂರನೇ ಸ್ಥಾನಕ್ಕಿಳಿಯಲ್ಲ.
ಇದನ್ನೂ ಓದಿ: ಕಾಂಗೋ ಮುಂದೆ ಕಂಗೆಟ್ಟ ಕ್ರಿಸ್ಟಿಯಾನೊ ರೊನಾಲ್ಡೊ!
ಹೀಗಾಗಿಯೇ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ನಡುವಣ ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾವನ್ನು ಫೈನಲಿಸ್ಟ್ ಎಂದು ಪರಿಗಣಿಸಲಾಗಿದೆ. ಅದರಂತೆ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಖಚತವಾಗಿದೆ.