AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗೋ ಮುಂದೆ ಕಂಗೆಟ್ಟ ಕ್ರಿಸ್ಟಿಯಾನೊ ರೊನಾಲ್ಡೊ!

ಫುಟ್‌ಬಾಲ್ ಸಾಮ್ರಾಜ್ಯದ ಇಬ್ಬರು ಧ್ರುವತಾರೆಗಳು, ಒಂದೇ ದಿನ ಕಣಕ್ಕಿಳಿದರೂ ಸಂಪೂರ್ಣ ಭಿನ್ನ ಆರಂಭ ಪಡೆದುಕೊಂಡಿದ್ದಾರೆ. ಒಂದೆಡೆ ಅರ್ಜೆಂಟೀನಾದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ಗೋಲುಗಳ ಮಿಂಚಿನ ಪ್ರದರ್ಶನದೊಂದಿಗೆ ಮೊದಲ ಪಂದ್ಯದಲ್ಲೇ ಇತಿಹಾಸ ಬರೆದರೆ, ಮತ್ತೊಂದೆಡೆ ಪೋರ್ಚುಗಲ್‌ನ ಮಟಾಡೋರ್ ಕ್ರಿಸ್ಟಿಯಾನೋ ರೊನಾಲ್ಡೊ ಕಾಂಗೋ ಮುಂದೆ ಕಂಗಾಲಾಗಿ ನಿರಾಸೆ ಮೂಡಿಸಿದ್ದಾರೆ.

ಕಾಂಗೋ ಮುಂದೆ ಕಂಗೆಟ್ಟ ಕ್ರಿಸ್ಟಿಯಾನೊ ರೊನಾಲ್ಡೊ!
Cristiano RonaldoImage Credit source: AFP
ಝಾಹಿರ್ ಯೂಸುಫ್
|

Updated on: Jun 18, 2026 | 8:06 AM

Share

FIFA World Cup 2026: ಫಿಫಾ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿರುವ ಪೋರ್ಚುಗಲ್, ದುರ್ಬಲ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DR Congo) ವಿರುದ್ಧ 1-1 ಗೋಲುಗಳ ಆಘಾತಕಾರಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಜಗತ್ತಿನ ಶ್ರೇಷ್ಠ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದಾಖಲೆಯ 6ನೇ ವಿಶ್ವಕಪ್ ಅಭಿಯಾನಕ್ಕೆ ಕಾಂಗೋ ಪಡೆ ಆರಂಭದಲ್ಲೇ ತಣ್ಣೀರೆರಚಿದ್ದಾರೆ. ಅಷ್ಟೇ ಈ ಪಂದ್ಯದಲ್ಲಿ ರೊನಾಲ್ಡೊ ಅನುಭವಿಸಿದ ಹತಾಶೆ ಮತ್ತು ಮಂಕಾದ ಪ್ರದರ್ಶನ ಈಗ ಜಾಗತಿಕ ಫುಟ್‌ಬಾಲ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಾಂಗೋ ಹೊಸ ಇತಿಹಾಸ:

ಪಂದ್ಯ ಆರಂಭವಾದ ಕೇವಲ 6ನೇ ನಿಮಿಷದಲ್ಲೇ ಝುವಾವೊ ನೆವೆಸ್ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಪೋರ್ಚುಗಲ್ 1-0 ಮುನ್ನಡೆ ಸಾಧಿಸಿ ಸುಲಭ ಜಯದ ಮುನ್ಸೂಚನೆ ನೀಡಿತ್ತು. ಆದರೆ, ದ್ವಿತೀಯಾರ್ಧಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ (45+5ನೇ ನಿಮಿಷ) ಕಾಂಗೋದ ಯೋವಾನೆ ವಿಸ್ಸಾ ಹೆಡರ್ ಮೂಲಕ ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಇದು ವಿಶ್ವಕಪ್ ಇತಿಹಾಸದಲ್ಲೇ ಕಾಂಗೋ ತಂಡ ದಾಖಲಿಸಿದ ಮೊದಲ ಗೋಲು ಮತ್ತು ಮೊದಲ ಪಾಯಿಂಟ್ ಆಗಿ ಇತಿಹಾಸ ಪುಟ ಸೇರಿತು.

ಕಂಗೆಟ್ಟ ಕ್ರಿಸ್ಟಿಯಾನೊ:

ಕಾಂಗೋ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರದರ್ಶನವನ್ನು ಅಂಕಿ-ಅಂಶಗಳ ಆಧಾರದ ಮೇಲೆ ವಿಶ್ಲೇಷಿಸಿದರೆ, ಅವರು ಮೈದಾನದಲ್ಲಿ ಎಷ್ಟು ಮಂಕಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಪೂರ್ಣ 90 ನಿಮಿಷಗಳ ಕಾಲ ಮೈದಾನದಲ್ಲಿದ್ದ ರೊನಾಲ್ಡೊ ಅವರ ಅಧಿಕೃತ ಪಂದ್ಯದ ಅಂಕಿ-ಅಂಶಗಳು ಇಲ್ಲಿವೆ…

  • ಒಟ್ಟು ಟಚ್: ಇಡೀ ಪಂದ್ಯದಲ್ಲಿ ರೊನಾಲ್ಡೊ ಕೇವಲ 25 ಬಾರಿ ಮಾತ್ರ ಚೆಂಡನ್ನು ಟಚ್ ಮಾಡಿದ್ದಾರೆ. ಇದು ಅವರ ವಿಶ್ವಕಪ್ ವೃತ್ತಿಜೀವನದಲ್ಲೇ ಆರಂಭಿಕ ಆಟಗಾರನಾಗಿ ಅತ್ಯಂತ ಕಡಿಮೆ ಎಂಬುದು ವಿಶೇಷ.
  • 5 ಟಚ್​​ಗಳು: ಕಾಂಗೋ ತಂಡದ ಪೆನಾಲ್ಟಿ ಬಾಕ್ಸ್‌ನೊಳಗೆ  ರೊನಾಲ್ಡೊಗೆ ಸಿಕ್ಕಿದ್ದು ಕೇವಲ 5 ಟಚ್​ಗಳು ಮಾತ್ರ.
  • ಒಟ್ಟು ಪಾಸ್‌ಗಳು: ರೊನಾಲ್ಡೊ ಒಟ್ಟು 21 ಪಾಸ್‌ಗಳನ್ನು ನೀಡಲು ಪ್ರಯತ್ನಿಸಿದರು. ಅದರಲ್ಲಿ 19 ಪಾಸ್‌ಗಳು ನಿಖರವಾಗಿ ಸಹ ಆಟಗಾರರನ್ನು ತಲುಪಿದ್ದವು.
  • ಅಸಿಸ್ಟ್: ಸಹ ಆಟಗಾರರಿಗೆ ಗೋಲು ಗಳಿಸಲು ನೆರವಾಗುವ ಯಾವುದೇ ಅಸಿಸ್ಟ್ ನೀಡಲು ಅವರಿಗೆ ಸಾಧ್ಯವಾಗಲಿಲ್ಲ
  • ಫೈನಲ್ ಥರ್ಡ್ ಪಾಸ್: ಪಂದ್ಯದುದ್ದಕ್ಕೂ ಅವರು ಎದುರಾಳಿ ಕೋಟೆಯೊಳಗೆ ನೀಡಿದ್ದು ಕೇವಲ 1 ಪಾಸ್ ಮಾತ್ರ
  • ಗೋಲು ಶಾಟ್‌ಗಳು: ರೊನಾಲ್ಡೊ ಕಾಂಗೋ ಗೋಲು ಪೆಟ್ಟಿಗೆಯತ್ತ ಒಟ್ಟು 2 ರಿಂದ 3 ಬಾರಿ ಶಾಟ್ ಬಾರಿಸಲು ಪ್ರಯತ್ನಿಸಿದ್ದಾರೆ.
  • ಶಾಟ್ಸ್ ಆನ್ ಟಾರ್ಗೆಟ್: ಅತ್ಯಂತ ನಿರಾಶಾದಾಯಕ ಸಂಗತಿಯೆಂದರೆ, ಅವರ ಯಾವುದೇ ಶಾಟ್‌ಗಳು ಕಾಂಗೋ ಗೋಲ್‌ಕೀಪರ್‌ನತ್ತ ನೇರ ಗುರಿಯನ್ನು ಹೊಂದಿರಲಿಲ್ಲ.

ರೊನಾಲ್ಡೊ ವೈಫಲ್ಯಕ್ಕೆ ಕಾರಣವೇನು?

  •  ಮಿಡ್‌ಫೀಲ್ಡ್ ಸಂಪರ್ಕದ ವೈಫಲ್ಯ: ಪೋರ್ಚುಗಲ್‌ನ ಮಧ್ಯಮ ಕ್ರಮಾಂಕದ ಆಟಗಾರರು ರೊನಾಲ್ಡೊ ಅವರಿಗೆ ನಿಖರವಾದ ಪಾಸ್‌ಗಳನ್ನು ತಲುಪಿಸುವಲ್ಲಿ ಸಂಪೂರ್ಣ ವಿಫಲರಾದರು. ಹೀಗಾಗಿ ಕಾಂಗೋದ ಆಕ್ರಮಣಕಾರಿ ರಕ್ಷಣಾ ತಂತ್ರದಿಂದಾಗಿ ರೊನಾಲ್ಡೊ ಮೈದಾನದಲ್ಲಿ ಒಂಟಿಯಾದರು.
  •  ‘ಮ್ಯಾನ್-ಮಾರ್ಕಿಂಗ್’ ತಂತ್ರ: ಕಾಂಗೋ ತಂಡವು ರೊನಾಲ್ಡೊ ಅವರನ್ನು ಕಟ್ಟಿಹಾಕಲು ವಿಶೇಷ ರಕ್ಷಣಾ ತಂತ್ರ ರೂಪಿಸಿತ್ತು. ಅವರು ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲೇ ಇಬ್ಬರು ಅಥವಾ ಮೂವರು ಡಿಫೆಂಡರ್‌ಗಳು ಅವರನ್ನು ಸುತ್ತುವರಿಯುವ ಮೂಲಕ ಮುಕ್ತವಾಗಿ ಚಲಿಸಲು ಅವಕಾಶ ನೀಡಲಿಲ್ಲ.
  •   ಕ್ಷೀಣಿಸಿದ ದೈಹಿಕ ವೇಗ: 41ರ ಹರೆಯದಲ್ಲೂ ರೊನಾಲ್ಡೊ ಅದ್ಭುತ ಫಿಟ್ನೆಸ್ ಹೊಂದಿದ್ದರೂ, ಅವರ ಕೌಂಟರ್-ಅಟ್ಯಾಕಿಂಗ್ ವೇಗ ಮತ್ತು ಚುರುಕುತನ ಮೊದಲಿನಷ್ಟಿರಲಿಲ್ಲ. ಕಾಂಗೋದ ಯುವ ಮತ್ತು ದೈಹಿಕವಾಗಿ ಬಲಿಷ್ಠ ಆಟಗಾರರ ವೇಗಕ್ಕೆ ಸರಿಸಾಟಿಯಾಗಲು ಅವರು ಪರದಾಡಿದರು.
  •  ಕಳಪೆ ‘ಫಿನಿಶಿಂಗ್’: ಪಂದ್ಯದ ದ್ವಿತೀಯಾರ್ಧದಲ್ಲಿ ರೊನಾಲ್ಡೊ ಅವರಿಗೆ ಎರಡು ಸ್ಪಷ್ಟ ಗೋಲಿನ ಅವಕಾಶಗಳು ಸಿಕ್ಕಿದ್ದವು. ಆದರೆ, ತಮ್ಮ ಎಂದಿನ ಕ್ಲಿನಿಕಲ್ ಶೈಲಿಯಲ್ಲಿ ಚೆಂಡನ್ನು ಗೋಲ್ ಬಾಕ್ಸ್‌ನೊಳಗೆ ನುಗ್ಗಿಸುವಲ್ಲಿ ವಿಫಲರಾಗಿದ್ದು ಅವರ ಹತಾಶೆಯನ್ನು ಹೆಚ್ಚಿಸಿತು.

ಇದನ್ನೂ ಓದಿ: ಟೀಮ್ ಇಂಡಿಯಾ ದಾಂಡಿಗರ ಆರ್ಭಟ… 11 ದಾಖಲೆಗಳು ನಿರ್ಮಾಣ

ಒಟ್ಟಾರೆಯಾಗಿ ಹೇಳುವುದಾದರೆ, ಫುಟ್‌ಬಾಲ್ ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಈ ಆರಂಭಿಕ ಹಿನ್ನಡೆ ಹೊಸದೇನಲ್ಲ. ಕಾಂಗೋ ವಿರುದ್ಧದ ಪಂದ್ಯವು ಪೋರ್ಚುಗಲ್ ತಂಡದ ತಂತ್ರಗಾರಿಕೆಗೆ ಒಡ್ಡಿದ ಸವಾಲಾಗಿದ್ದರೆ, ರೊನಾಲ್ಡೊ ಪಾಲಿಗೆ ತಮ್ಮ ವೃತ್ತಿಜೀವನದ ಮತ್ತೊಂದು ಕಠಿಣ ಪರೀಕ್ಷೆಯಾಗಿದೆ.

ಟೀಕೆಗಳು ಮತ್ತು ಒತ್ತಡಗಳ ನಡುವೆಯೇ ಪುಟಿದೆೇಳುವುದು ರೊನಾಲ್ಡೊ ಅವರ ಜನ್ಮಜಾತ ಗುಣ. ಈ ಆಘಾತಕಾರಿ ಡ್ರಾದಿಂದ ಪಾಠ ಕಲಿಯಲಿರುವ ಪೋರ್ಚುಗಲ್ ಪಡೆ, ಉಜ್ಬೇಕಿಸ್ತಾನ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ. ಅಂತಹದೊಂದು ರಣತಂತ್ರದೊಂದಿಗೆ ರೊನಾಲ್ಡೊ ಮತ್ತೆ ವಿಶ್ವರೂಪ ಪ್ರದರ್ಶಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Follow Us