‘ಆಗ ತಾನೇ ಸ್ನಾನ ಮುಗಿಸಿ ಹೊರಬಂದಿದ್ದೆ’; ಗೆಲುವಿನ ಇನ್ನಿಂಗ್ಸ್ ಬಳಿಕ ರಾಹುಲ್ ಹೇಳಿದ್ದಿದು

|

Updated on: Oct 09, 2023 | 7:51 AM

ICC World Cup 2023: ಸಾಕಷ್ಟು ಆಯಾಸದ ನಡುವೆಯೂ 97 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಾಹುಲ್‌, ‘ನಾನು ಆಸೀಸ್ ಇನ್ನಿಂಗ್ಸ್ ಮುಗಿದ ಬಳಿಕ ಸ್ನಾನ ಮುಗಿಸಿ ಆಗ ತಾನೇ ಹೊರಬಂದಿದ್ದೆ. ಈ ಬಾರಿ ಕನಿಷ್ಠ ಅರ್ಧ ಗಂಟೆಯಾದರೂ ವಿಶ್ರಾಂತಿ ಪಡೆಯೋಣ ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ ಎಂದು ರಾಹುಲ್ ಹೇಳಿದ್ದಾರೆ.

‘ಆಗ ತಾನೇ ಸ್ನಾನ ಮುಗಿಸಿ ಹೊರಬಂದಿದ್ದೆ’; ಗೆಲುವಿನ ಇನ್ನಿಂಗ್ಸ್ ಬಳಿಕ ರಾಹುಲ್ ಹೇಳಿದ್ದಿದು
ವಿರಾಟ್ ಕೊಹ್ಲಿ- ಕೆಎಲ್ ರಾಹುಲ್
Follow us on

ವಿಶ್ವಕಪ್​ನ (World Cup 2023) ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಫಲಿತಾಂಶ ಪಡೆದಿದೆ. ಆಸ್ಟ್ರೇಲಿಯಾ ನೀಡಿದ 200 ರನ್​ಗಳ ಗುರಿ ಬೆನ್ನಟ್ಟಿದ ಭಾರತ (India vs Australia) 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ತಂಡದ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಕೆಎಲ್ ರಾಹುಲ್ 150 ಕ್ಕೂ ಅಧಿಕ ರನ್​ಗಳ ಜೊತೆಯಾಟ ಆಡುವ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಈ ವೇಳೆ ವಿರಾಟ್ ಕೊಹ್ಲಿ 85 ರನ್ ಸಿಡಿಸಿ ತಮ್ಮ ಇನಿಂಗ್ಸ್‌ ಮುಗಿಸಿದರೆ, ಕೆಎಲ್ ರಾಹುಲ್ (KL Rahul) ಮಾತ್ರ ಅಜೇಯ 97 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಆದರೆ ಕೇವಲ ಮೂರೇ ಮೂರು ರನ್​ಗಳಿಂದ ಶತಕ ವಂಚಿತರಾದರು. ಈ ಗೆಲುವಿನ ಇನ್ನಿಂಗ್ಸ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ರಾಹುಲ್, ತಮ್ಮ ಸ್ಮರಣೀಯ ಇನ್ನಿಂಗ್ಸ್ ಬಗ್ಗೆ ಹಾಗೂ ಆರಂಭಿಕ ಆಘಾತದ ಬಗ್ಗೆ ಮೌನ ಮುರಿದಿದ್ದಾರೆ.

ವಾಸ್ತವವಾಗಿ ಆಸ್ಟ್ರೇಲಿಯಾ ನೀಡಿದ 200 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಅನಿರೀಕ್ಷಿತ ಆರಂಭ ಸಿಕ್ಕಿತು. ತಂಡದ ಮೂವರು ಬ್ಯಾಟರ್​ಗಳು ಖಾತೆಯನ್ನೇ ತೆರೆಯದೆ ಪೆವಲಿಯನ್ ಸೇರಿಕೊಂಡರು. ಆರಂಭಿಕರಿಬ್ಬರಾದ ರೋಹಿತ್ ಶರ್ಮಾ ಇಶಾನ್ ಕಿಶನ್ ಹಾಗೂ 4ನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್​ಗೆ ಒಂದೇ ಒಂದು ರನ್ ಬಾರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತದ ಇನ್ನಿಂಗ್ಸ್ ಜವಬ್ದಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ವಿರಾಟ್ ಕೊಹ್ಲಿ ಹಾಗೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕೆಎಲ್ ರಾಹುಲ್ ಹೆಗಲ ಮೇಲೆ ಬಿತ್ತು. ಈ ಇಬ್ಬರೂ ಸಹ ಜವಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕಿಂಗ್ ಕೊಹ್ಲಿ ಕ್ಯಾಚ್ ಕೈಚೆಲ್ಲಿ ಸೋಲಿಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ! ವಿಡಿಯೋ ನೋಡಿ

ಕೊಹ್ಲಿ ಜೊತೆ ಇನ್ನಿಂಗ್ಸ್ ಕಟ್ಟುವುದು ಕಷ್ಟ

ಭಾರತದ ಇನ್ನಿಂಗ್ಸ್​ನ ಎರಡು ಮತ್ತು ಮೂರನೇ ಓವರ್​ನಲ್ಲೇ ಜೊತೆಯಾದ ಕೊಹ್ಲಿ ಹಾಗೂ ರಾಹುಲ್ ಬರೋಬ್ಬರಿ 165 ರನ್​ಗಳ ಜೊತೆಯಾಟ ಆಡಿದರು. ಆಸೀಸ್ ಇನ್ನಿಂಗ್ಸ್ ವೇಳೆ ಸಂಪೂರ್ಣ 50 ಓವರ್ ವಿಕೆಟ್ ಕೀಪಿಂಗ್ ಮಾಡಿದ ಕೆಎಲ್ ರಾಹುಲ್​ಗೆ ಕೊಹ್ಲಿ ಜೊತೆ ಇನ್ನಿಂಗ್ಸ್ ಕಟ್ಟುವುದು ಕೊಂಚ ತ್ರಾಸದಾಯಕ ಕೆಲಸವಾಯಿತು. ಏಕೆಂದರೆ ಕೊಹ್ಲಿ ಕ್ರೀಸ್​ನಲ್ಲಿದ್ದರೆ, ಅವರು ಬೌಂಡರಿ ಹಾಗೂ ಸಿಕ್ಸರ್​ಗಳಿಗೆ ಹೆಚ್ಚಿನ ಆದ್ಯತೆ ನೀಡದರೆ, ಸಿಂಗಲ್ಸ್ ಹಾಗೂ ಡಬಲ್ಸ್​ ಕಡೆ ಹೆಚ್ಚು ಗಮನ ನೀಡುತ್ತಾರೆ. ಇದಲ್ಲದೆ ಕೊಹ್ಲಿ ಸಿಂಗಲ್ಸ್​ಗಳನ್ನು ಡಬಲ್ ಆಗಿ ಪರಿವರ್ತಿಸುವಲ್ಲಿ ನಿಸ್ಸೀಮರು. ಹೀಗಾಗಿ ಕೊಹ್ಲಿಯೊಂದಿಗೆ ಕ್ರೀಸ್​ನಲ್ಲಿ ಇನ್ನಿಂಗ್ಸ್ ಕಟ್ಟುವುದು ಭಾರತದ ಇತರೆ ಬ್ಯಾಟರ್​ಗಳಿಗೆ ಭಾರಿ ಕಷ್ಟ. ಅದರಲ್ಲೂ ಸಂಪೂರ್ಣ 50 ಓವರ್​ ಕೀಪಿಂಗ್ ಮಾಡಿ, ಆ ಬಳಿಕ 3ನೇ ಓವರ್​ನಲ್ಲೇ ಬ್ಯಾಟಿಂಗ್​ಗೆ ಬಂದ ರಾಹುಲ್​ಗೆ ಇದು ಕೊಂಚ ತ್ರಾಸದಾಯಕ ಕೆಲಸವಾಯಿತು.

ಪಿಚ್ ಅಸಮ ಬೌನ್ಸ್ ಹೊಂದಿತ್ತು

ಸಾಕಷ್ಟು ಆಯಾಸದ ನಡುವೆಯೂ 97 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಾಹುಲ್‌, ‘ನಾನು ಆಸೀಸ್ ಇನ್ನಿಂಗ್ಸ್ ಮುಗಿದ ಬಳಿಕ ಸ್ನಾನ ಮುಗಿಸಿ ಆಗ ತಾನೇ ಹೊರಬಂದಿದ್ದೆ. ಈ ಬಾರಿ ಕನಿಷ್ಠ ಅರ್ಧ ಗಂಟೆಯಾದರೂ ವಿಶ್ರಾಂತಿ ಪಡೆಯೋಣ ಎಂದುಕೊಂಡಿದ್ದೆ. ಆದರೆ ಕೇವಲ 3ನೇ ಓವರ್​ನಲ್ಲಿಯೇ ನಾನು ಬ್ಯಾಟಿಂಗ್‌ಗೆ ಇಳಿಯಬೇಕಾಯಿತು. ಈ ವೇಳೆ ನನಗೆ ಸಲಹೆ ನೀಡಿದ ವಿರಾಟ್ ಸ್ವಲ್ಪ ಸಮಯದವರೆಗೆ ಟೆಸ್ಟ್ ಕ್ರಿಕೆಟ್ ಆಡುವಂತೆ ಹೇಳಿದರು. ನಾನು ಅದನ್ನು ಮಾಡಿದೆ. ತಂಡಕ್ಕಾಗಿ ಇಂತಹ ಇನಿಂಗ್ಸ್ ಆಡುವುದು ಸಂತಸ ತಂದಿದೆ. ಆರಂಭದಲ್ಲಿ ವೇಗಿಗಳಿಗೆ ಪಿಚ್‌ನಿಂದ ಸ್ವಲ್ಪ ಅನುಕೂಲ ಸಿಕ್ಕಿತು. ನಂತರ ಇಬ್ಬನಿಯಿಂದಾಗಿ ಪರಿಸ್ಥಿತಿಗಳು ಸ್ವಲ್ಪ ಸುಧಾರಿಸಿತು. ಆದರೆ ಪರಿಸ್ಥಿತಿಯು ಬ್ಯಾಟಿಂಗ್‌ಗೆ ಸಂಪೂರ್ಣವಾಗಿ ಪೂರಕವಾಗಿರಲಿಲ್ಲ. ಪಿಚ್ ಅಸಮ ಬೌನ್ಸ್ ಹೊಂದಿತ್ತು’ ಎಂದು ರಾಹುಲ್ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ