
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ಅಭಿಮಾನಿಗಳ ಬಳಿ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಕ್ಷಮೆಯಾಚಿಸಿದ್ದಾರೆ. ಇಂತಹದೊಂದು ಕ್ಷಮಾಪಣೆಗೆ ಮುಖ್ಯ ಕಾರಣ ತಂಡದ ಕಳಪೆ ಪ್ರದರ್ಶನ. ಅದರಲ್ಲೂ ಈ ಬಾರಿ ಬೆಂಗಳೂರಿನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದಿರುವ ಕಾರಣ ಸ್ಮೃತಿ ಮಂಧಾನ ಅಭಿಮಾನಿಗಳ ಬಳಿಕ ಕ್ಷಮಾಪಣೆ ಕೋರಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ, ಬೆಂಗಳೂರಿನಲ್ಲಿ ಈ ಬಾರಿ ನಮಗೆ ಒಂದೇ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ. ಇದಾಗ್ಯೂ ಪ್ರತಿ ಬಾರಿ ಆರ್ಸಿಬಿ ಅಭಿಮಾನಿಗಳು ನಮ್ಮ ಬೆಂಬಲಕ್ಕೆ ನಿಂತಿದ್ದರು. ಅದಕ್ಕಾಗಿಯೇ ಆರ್ಸಿಬಿ ಫ್ಯಾನ್ಸ್ ವಿಶ್ವದ ಅತ್ಯುತ್ತಮ ಅಭಿಮಾನಿಗಳು ಎನಿಸಿಕೊಂಡಿರುವುದು.
ನಮ್ಮ ಸೋಲಿನ ಹೊರತಾಗಿಯೂ ಆರ್ಸಿಬಿ ಅಭಿಮಾನಿಗಳು ತುಂಬಾ ಬೆಂಬಲ ನೀಡಿದ್ದಾರೆ. ಇದಾಗ್ಯೂ ನಮಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದು ಮ್ಯಾಚ್ ಕೂಡ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ನಾನು ಆರ್ಸಿಬಿ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ.
ವಡೋದರಾದಲ್ಲಿ ನಡೆದ ಈ ಬಾರಿಯ ಐಪಿಎಲ್ನ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆ ಬಳಿಕ ಬ್ಯಾಕ್ ಟು ಬ್ಯಾಕ್ 4 ಸೋಲುಗಳನ್ನು ಕಂಡಿದೆ. ಅದರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 4 ಮ್ಯಾಚ್ಗಳಲ್ಲೂ ಮುಗ್ಗರಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಈ ನಿರಾಸೆಯ ಕಾರಣದಿಂದಲೇ ಇದೀಗ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.
ಇನ್ನು ಆರ್ಸಿಬಿ ತಂಡಕ್ಕೆ ಎರಡು ಪಂದ್ಯಗಳು ಬಾಕಿಯಿದ್ದು, ಈ ಮ್ಯಾಚ್ಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ಗೆ ಪ್ರವೇಶಿಸಬಹುದು. ಈ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸುವ ನಾವು ಆರ್ಸಿಬಿ ಅಭಿಮಾನಿಗಳು ಹೆಮ್ಮೆಪಡುವಂತೆ ಮಾಡುತ್ತೇವೆ ಎಂದು ಸ್ಮೃತಿ ಮಂಧಾನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Champions Trophy 2025: ಅದೇ ನಾಲ್ಕು… ನಾಲ್ಕರಲ್ಲಿ ಎರಡು… ಹಿಸ್ಟರಿ ರಿಪೀಟ್
RCB ತನ್ನ ಮುಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಮಾರ್ಚ್ 8 ರಂದು ನಡೆಯಲಿರುವ ಈ ಪಂದ್ಯಕ್ಕೆ ಲಕ್ನೋನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಮಾರ್ಚ್ 11 ರಂದು ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಜರುಗಲಿದೆ.