
ಕ್ರಿಕೆಟ್ ಅನ್ನು ರೋಮಾಂಚನಗೊಳಿಸಲು ಐಸಿಸಿ ಹೊಸ ನಿಯಮಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಿದೆ. ಇದೀಗ ಆಟವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಮತ್ತೊಂದು ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಈ ನಿಯಮದಿಂದಾಗಿ ಬ್ಯಾಟ್ಸ್‌ಮನ್ ಇನ್ಮುಂದೆ ವಿಕೆಟ್ ಹಿಂದೆ ಹೋಗಿ ಶಾಟ್ ಬಾರಿಸುವಂತಿಲ್ಲ. ಒಂದು ವೇಳೆ ಶಾಟ್ ಬಾರಿಸಿದರೂ ಅದಕ್ಕೆ ರನ್ ನೀಡಲಾಗುವುದಿಲ್ಲ.
ಈ ಹೊಸ ಐಸಿಸಿ ನಿಯಮದ ಪ್ರಕಾರ, ಬ್ಯಾಟ್ಸ್‌ಮನ್ ಚೆಂಡನ್ನು ಆಡುವಾಗ ಸಂಪೂರ್ಣವಾಗಿ ಸ್ಟಂಪ್‌ಗಳ ಹಿಂದೆ ಹೋದರೆ ಅದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಸ್ಟಂಪ್ ಹಿಂದೆ ಹೋಗಿ ಶಾಟ್ ಬಾರಿಸುವಾಗ ಬ್ಯಾಟರ್ನ ಕೈ ಅಥವಾ ದೇಹದ ಭಾಗವು ಪಿಚ್ನಲ್ಲಿದ್ದರೆ ರನ್ ನೀಡಲಾಗುತ್ತದೆ. ಇಲ್ಲದಿದ್ದರೆ ಡೆಡ್ ರನ್ ಎಂದು ಘೋಷಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಬೌಲರ್‌ನನ್ನು ವಂಚಿಸಲು ಬ್ಯಾಟ್ಸ್‌ಮನ್‌ಗಳು ಸ್ಟಂಪ್‌ಗಳ ಹಿಂದೆ ಹೋಗಿ ಬ್ಯಾಟ್ ಬೀಸುವುದನ್ನು ನೀವು ನೋಡಿರುತ್ತೀರಿ. ಅದರಲ್ಲೂ ವೆಸ್ಟ್ ಇಂಡೀಸ್ ದಂತಕಥೆ ಕೀರನ್ ಪೊಲಾರ್ಡ್ ಇಂತಹ ಶಾಟ್ಗಳ ಮೂಲಕ ಹಲವು ಬಾರಿ ರನ್ಗಳಿಸಿದ್ದಾರೆ.
ಬೌಲರ್‌ಗಳನ್ನು ತೊಂದರೆಗೊಳಿಸಲು ಮತ್ತು ಫೀಲ್ಡಿಂಗ್‌ಗೆ ಅಡ್ಡಿಪಡಿಸಲು ಬ್ಯಾಟ್ಸ್‌ಮನ್‌ಗಳು ಈ ತಂತ್ರಗಳತ್ತ ಮುಖ ಮಾಡಿದ್ದಾರೆ. ಆದರೆ ಈ ತಂತ್ರಕ್ಕೆ ಕಡಿವಾಣ ಹಾಕಲು ಐಸಿಸಿ ನಿರ್ಧರಿಸಿದೆ. ಅದರಂತೆ ಇದೀಗ ಹೊಸ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.
ಅಂದರೆ ಬ್ಯಾಟರ್ ವಿಕೆಟ್ ಹಿಂದೆ ಹೋಗಿ ರನ್ಗಳಿಸಿದರೆ, ಆತನ ಕೈ ಅಥವಾ ಕಾಲು ಅಥವಾ ಯಾವುದೇ ಭಾಗವು ಪಿಚ್ ಮೇಲ್ಮೈ ಮೇಲಿರಬೇಕು. ದೇಹದ ಯಾವುದೇ ಭಾಗ ಪಿಚ್ನ ಮೇಲ್ಮೈಯಲ್ಲಿರದೇ ರನ್ಗಳಿಸಿದರೆ ಅದನ್ನು ಕಾನೂನುಬದ್ಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಐಸಿಸಿಯ ಈ ನಿಯಮವು ಬೌಲರ್‌ಗಳಿಗೆ ಸ್ವಲ್ಪ ಅನುಕೂಲವನ್ನು ನೀಡಲಿದೆ. ಏಕೆಂದರೆ ಇನ್ಮುಂದೆ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಥಾನದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಈ ನಿಯಮವು ಟಿ20, ಏಕದಿನ ಮತ್ತು ಟೆಸ್ಟ್ ಸೇರಿದಂತೆ ಎಲ್ಲಾ ಸ್ವರೂಪಗಳಿಗೂ ಅನ್ವಯಿಸಲಿದೆ ಎಂದು ಐಸಿಸಿ ತಿಳಿಸಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬ್ಯಾಟ್ಸ್‌ಮನ್‌ಗಳ ಕುತಂತ್ರವನ್ನು ನಿಗ್ರಹಿಸಲು ಜಾರಿಗೆ ತಂದಿರುವ ಹೊಸ ನಿಯಮದ ಕುರಿತು ಮಾಜಿ ಐಸಿಸಿ ಅಂಪೈರ್ ಅನಿಲ್ ಚೌಧರಿ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದರೆ ಐಸಿಸಿಯ ಹೊಸ ನಿಯಮದ ಸಂಪೂರ್ಣ ಮಾಹಿತಿ ಸಿಗಲಿದೆ.