ಮೂವರು ಆಟಗಾರರ ಹತ್ಯೆ … ಪಾಕ್ ವಿರುದ್ಧದ ಸರಣಿ ಬಹಿಷ್ಕರಿಸಿದ ಅಫ್ಘಾನಿಸ್ತಾನ್
Afghanistan vs Pakistan: ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿ ಬೆನ್ನಲ್ಲೇ ಪಾಕಿಸ್ತಾನ್ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ್ ಡುರಾಂಡ್ ಲೈನ್ ಬಾರ್ಡರ್ನಲ್ಲಿ 12 ಪಾಕಿಸ್ತಾನ್ ಸೈನಿಕರನ್ನು ಹತ್ಯೆ ಮಾಡಿದ್ದರು. ಇದೀಗ ಮತ್ತೊಮ್ಮೆ ಪಾಕ್ ಸೇನೆಯು ಗಡಿ ಭಾಗದಲ್ಲಿ ದಾಳಿ ನಡೆಸಿದ್ದು, ಈ ದಾಳಿಯಿಂದಾಗಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಮೃತಪಟ್ಟಿದ್ದಾರೆ.

ಅಫ್ಘಾನಿಸ್ತಾನ್ ಮೇಲಿನ ವೈಮಾನಿಕ ದಾಳಿ ಬೆನ್ನಲ್ಲೇ ಪಾಕಿಸ್ತಾನ್ ವಿರುದ್ಧದ ಸರಣಿಯಿಂದ ಅಫ್ಘಾನ್ ತಂಡ ಹಿಂದೆ ಸರಿದಿದೆ. ನವೆಂಬರ್ 17 ರಿಂದ ಶುರುವಾಗಲಿರುವ ಈ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ್, ಅಫ್ಘಾನಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳು ಕಣಕ್ಕಿಳಿಯಬೇಕಿತ್ತು. ಆದರೀಗ ಪಾಕ್ ವಿರುದ್ಧದ ಸರಣಿಯನ್ನು ಬಹಿಷ್ಕರಿಸಲು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.
ಪಾಕಿಸ್ತಾನ್ ಸೇನೆಯು ಪಕ್ತಿಕಾ ಪ್ರಾಂತ್ಯದ ಗಡಿಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟಿಗರು ಮೃತಪಟ್ಟಿದ್ದರು. ಈ ದಾಳಿ ಬೆನ್ನಲ್ಲೇ ಇನ್ಮುಂದೆ ಪಾಕ್ ವಿರುದ್ಧದ ಸರಣಿ ಆಡುವುದಿಲ್ಲ ಎಂದು ಅಘ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಶುಕ್ರವಾರ ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಲು ಅಫ್ಘಾನಿಸ್ತಾನದ ಸ್ಥಳೀಯ ಆಟಗಾರರು ಪಾಕಿಸ್ತಾನ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ನಿಂದ ಶರಾನಾಗೆ ಪ್ರಯಾಣಿಸಿದ್ದರು. ಈ ವೇಳೆ ಪಾಕ್ ಏರ್ಫೋರ್ಸ್ ದಾಳಿ ನಡೆಸಿದ್ದು, ಇದರಿಂದ ಮೂವರು ಕ್ರಿಕೆಟಿಗರು ಸಾವನ್ನಪ್ಪಿದ್ದು, ಇನ್ನು ಕೆಲವರು ಗಾಯಗೊಂಡಿದ್ದಾರೆ.
ಪಾಕ್ ದಾಳಿಯಿಂದಾಗಿ ದೇಶೀಯ ಕ್ರಿಕೆಟ್ನಲ್ಲಿ ಗುರುತಿಸಿಕೊಂಡಿದ್ದ ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಮೃತಪಟ್ಟಿದ್ದಾರೆ. ಈ ದಾಳಿ ಬೆನ್ನಲ್ಲೇ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ದೃಢ ನಿರ್ಧಾರ ತೆಗೆದುಕೊಂಡಿದ್ದು, ಮುಂಬರುವ ಸರಣಿಯಲ್ಲಿ ಪಾಕ್ ಅಫ್ಘಾನ್ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದೆ.
ಪಿಸಿಬಿ ಪರ್ಯಾಯ ಮಾರ್ಗ:
ಪಾಕಿಸ್ತಾನ್ ವಿರುದ್ಧದ ಸರಣಿಯಿಂದ ಅಫ್ಘಾನಿಸ್ತಾನ್ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಪಾಕ್ ಕ್ರಿಕೆಟ್ ಮಂಡಳಿ ಪರ್ಯಾಯ ಮಾರ್ಗಗಳತ್ತ ಮುಖ ಮಾಡಿದೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಟಿ20 ಸರಣಿಯನ್ನು ಯಾವುದೇ ವೆಚ್ಚದಲ್ಲಿ ನಡೆಸಲು ದೃಢನಿಶ್ಚಯ ಹೊಂದಿರುವುದರಿಂದ ಪರ್ಯಾಯಗಳನ್ನು ಅನ್ವೇಷಿಸಲು ಕೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೀಗಾಗಿ ನವೆಂಬರ್ನಲ್ಲಿ ನಡೆಯಲಿರುವ ಪಾಕಿಸ್ತಾನ್, ಶ್ರೀಲಂಕಾ ತಂಡಗಳೊಂದಿಗಿನ ತ್ರಿಕೋನ ಸರಣಿಯಿಂದ ಅಫ್ಘಾನಿಸ್ತಾನ್ ಹೊರಗುಳಿದರೂ ಬೇರೊಂದು ತಂಡವನ್ನು ಕಣಕ್ಕಿಳಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಈ ಮೂಲಕ ನಿಗದಿಯಂತೆ ತ್ರಿಕೋನ ಸರಣಿ ಆಯೋಜಿಸಲು ಪಿಸಿಬಿ ಪ್ಲ್ಯಾನ್ ರೂಪಿಸಿದೆ.
ಪಾಕ್-ಅಫ್ಘಾನ್ ಸಂಘರ್ಷವೇಕೆ?
ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ನಡುವೆ ಗಡಿ ಭಾಗದಲ್ಲಿ ಹಲವು ವರ್ಷಗಳಿಂದ ಸಂಘರ್ಷವಿದೆ. ಇದಾಗ್ಯೂ ದೊಡ್ಡ ಮಟ್ಟದ ದಾಳಿ ನಡೆದಿರಲಿಲ್ಲ. ಯಾವಾಗ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿ ನೀಡಿದರೋ, ಅದರ ಬೆನ್ನಲ್ಲೇ ಪಾಕಿಸ್ತಾನ್ ಏರ್ಫೋರ್ಸ್ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು.
ಇದನ್ನೂ ಓದಿ: Test 20: ಹೇಗಿರಲಿದೆ ಟೆಸ್ಟ್ 20 ಟೂರ್ನಿ?
ಈ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ್ ಡುರಾಂಡ್ ಲೈನ್ ಬಾರ್ಡರ್ನಲ್ಲಿ 12 ಪಾಕಿಸ್ತಾನ್ ಸೈನಿಕರನ್ನು ಹತ್ಯೆ ಮಾಡಿದ್ದರು. ಈ ಹತ್ಯೆಗೆ ಪ್ರತೀಕಾರವಾಗಿ ಇದೀಗ ಪಾಕ್ ಸೇನೆಯು ಮತ್ತೊಮ್ಮೆ ಅಫ್ಘಾನಿಸ್ತಾನ್ ಗಡಿ ಭಾಗದಲ್ಲಿ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಮೂವರು ಅಫ್ಘಾನ್ ಕ್ರಿಕೆಟಿಗರು ಸಾವನ್ನಪ್ಪಿದ್ದಾರೆ.
Published On - 9:33 am, Sat, 18 October 25
