ರಫೆಲ್ ಯುದ್ಧ ವಿಮಾನದ ಬಗ್ಗೆ ವ್ಯಂಗ್ಯಮಾಡಿದ್ದ ಹ್ಯಾರಿಸ್ ರೌಫ್​ಗೆ 2 ಪಂದ್ಯಗಳಿಂದ ನಿಷೇಧ

Asia Cup 2025 Code Violations: Asia Cup 2025: 2025ರ ಏಷ್ಯಾಕಪ್‌ನಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಭಾರತ-ಪಾಕಿಸ್ತಾನ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಹ್ಯಾರಿಸ್ ರೌಫ್‌ಗೆ ಎರಡು ಪಂದ್ಯಗಳ ನಿಷೇಧ ವಿಧಿಸಿದ್ದು, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ದಂಡ ಹಾಗೂ ಎಚ್ಚರಿಕೆ ನೀಡಲಾಗಿದೆ. ಆಟದ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿ, ಡಿಮೆರಿಟ್ ಅಂಕಗಳೊಂದಿಗೆ ದಂಡ ಮತ್ತು ನಿಷೇಧದಂತಹ ಶಿಕ್ಷೆಗಳನ್ನು ಪ್ರಮುಖ ಆಟಗಾರರಿಗೆ ವಿಧಿಸಲಾಗಿದೆ.

ರಫೆಲ್ ಯುದ್ಧ ವಿಮಾನದ ಬಗ್ಗೆ ವ್ಯಂಗ್ಯಮಾಡಿದ್ದ ಹ್ಯಾರಿಸ್ ರೌಫ್​ಗೆ 2 ಪಂದ್ಯಗಳಿಂದ ನಿಷೇಧ
ಬುಮ್ರಾ, ಸೂರ್ಯ, ಹ್ಯಾರಿಸ್ ರೌಫ್

Updated on: Nov 04, 2025 | 9:22 PM

2025 ರ ಏಷ್ಯಾಕಪ್ (Asia Cup 2025) ಸಮಯದಲ್ಲಿ ವಿವಿಧ ನೀತಿ ಸಂಹಿತೆ ಉಲ್ಲಂಘನೆಗಳಲ್ಲಿ ಭಾಗಿಯಾಗಿರುವ ಆಟಗಾರರ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಮ ಕೈಗೊಂಡಿದೆ. ವಾಸ್ತವವಾಗಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿದ್ದ ಪಂದ್ಯಗಳ ಸಮಯದಲ್ಲಿ ಉಭಯ ತಂಡಗಳ ಆಟಗಾರರು ಆಟದ ನಿಯಮವನ್ನು ಉಲ್ಲಂಘಿಸಿದ್ದರು. ಇದೀಗ ಐಸಿಸಿ ಈ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ದಂಡ, ಎಚ್ಚರಿಕೆ ಮತ್ತು ನಿಷೇಧದಂತಹ ಶಿಕ್ಷೆಯನ್ನು ವಿಧಿಸಿದೆ. ಐಸಿಸಿಯಿಂದ ಈ ಶಿಕ್ಷೆಗೆ ಒಳಗಾದವರಲ್ಲಿ ಹ್ಯಾರಿಸ್ ರೌಫ್ (Haris Rauf), ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) ಅವರಂತಹ ಸ್ಟಾರ್ ಆಟಗಾರರು ಸೇರಿದ್ದಾರೆ.

ಹ್ಯಾರಿಸ್ ರೌಫ್​ಗೆ ಪಂದ್ಯಗಳಿಂದ ನಿಷೇಧ

ಏಷ್ಯಾಕಪ್ ಸಮಯದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರಿಗೆ ಐಸಿಸಿ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಎರಡು ಪ್ರತ್ಯೇಕ ಘಟನೆಗಳಿಗಾಗಿ ರೌಫ್ ಅವರ ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದ್ದು, ಪ್ರತಿ ಘಟನೆಗೆ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಇದರರ್ಥ ರೌಫ್ 24 ತಿಂಗಳ ಅವಧಿಯಲ್ಲಿ ಒಟ್ಟು ನಾಲ್ಕು ಡಿಮೆರಿಟ್ ಅಂಕಗಳನ್ನು ಪಡೆದಿದ್ದಾರೆ. ಇದರ ಪರಿಣಾಮವಾಗಿ ಎರಡು ಅಂತರರಾಷ್ಟ್ರೀಯ ಪಂದ್ಯಗಳಿಂದ ಅವರನ್ನು ನಿಷೇಧಿಸಲಾಗಿದೆ. ಅಂದರೆ ಐಸಿಸಿಯಿಂದ ನಿಷೇಧದ ಶಿಕ್ಷೆಗೆ ಗುರಿಯಾಗಿರುವ ರೌಫ್, ನವೆಂಬರ್ 4 ಮತ್ತು 6 ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಆಡುವಂತಿಲ್ಲ.

ಯಾವ ಆಟಗಾರನಿಗೆ ಯಾವ ಶಿಕ್ಷೆ?

ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಮೊದಲ ಪಂದ್ಯ ಸೆಪ್ಟೆಂಬರ್ 14 ರಂದು ನಡೆದಿತ್ತು. ಆ ಪಂದ್ಯದಂದು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ಪ್ರಸ್ತುತಿ ಸಮಯದಲ್ಲಿ ಈ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳಿಗೆ ಹಾಗೂ ಭಾರತದ ಸೇನೆಗೆ ಅರ್ಪಿಸುವುದಾಗಿ ಹೇಳಿದ್ದರು. ಇದು ಆಟದ ನಿಯಮಕ್ಕೆ ವಿರುದ್ಧವಾಗಿದ್ದು, ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ಸೂರ್ಯಕುಮಾರ್ ಯಾದವ್ ತಪ್ಪಿತಸ್ಥರೆಂದು ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಘೋಷಿಸಿದ್ದರು. ಇದರ ಪರಿಣಾಮವಾಗಿ ಅವರ ಪಂದ್ಯ ಶುಲ್ಕದ ಶೇಕಡಾ 30 ರಷ್ಟು ದಂಡ ಮತ್ತು ಎರಡು ಡಿಮೆರಿಟ್ ಅಂಕಗಳನ್ನು ವಿಧಿಸಲಾಗಿದೆ.

ಇವರ ಜೊತೆಗೆ ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ ಅವರಿಗೆ ಅದೇ ಆರ್ಟಿಕಲ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಅಧಿಕೃತ ಎಚ್ಚರಿಕೆ ನೀಡುವುದರ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು. ಏತನ್ಮಧ್ಯೆ, ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ ಆ ಪಂದ್ಯದ ವೇಳೆ 6 ಫೈಟರ್ ಜೆಟ್​ಗಳನ್ನು ಹೊಡೆದು ಹಾಕಿರುವ ರೀತಿ ಕೈ ಸನ್ನೆ ಮಾಡಿದ್ದರು. ಹೀಗಾಗಿ ರೌಫ್, ಆರ್ಟಿಕಲ್ 2.21 ರ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದರಿಂದ ಅವರಿಗೆ ಪಂದ್ಯ ಶುಲ್ಕದಿಂದ ಶೇಕಡಾ 30 ರಷ್ಟು ಮೊತ್ತವನ್ನು ಕಡಿತಗೊಳಿಸುವುದರ ಜೊತೆಗೆ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.

ಏಷ್ಯಾಕಪ್ ಟ್ರೋಫಿ ಕಳ್ಳ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನದಲ್ಲಿ ಚಿನ್ನದ ಪದಕ ನೀಡಿ ಸನ್ಮಾನ

ಫೈನಲ್ ಪಂದ್ಯದಲ್ಲೂ ನಿಯಮ ಉಲ್ಲಂಘನೆ

ಉಭಯ ತಂಡಗಳ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯದಲ್ಲೂ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಆರ್ಟಿಕಲ್ 2.21 ರ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಭೀತಾಗಿತ್ತು. ಆ ಪಂದ್ಯದಲ್ಲಿ ರೌಫ್ ಅವರ ವಿಕೆಟ್ ಉರುಳಿಸಿದ್ದ ಬುಮ್ರಾ, ಫೈಟರ್ ಜೆಟ್ ಪತನವಾದ ರೀತಿಯಲ್ಲಿ ಕೈಸನ್ನೆ ಮಾಡಿದ್ದರು. ಬುಮ್ರಾ ಅವರ ಈ ಆಚರಣೆಗಾಗಿ ಅಧಿಕೃತ ಎಚ್ಚರಿಕೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಅದೇ ಪಂದ್ಯದಲ್ಲಿ ಹ್ಯಾರಿಸ್ ರೌಫ್ ಕೂಡ ಆರ್ಟಿಕಲ್ 2.21 ಅನ್ನು ಉಲ್ಲಂಘಿಸಿರುವುದು ಖಚಿತವಾಗಿದ್ದು, ವಿಚಾರಣೆಯ ನಂತರ, ಅವರಿಗೆ ಪಂದ್ಯ ಶುಲ್ಕದ 30 ಪ್ರತಿಶತ ದಂಡ ಮತ್ತು ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:14 pm, Tue, 4 November 25