IND vs PAK: 16 ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಾಲ್ಕು ಬಾರಿ ಮುಖಾಮುಖಿ
India vs Pakistan Cricket: 2025ರ ನವೆಂಬರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು 4 ಬಾರಿ ಮುಖಾಮುಖಿಯಾಗಲಿವೆ. ಹಾಂಗ್ ಕಾಂಗ್ ಸಿಕ್ಸಸ್ ಮತ್ತು ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಈ ರೋಚಕ ಹಣಾಹಣಿ ನಡೆಯಲಿದೆ. ಐಸಿಸಿ ಈವೆಂಟ್‌ಗಳನ್ನು ಹೊರತುಪಡಿಸಿ ಈ ತಂಡಗಳು ಇಷ್ಟೊಂದು ಪಂದ್ಯಗಳನ್ನು ಆಡುವುದು ಅಪರೂಪ. ಕ್ರಿಕೆಟ್ ಅಭಿಮಾನಿಗಳಿಗೆ ಇದು ನಿಜಕ್ಕೂ ಹಬ್ಬ.

2025 ರ ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದವು. ಈ ಮೂರು ಪಂದ್ಯಗಳಲ್ಲೂ ಭಾರತವೇ ಗೆದ್ದಿತ್ತು. ಇದೀಗ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಂಗಳದಲ್ಲಿ ಮತ್ತೊಮ್ಮೆ ಕಾದಾಡಲು ಕಣಕ್ಕಿಳಿಯಲಿವೆ. ಅದು ಒಂದೆರಡು ಬಾರಿಯಲ್ಲ. ಬದಲಿಗೆ ಕೆಲವೇ ದಿನಗಳ ಅಂತರದಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗುತ್ತಿವೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕಾಗಿ ವರ್ಷಗಟ್ಟಲೇ ಕಾದುಕುಳಿತುಕೊಳ್ಳಬೇಕಾದ ಸ್ಥಿತಿ ಇದೆ. ಏಕೆಂದರೆ ಈ ಎರಡು ತಂಡಗಳು ಐಸಿಸಿ (ICC) ಈವೆಂಟ್ನಲ್ಲಿ ಮಾತ್ರ ಪರಸ್ಪರ ಪಂದ್ಯವನ್ನಾಡುತ್ತವೆ. ಅಂತಹದರಲ್ಲಿ ಇದೀಗ ಈ ಎರಡು ದೇಶಗಳ ಕ್ರಿಕೆಟ್ ತಂಡಗಳು ಕೇವಲ 16 ದಿನಗಳ ಅಂತರದಲ್ಲಿ 4 ಬಾರಿ ಮುಖಾಮುಖಿಯಾಗಲಿವೆ.
ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಮೊದಲ ಹಣಾಹಣಿ
ಮೊದಲಿಗೆ ಉಭಯ ತಂಡಗಳು ಹಾಂಗ್ ಕಾಂಗ್ ಸಿಕ್ಸಸ್ ಪಂದ್ಯಾವಳಿಯಲ್ಲಿ ಪಂದ್ಯವನ್ನಾಡಲಿವೆ. ಈ ಪಂದ್ಯ ನವೆಂಬರ್ 7, 2025 ರಂದು ಹಾಂಗ್ ಕಾಂಗ್‌ನಲ್ಲಿ ನಡೆಯಲಿದೆ. ಇದು 6 ಓವರ್‌ಗಳ ಸ್ವರೂಪವಾಗಿರುವ ಕಾರಣ ಎರಡು ತಂಡಗಳ ಆಟಗಾರರ ಪ್ರದರ್ಶನ ಹೇಗಿರುತ್ತದೆ ಎಂಬುದನ್ನು ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಮೇಲೆ ಹೇಳಿದಂತೆ ಈ ಲೀಗ್ನಲ್ಲಿ ಒಂದು ತಂಡಕ್ಕೆ ಕೇವಲ 6 ಓವರ್‌ಗಳ ಇನ್ನಿಂಗ್ಸ್ ಸಿಗುವ ಕಾರಣ ಅಭಿಮಾನಿಗಳು ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಯುವುದನ್ನು ನೋಡಬಹುದಾಗಿದೆ. ಲೀಗ್ ಹಂತದ ಬಳಿಕ ಎರಡೂ ತಂಡಗಳು ನಾಕೌಟ್ ಸುತ್ತು ತಲುಪಿದರೆ ಅಲ್ಲಿಯೂ ಸಹ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಇದರರ್ಥ ಒಂದೇ ಪಂದ್ಯಾವಳಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಎರಡು ಬಾರಿ ವೀಕ್ಷಿಸಬಹುದು
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲೂ ಸ್ಪರ್ಧೆ
ಇದರ ನಂತರ, ನವೆಂಬರ್ 14 ರಂದು ಪ್ರಾರಂಭವಾಗುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ನವೆಂಬರ್ 16 ರಂದು ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯಾವಳಿಯು ಯುವ ಆಟಗಾರರಿಗೆ ಒಂದು ವೇದಿಕೆಯಾಗಿದ್ದು, ಎರಡೂ ದೇಶಗಳ ಉದಯೋನ್ಮುಖ ತಾರೆಗಳು ತಮ್ಮ ಛಾಪು ಮೂಡಿಸಲು ಉತ್ಸುಕರಾಗಿರುತ್ತಾರೆ. ಈ ಲೀಗ್ ಹಂತದ ಘರ್ಷಣೆಯ ನಂತರ, ಎರಡೂ ತಂಡಗಳು ಸೆಮಿಫೈನಲ್ ಅಥವಾ ಫೈನಲ್ ತಲುಪಿದರೆ, ಮತ್ತೆ ಪರಸ್ಪರ ಮುಖಾಮುಖಿಯಾಗಬಹುದು. ಇದರರ್ಥ ಈ ಪಂದ್ಯಾವಳಿಯಲ್ಲಿಯೂ ಎರಡು ಪಂದ್ಯಗಳು ನಡೆಯುವ ಸಾಧ್ಯತೆ ಇದೆ.
‘ನಾನು ದುಃಖಿತನಾಗಿದ್ದೇನೆ’; ಏಷ್ಯಾಕಪ್ ಟ್ರೋಫಿ ವಿವಾದದ ಬಗ್ಗೆ ಡಿವಿಲಿಯರ್ಸ್ ಮಾತು
ಹೀಗಾಗಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ನವೆಂಬರ್‌ನಲ್ಲಿ ಕನಿಷ್ಠ ಎರಡು ಬಾರಿ ಮುಖಾಮುಖಿಯಾಗಲಿವೆ. ನಂತರ ಈ ಎರಡೂ ತಂಡಗಳು ಈ ಎರಡು ಲೀಗ್ಗಳ ನಾಕೌಟ್ ಹಂತಕ್ಕೆ ಅರ್ಹತೆ ಪಡೆದರೆ, ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಬಹುದು. ಇದು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬಕ್ಕಿಂತ ಕಡಿಮೆಯಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Wed, 5 November 25
