ಏಷ್ಯಾಕಪ್ ಟ್ರೋಫಿ ವಿಚಾರದಲ್ಲಿ ಮೊಂಡುತನ ಮುಂದುವರೆಸಿದ ಮೊಹ್ಸಿನ್ ನಖ್ವಿ
Asia Cup Trophy Row: 2025 ರ ಏಷ್ಯಾಕಪ್ ಗೆದ್ದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿದೆ. ನಖ್ವಿ ಮೊಂಡುತನದಿಂದ ಟ್ರೋಫಿಯನ್ನು ಎಸಿಸಿ ಕಚೇರಿಯಲ್ಲಿ ಲಾಕ್ ಮಾಡಿದ್ದಾರೆ. ಭಾರತ ತಂಡ ನಖ್ವಿಯಿಂದಲೇ ಟ್ರೋಫಿ ಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದು ಭಾರತ ಮತ್ತು ನಖ್ವಿ ನಡುವಿನ ಟ್ರೋಫಿ ವಿವಾದವನ್ನು ತೀವ್ರಗೊಳಿಸಿದೆ, ಟ್ರೋಫಿಯ ಹಸ್ತಾಂತರ ಇನ್ನೂ ಅನಿಶ್ಚಿತವಾಗಿದೆ.

2025 ರ ಏಷ್ಯಾಕಪ್ (Asia Cup 2025) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ 9ನೇ ಬಾರಿಗೆ ಏಷ್ಯನ್ ಚಾಂಪಿಯನ್ ಕಿರೀಟ ತೊಟ್ಟ ಟೀಂ ಇಂಡಿಯಾಕ್ಕೆ (Team India) ಇದುವರೆಗೂ ಟ್ರೋಫಿಯನ್ನು ಎತ್ತಿಹಿಡಿದು ಸಂಭ್ರಮಿಸುವ ಭಾಗ್ಯ ಒದಗಿ ಬಂದಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಅವರಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತು. ಇದರಿಂದ ಮುಜುಗರಕ್ಕೊಳಗಾದ ನಖ್ವಿ, ಏಷ್ಯಾಕಪ್ ಟ್ರೋಫಿಯನ್ನು ತನ್ನದೊಂದಿಗೆ ತೆಗೆದುಕೊಂಡು ಹೋಗಿದ್ದರು. ಏಷ್ಯಾಕಪ್ ಟ್ರೋಫಿಗೆ ಸಂಬಂಧಿಸಿದಂತೆ ಹುಟ್ಟಿಕೊಂಡಿರುವ ವಿವಾದಕ್ಕೆ ಇದುವರೆಗೂ ತೆರೆ ಬಿದ್ದಿಲ್ಲ. ಇತ್ತ ನಖ್ವಿ ಕೂಡ ತನ್ನ ಮೊಂಡುತನವನ್ನು ಮುಂದುವರೆಸಿದ್ದು, ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬದಲು ಎಸಿಸಿ ಕೇಂದ್ರ ಕಚೇರಿಯಲ್ಲಿ ಇಟ್ಟಿದ್ದಾರೆ. ಅಲ್ಲದೆ ಅವರ ಅನುಮತಿಯಿಲ್ಲದೆ ಟ್ರೋಫಿಯನ್ನು ಅಲ್ಲಿಂದ ತೆಗೆಯಬಾರದು ಎಂದು ಸೂಚನೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಮೊಂಡುತನ ಮುಂದುವರೆಸಿದ ನಖ್ವಿ
ವರದಿಗಳ ಪ್ರಕಾರ, ಏಷ್ಯಾಕಪ್ ಟ್ರೋಫಿಯನ್ನು ಎಸಿಸಿಯ ದುಬೈ ಪ್ರಧಾನ ಕಚೇರಿಯಲ್ಲಿ ಲಾಕ್ ಮಾಡಲಾಗಿದೆ. ಮೊಹ್ಸಿನ್ ನಖ್ವಿ ಅವರು ತಮ್ಮ ಅನುಮೋದನೆಯಿಲ್ಲದೆ ಅದನ್ನು ಸ್ಥಳಾಂತರಿಸಬಾರದು ಅಥವಾ ಭಾರತಕ್ಕೆ ಹಸ್ತಾಂತರಿಸಬಾರದು ಎಂದು ಸೂಚನೆ ನೀಡಿದ್ದಾರೆ. ಮೇಲೆ ಹೇಳಿದಂತೆ ಏಷ್ಯಾಕಪ್ ಗೆದ್ದ ನಂತರ ಭಾರತೀಯ ತಂಡವು ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಹೀಗಾಗಿ ನಖ್ವಿ ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು, ಅಂದಿನಿಂದ ಅದು ಎಸಿಸಿ ಕಚೇರಿಯಲ್ಲಿಯೇ ಇದೆ.
‘ನಾನು ದುಃಖಿತನಾಗಿದ್ದೇನೆ’; ಏಷ್ಯಾಕಪ್ ಟ್ರೋಫಿ ವಿವಾದದ ಬಗ್ಗೆ ಡಿವಿಲಿಯರ್ಸ್ ಮಾತು
ನಖ್ವಿ ಮತ್ತು ಬಿಸಿಸಿಐ ನಡುವೆ ಜಟಾಪಟಿ
ಈ ಹಿಂದೆ ವರದಿಯಾದ ಪ್ರಕಾರ, ಏಷ್ಯಾಕಪ್ ಮುಗಿದ ಬಳಿಕ ನಡೆದ ಎಸಿಸಿ ಸಭೆಯಲ್ಲಿ ಮೊಹ್ಸಿನ್ ನಖ್ವಿ, ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಲಿದ್ದು, ಅಲ್ಲಿಂದ ಟೀಂ ಇಂಡಿಯಾ ಟ್ರೋಫಿಯನ್ನು ಭಾರತಕ್ಕೆ ತರಲಿದೆ ಎಂಬುದಾಗಿತ್ತು. ಆದರೆ ಅದು ಇದುವರೆಗೂ ನಿಜವಾಗಿಲ್ಲ. ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಏಷ್ಯಾಕಪ್ ಟ್ರೋಫಿ ಬೇಕೆಂದರೆ ಟೀಂ ಇಂಡಿಯಾ, ಮೊಹ್ಸಿನ್ ನಖ್ವಿ ಅವರಿಂದಲೇ ಅದನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ ಟ್ರೋಫಿಯನ್ನು ಎಸಿಸಿ ಕಛೇರಿಯಲ್ಲೇ ಇಡಲಾಗುವುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Fri, 10 October 25
