6 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂಧಾನ

ICC ODI Rankings: ಐಸಿಸಿ ಮಹಿಳಾ ಏಕದಿನ ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯ ಟಾಪ್-10 ನಲ್ಲಿ ಕಾಣಿಸಿಕೊಂಡಿರುವುದು ಏಕೈಕ ಬ್ಯಾಟರ್​ ಮಾತ್ರ. ಇನ್ನು ಟಿ20 ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲೂ ಸ್ಮೃತಿ ಮಂಧಾನ ಅವರನ್ನು ಹೊರತುಪಡಿಸಿ ಬಾರತದ ಯಾವುದೇ ಬ್ಯಾಟರ್ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿಲ್ಲ.

6 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂಧಾನ
Smriti Mandhana

Updated on: Jun 17, 2025 | 2:33 PM

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಐಸಿಸಿ ಏಕದಿನ ಬ್ಯಾಟರ್​ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕಳೆದ ಬಾರಿ ದ್ವಿತೀಯ ಸ್ಥಾನದಲ್ಲಿದ್ದ ಸ್ಮೃತಿ ಈ ಬಾರಿ 727 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ. ವಿಶೇಷ ಎಂದರೆ ಸ್ಮೃತಿ ಮಂಧಾನ ಅವರನ್ನು ಹೊರತುಪಡಿಸಿ ಭಾರತದ ಯಾವುದೇ ಬ್ಯಾಟರ್ ಟಾಪ್-10 ನಲ್ಲಿ ಕಾಣಿಸಿಕೊಂಡಿಲ್ಲ.

ಅಷ್ಟೇ ಅಲ್ಲದೆ ಐಸಿಸಿ ಏಕದಿನ ಬ್ಯಾಟರ್​ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಮೃತಿ ಮೊದಲ ಸ್ಥಾನಕ್ಕೇರುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2019 ರಲ್ಲಿ ಅವರು ಅಗ್ರಸ್ಥಾನ ಅಲಂಕರಿಸಿದ್ದರು. ಆದರೆ ಬಳಿಕ ಒಮ್ಮೆಯೂ ಟಾಪ್-1 ಸ್ಥಾನ ಪಡೆಯುವಲ್ಲಿ ಸಾಧ್ಯವಾಗಿರಲಿಲ್ಲ.

ಆದರೆ ಈ ಬಾರಿ ನಡೆದ ಸೌತ್ ಆಫ್ರಿಕಾ, ಶ್ರೀಲಂಕಾ ನಡುವಣ ತ್ರಿಕೋನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸ್ಮೃತಿ ಮಂಧಾನ 6 ವರ್ಷಗಳ ಬಳಿಕ ಐಸಿಸಿ ಏಕದಿನ ಬ್ಯಾಟರ್​ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಮೃತಿ ಮಂಧಾನ ಅವರ ನಂತರದ ಸ್ಥಾನದಲ್ಲಿ ಇಂಗ್ಲೆಂಡ್​ನ ನಟಾಲಿ ಸ್ಕಿವರ್-ಬ್ರಂಟ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಮೂರನೇ ಸ್ಥಾನವನ್ನು ಸೌತ್ ಆಫ್ರಿಕಾದ ಲಾರಾ ವೋಲ್ವಾರ್ಡ್ ಪಡೆದುಕೊಂಡಿದ್ದಾರೆ. ನಟಾಲಿ ಹಾಗೂ ಲಾರಾ ತಲಾ 719 ಅಂಕಗಳನ್ನು ಪಡೆದುಕೊಂಡಿದ್ದು, ಮುಂದಿನ ಮ್ಯಾಚ್​ನಲ್ಲಿ ಮಿಂಚಿದರೆ ಇಬ್ಬರಿಗೂ ಅಗ್ರಸ್ಥಾನಕ್ಕೇರಲು ಅವಕಾಶವಿದೆ.

ಇನ್ನು ಇಂಗ್ಲೆಂಡ್ ತಂಡದ ಯುವ ಬ್ಯಾಟರ್ ಆಮಿ ಜೋನ್ಸ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಒಟ್ಟು 682 ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಐದನೇ ಶ್ರೇಯಾಂಕ ಪಡೆದುಕೊಂಡಿದ್ದು, ಒಟ್ಟು 684 ಅಂಕಗಳನ್ನು ಗಳಿಸಿದ್ದಾರೆ.

ಆರನೇ ಸ್ಥಾನದಲ್ಲಿರುವುದು ವೆಸ್ಟ್ ಇಂಡೀಸ್ ತಂಡದ ನಾಯಕಿ ಹೇಲಿ ಮ್ಯಾಥ್ಯೂಸ್ ಇದ್ದು, 682 ಅಂಕಗಳನ್ನು ಪಡೆದಿದ್ದಾರೆ. ಹಾಗೆಯೇ ಏಳನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಅಲೀಸಾ ಹೀಲಿ (679), ಎಂಟನೇ ಸ್ಥಾನದಲ್ಲಿ ಚಾಮರಿ ಅಥಾಪತ್ತು (655), 9ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬೆತ್ ಮೂನಿ (655) ಕಾಣಿಸಿಕೊಂಡಿದ್ದಾರೆ. ಇನ್ನು ಟಾಪ್-10ರ ಕೊನೆಯ ಸ್ಥಾನದಲ್ಲಿ 650 ಅಂಕಗಳನ್ನು ಪಡೆದಿರುವ ಆಶ್ ಗಾರ್ಡ್ನರ್ ಇದ್ದಾರೆ.

ಟಿ20 ಕ್ರಿಕೆಟ್​ನಲ್ಲೂ ಮಿಂಚಿಂಗ್:

ಏಕದಿನ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಮೃತಿ ಮಂಧಾನ ಟಿ20 ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲೂ ಅಗ್ರ-10 ರಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಬ್ಯಾಟರ್ ಸ್ಮೃತಿ ಮಂಧಾನ ಮಾತ್ರ.

ಇನ್ನು ಟಿ20 ಮಹಿಳಾ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾದ ಬೆತ್ ಮೂನಿ. 794 ಅಂಕಗಳೊಂದಿಗೆ ಬೆತ್ ಮೂನಿ ಮೊದಲ ಸ್ಥಾನದಲ್ಲಿದ್ದರೆ, 765 ಅಂಕಗಳನ್ನು ಹೊಂದಿರುವ ವೆಸ್ಟ್ ಇಂಡೀಸ್​​ ನಾಯಕಿ ಹೇಲಿ ಮ್ಯಾಥ್ಯೂಸ್ ದ್ವಿತೀಯ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ

ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ತಾಹ್ಲಿಯಾ ಮೆಕ್​ಗ್ರಾಥ್ (757) ಇದ್ದು, ನಾಲ್ಕನೇ ಸ್ಥಾನದಲ್ಲಿ 753 ಅಂಕಗಳನ್ನು ಹೊಂದಿರುವ ಸ್ಮೃತಿ ಮಂಧಾನ ಕಾಣಿಸಿಕೊಂಡಿದ್ದಾರೆ. ಇನ್ನು ಸೌತ್ ಆಫ್ರಿಕಾದ ಲಾರಾ ವೋಲ್ವಾರ್ಡ್ 737 ಅಂಕಗಳೊಂದಿಗೆ ಐದನೇ ಸ್ಥಾನ ಅಲಂಕರಿಸಿದ್ದಾರೆ.