ICC World Cup 2023 Revised Schedule: ಭಾರತ- ಪಾಕ್ ಸೇರಿದಂತೆ 9 ಪಂದ್ಯಗಳ ದಿನಾಂಕ ಬದಲಾವಣೆ! ಇಲ್ಲಿದೆ ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿ

|

Updated on: Aug 09, 2023 | 6:20 PM

ICC World Cup 2023 Revised Schedule: ಹಿಂದಿನ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಪಂದ್ಯ ಈಗ ಒಂದು ದಿನ ಮುಂಚಿತವಾಗಿ ಅಂದರೆ, ಅಕ್ಟೋಬರ್ 14 ರಂದು ನಡೆಯಲಿದೆ. ಭಾರತ-ಪಾಕಿಸ್ತಾನ ಮಾತ್ರವಲ್ಲ ಒಟ್ಟು 9 ಪಂದ್ಯಗಳ ದಿನಾಂಕ ಬದಲಾಗಿದೆ.

ICC World Cup 2023 Revised Schedule: ಭಾರತ- ಪಾಕ್ ಸೇರಿದಂತೆ 9 ಪಂದ್ಯಗಳ ದಿನಾಂಕ ಬದಲಾವಣೆ! ಇಲ್ಲಿದೆ ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿ
ಏಕದಿನ ವಿಶ್ವಕಪ್
Follow us on

ಕಳೆದ ಕೆಲವು ದಿನಗಳಿಂದ ಏಕದಿನ ವಿಶ್ವಕಪ್ ( ICC World Cup 2023) ವೇಳಾಪಟ್ಟಿಯ ಬಗ್ಗೆ ಸೃಷ್ಟಿಯಾಗಿದ್ದ ಗೊಂದಲಕ್ಕೆ ಅಂತಿಮವಾಗಿ ತೆರೆಬಿದ್ದಿದೆ. ಕೆಲವು ಕಾರಣಗಳಿಂದಾಗಿ ಈ ಹಿಂದೆ ಪ್ರಕಟಿಸಿದ್ದ ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆ ತರಲು ಐಸಿಸಿ (ICC) ಹಾಗೂ ಬಿಸಿಸಿಐ (BCCI) ಮುಂದಾಗಿದ್ದವು. ಇದೀಗ 2023ರ ಏಕದಿನ ವಿಶ್ವಕಪ್​ನ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆಯಾಗಿದ್ದು ಕೆಲವು ಪ್ರಮುಖ ಪಂದ್ಯಗಳು ನಡೆಯುವ ದಿನಾಂಕದಲ್ಲಿ ಬದಲಾವಣೆಯಾಗಿದೆ. ಅದರಲ್ಲಿ ಪ್ರಮುಖವಾಗಿ ಭಾರಿ ಚರ್ಚೆಗೆ ಒಳಗಾಗಿದ್ದ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ವಿಶ್ವಕಪ್ ಪಂದ್ಯದ ಬದಲಾದ ದಿನಾಂಕ ಯಾವುದು ಎಂಬುದುಕ್ಕೆ ಉತ್ತರ ಸಿಕ್ಕಿದೆ. ಹಿಂದಿನ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ ಈಗ ಒಂದು ದಿನ ಮುಂಚಿತವಾಗಿ ಅಂದರೆ, ಅಕ್ಟೋಬರ್ 14 ರಂದು ನಡೆಯಲಿದೆ. ಭಾರತ-ಪಾಕಿಸ್ತಾನ ಮಾತ್ರವಲ್ಲದೆ ಒಟ್ಟು 9 ಪಂದ್ಯಗಳ ದಿನಾಂಕ ಬದಲಾಗಿದೆ.

ವಾಸ್ತವವಾಗಿ ಈ ಹಿಂದೆ ನಿಗದಿಯಾಗಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಭದ್ರತಾ ಸಮಸ್ಯೆ ಎದುರಾಗಿತ್ತು. ಏಕೆಂದರೆ ಪಂದ್ಯ ನಡೆಯುವ ದಿನ ಅಂದರೆ ಅಕ್ಟೋಬರ್ 15 ರಂದು ಭಾರತದಲ್ಲಿ ನವರಾತ್ರಿ ಆರಂಭವಾಗುತ್ತದೆ. ಅದರಲ್ಲೂ ನವರಾತ್ರಿಯ ಮೊದಲ ದಿನವನ್ನು ಗುಜರಾತ್​ನಲ್ಲಿ ರಾತ್ರಿ ಇಡೀ ಸಂಭ್ರಮದಿಂದ ಆಚರಿಸಲಾಗುತ್ತದೆ. ಹೀಗಾಗಿ ಅದೇ ದಿನ ಭಾರತ ಪಾಕ್ ಪಂದ್ಯ ನಡೆದರೆ, ಭದ್ರತಾ ಸಮಸ್ಯೆ ಎದುರಾಗಲಿದೆ ಎಂದು ಭದ್ರತಾ ಏಜೆನ್ಸಿಗಳು ಬಿಸಿಸಿಐಗೆ ಎಚ್ಚರಿಕೆ ನೀಡಿದ್ದವು. ಈ ವಿಚಾರವಾಗಿ ಸಭೆ ನಡೆಸಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಭಾರತ-ಪಾಕಿಸ್ತಾನ ಪಂದ್ಯ ಸೇರಿದಂತೆ ಕೆಲವು ಕ್ರಿಕೆಟ್ ಮಂಡಳಿಗಳು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕೆಂದು ಐಸಿಸಿಗೆ ಮನವಿ ಸಲ್ಲಿಸಿವೆ. ಹೀಗಾಗಿ ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿಯನ್ನು ಇಷ್ಟರಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದರು.

ಇದೀಗ ಹೊಸದಾಗಿ ಬಿಡುಗಡೆಯಾಗಿರುವ ನೂತನ ವೇಳಾಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿಯ ಜೊತೆಗೆ 9 ಪಂದ್ಯಗಳ ದಿನಾಂಕಗಳನ್ನು ಬದಲಾಯಿಸಲಾಗಿದೆ. ಇದರಲ್ಲಿ ಭಾರತದ 2 ಪಂದ್ಯಗಳು ಮತ್ತು ಪಾಕಿಸ್ತಾನದ 3 ಪಂದ್ಯಗಳು ಸೇರಿವೆ.

Breaking: ಏಕದಿನ ವಿಶ್ವಕಪ್​ಗೆ 18 ಸದಸ್ಯರ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ!

ಭಾರತದ ಯಾವ್ಯಾವ ಪಂದ್ಯಗಳ ದಿನಾಂಕ ಬದಲಾಗಿವೆ?

ಹೊಸ ವೇಳಾಪಟ್ಟಿಯ ಪ್ರಕಾರ, ಭಾರತ ತಂಡವು ಅಕ್ಟೋಬರ್ 15 ರ ಬದಲಿಗೆ ಅಕ್ಟೋಬರ್ 14 ರಂದು ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಲಿದೆ. ಹಾಗೆಯೇ ನವೆಂಬರ್ 11 ರಂದು ನಡೆಯಬೇಕಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ಇದೀಗ ಒಂದು ದಿನದ ಬಳಿಕ ಅಂದರೆ, ನವೆಂಬರ್ 12 ರಂದು ನಡೆಯಲ್ಲಿದೆ.

ಪಾಕಿಸ್ತಾನದ 3 ಪಂದ್ಯಗಳ ದಿನಾಂಕ ಬದಲಾವಣೆ

ವಿಶ್ವಕಪ್‌ನ ಹೊಸ ವೇಳಾಪಟ್ಟಿಯಲ್ಲಿ ಪಾಕಿಸ್ತಾನದ 3 ಪಂದ್ಯಗಳ ದಿನಾಂಕ ಬದಲಾಗಿದೆ. ನೂತನ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 12 ರಂದು ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಎರಡು ದಿನ ಮುಂಚಿತವಾಗಿ ಅಂದರೆ, ಅಕ್ಟೋಬರ್ 12ಕ್ಕೆ ಬದಲಾಗಿ, ಅಕ್ಟೋಬರ್ 10 ರಂದು ಆಡಲಿದೆ. ಹಾಗೆಯೇ ನವೆಂಬರ್ 12 ರಂದು ನಡೆಯಬೇಕಿದ್ದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಈಗ ನವೆಂಬರ್ 11 ರಂದು ನಡೆಯಲಿದೆ. ಈ ಎರಡು ಪಂದ್ಯಗಳ ಹೊರತಾಗಿ ಪಾಕಿಸ್ತಾನ ತಂಡ ಅಕ್ಟೋಬರ್ 15 ರ ಬದಲು, ಅಕ್ಟೋಬರ್ 14 ರಂದು ಟೀಂ ಇಂಡಿಯಾವನ್ನು ಎದುರಿಸಲಿದೆ.

ಈ ಪಂದ್ಯಗಳ ಹೊರತಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ದಿನಾಂಕವೂ ಬದಲಾಗಿದ್ದು, ಈ ಉಭಯ ತಂಡಗಳು ಈಗ ಅಕ್ಟೋಬರ್ 12 ರಂದು ಸ್ಪರ್ಧಿಸಲಿವೆ. ಹಾಗೆಯೇ ಅಕ್ಟೋಬರ್ 13 ರಂದು ನ್ಯೂಜಿಲೆಂಡ್ ತಂಡ, ಬಾಂಗ್ಲಾದೇಶವನ್ನು ಎದುರಿಸಲಿದೆ. ಇದರ ಜೊತೆಗೆ ಅಕ್ಟೋಬರ್ 15 ರಂದು ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗುತ್ತಿದ್ದರೆ, ನವೆಂಬರ್ 11 ರಂದು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಈ ಮೂಲಕ ಒಟ್ಟು 9 ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಭಾರತದ ಪಂದ್ಯಗಳ ವಿವರ ಇಲ್ಲಿದೆ.

  1. ಭಾರತ vs ಆಸ್ಟ್ರೇಲಿಯಾ, 8 ಅಕ್ಟೋಬರ್, ಚೆನ್ನೈ
  2. ಭಾರತ vs ಅಫ್ಘಾನಿಸ್ತಾನ, 11 ಅಕ್ಟೋಬರ್, ದೆಹಲಿ
  3. ಭಾರತ vs ಪಾಕಿಸ್ತಾನ, 14 ಅಕ್ಟೋಬರ್, ಅಹಮದಾಬಾದ್
  4. ಭಾರತ vs ಬಾಂಗ್ಲಾದೇಶ, 19 ಅಕ್ಟೋಬರ್, ಪುಣೆ
  5. ಭಾರತ vs ನ್ಯೂಜಿಲೆಂಡ್, 22 ಅಕ್ಟೋಬರ್, ಧರ್ಮಶಾಲಾ
  6. ಭಾರತ vs ಇಂಗ್ಲೆಂಡ್, 29 ಅಕ್ಟೋಬರ್, ಲಕ್ನೋ
  7. ಭಾರತ vs ಶ್ರೀಲಂಕಾ, 2 ನವೆಂಬರ್, ಮುಂಬೈ
  8. ಭಾರತ vs ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
  9. ಭಾರತ vs ನೆದರ್ಲ್ಯಾಂಡ್ಸ್, ನವೆಂಬರ್ 12, ಬೆಂಗಳೂರು

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Wed, 9 August 23