ಸೆಪ್ಟಂಬರ್ 5 ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಭಾರತದಲ್ಲಿ ನಡೆಯಲ್ಲಿರುವ ಈ ಮಹಾ ಸಮರಕ್ಕೆ 10 ಕ್ರೀಡಾಂಗಣಗಳು ಆತಿಥ್ಯವಹಿಸಲಿವೆ. ಇದಕ್ಕಾಗಿ ಟೀಂ ಇಂಡಿಯಾ ಕೂಡ ಸಕಲ ತಯಾರಿ ಆರಂಭಿಸಿದೆ.
ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ತಂಡ ತನ್ನ ಏಕದಿನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಇದರೊಂದಿಗೆ 13 ವರ್ಷಗಳ ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಲು ಭಾರತ ಪ್ರಯತ್ನಿಸಲಿದೆ.
ಇನ್ನು ಈ ವಿಶ್ವಕಪ್ನಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡಗಳ ಬಗ್ಗೆ ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಎಲ್ಲ ಅನುಭವಿಗಳ ಅಭಿಪ್ರಾಯದ ಪ್ರಕಾರ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಟೀಂ ಇಂಡಿಯಾ ಕೂಡ ಒಂದಾಗಿದೆ.
ಆದರೆ ಇದೀಗ ಈ ಬಾರಿಯ ವಿಶ್ವಕಪ್ ಗೆಲ್ಲುವ ತನ್ನ ನೆಚ್ಚಿನ ತಂಡವನ್ನು ಹೆಸರಿಸಿರುವ ಟೀಂ ಇಂಡಿಯಾದ ಸ್ಪಿನ್ ದಿಗ್ಗಜ ಆರ್. ಅಶ್ವಿನ್, ತನ್ನ ಆಯ್ಕೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ವಾಸ್ತವವಾಗಿ ಯಾವುದೇ ದೇಶದ ಕ್ರಿಕೆಟಿಗನಾಗಲಿ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ತಾನು ಪ್ರತಿನಿಧಿಸುವ ತಂಡವನ್ನು ಅಗ್ರಪಂಕ್ತಿಯಲ್ಲಿಡುತ್ತಾನೆ. ಆದರೆ ಟೀಂ ಇಂಡಿಯಾ ಪರ ಸಾಕಷ್ಟು ಪಂದ್ಯಗಳನ್ನಾಡಿರುವ ಅಶ್ವಿನ್, ಭಾರತದ ಬದಲು ಆಸ್ಟ್ರೇಲಿಯಾವನ್ನು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಆಯ್ಕೆ ಮಾಡಿದ್ದಾರೆ.
ಭಾರತದ ಪರ 489 ಟೆಸ್ಟ್, 151 ಏಕದಿನ ಮತ್ತು 72 ಟಿ20 ವಿಕೆಟ್‌ಗಳನ್ನು ಪಡೆದಿರುವ 36 ವರ್ಷದ ಅಶ್ವಿನ್ ತನ್ನ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದ್ದು, ಟೀಂ ಇಂಡಿಯಾದ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಈ ರೀತಿಯ ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ವಾಸ್ತವವಾಗಿ ಅಶ್ವಿನ್ ಹೇಳಿರುವ ಪ್ರಕಾರ, ‘ವಿಶ್ವಕಪ್ ಗೆಲ್ಲುವ ಪ್ರಮುಖ ತಂಡಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದಾಗಿದೆ. ವಿಶ್ವ ಕ್ರಿಕೆಟ್ನ ಎಲ್ಲ ಅಭಿಮಾನಿಗಳು ಕೂಡ ಭಾರತವನ್ನು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳುತ್ತಲೇ ಇರುತ್ತಾರೆ ಎಂದು ನನಗೆ ತಿಳಿದಿದೆ. ಆದರೆ ಇದು ಟೀಂ ಇಂಡಿಯಾವನ್ನು ಒತ್ತಡಕ್ಕೆ ಸಿಲುಕಿಸಿ ಕುಗ್ಗಿಸುವ ತಂತ್ರವಾಗಿದೆ.
ಪ್ರತಿ ಐಸಿಸಿ ಈವೆಂಟ್ ಬಂದಾಗಲು ಕ್ರಿಕೆಟ್ ಆಡುವ ಎಲ್ಲಾ ದೇಶದ ಮಾಜಿ ಆಟಗಾರರು ಅಥವಾ ಅಭಿಮಾನಿಗಳು ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳುವ ಮೂಲಕ ತಮ್ಮ ದೇಶದ ತಂಡದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಟೀಂ ಇಂಡಿಯಾ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕಲು ಈ ತಂತ್ರವನ್ನು ಬಳಸುತ್ತಾರೆ.
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದು ಎಂದು ನನಗೆ ಗೊತ್ತು. ಆದರೆ ನಾನು ಕೂಡ ಎಲ್ಲರಂತೆ ತಂಡದ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ. ಹೀಗಾಗಿ ನಾನು ಆಸ್ಟ್ರೇಲಿಯಾವನ್ನು ನೆಚ್ಚಿನ ತಂಡ ಎಂದು ಹೆಸರಿಸಿದ್ದೇನೆ’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
Published On - 11:29 am, Wed, 9 August 23