
ಕ್ರಿಕೆಟ್ ಪ್ರೇಮಿಗಳಿಗೆ ಮುಂಬರುವ ವರ್ಷಗಳಲ್ಲಿ ಭರ್ಜರಿ ಮನರಂಜನೆ ಕಾದಿದೆ. ಏಕೆಂದರೆ 2027ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಟಿ20 ವಿಶ್ವಕಪ್‌ಗಳ ಸರಣಿಯೂ ಶುರುವಾಗಲಿದೆ. ಅಂದರೆ, 2027ರ ಅಂತ್ಯದಲ್ಲಿ ಏಕದಿನ ವಿಶ್ವಕಪ್ ನಡೆದರೆ, 2028, 2030 ಮತ್ತು 2032ರಲ್ಲಿ ಟಿ20 ವಿಶ್ವಕಪ್‌ಗಳು ಜರುಗಲಿವೆ. ವಿಶೇಷವೆಂದರೆ, ಈ ಎಲ್ಲಾ ಟೂರ್ನಿಗಳಿಗೆ ‘SENA’ ದೇಶಗಳು. ಅಂದರೆ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ.
ಐಸಿಸಿ ಈಗಾಗಲೇ 2028 ಮತ್ತು 2030ರ ಟಿ20 ವಿಶ್ವಕಪ್‌ಗಳ ಆತಿಥೇಯರನ್ನು ಅಧಿಕೃತವಾಗಿ ಅಂತಿಮಗೊಳಿಸಿದೆ. ಆದರೆ 2032ರ ಟೂರ್ನಿಯ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ.
2032ರ ಟೂರ್ನಿಗೆ ಆತಿಥೇಯರು ಇನ್ನೂ ಅಂತಿಮವಾಗದಿದ್ದರೂ, ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರು ಸೌತ್ ಆಫ್ರಿಕಾದತ್ತ ಬೊಟ್ಟು ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಟೂರ್ನಿಯನ್ನು ಅಕ್ಟೋಬರ್-ನವೆಂಬರ್ ಸಮಯದಲ್ಲಿ ನಿಗದಿಪಡಿಸಿರುವುದು.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ದಕ್ಷಿಣ ಗೋಳಾರ್ಧದ ದೇಶಗಳಾದ ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾದಲ್ಲಿ ಕ್ರಿಕೆಟ್ ಆಡಲು ಅತ್ಯಂತ ಸೂಕ್ತವಾದ ಬೇಸಿಗೆಯ ಸಮಯವಾಗಿದೆ. 2027ರ ಏಕದಿನ ವಿಶ್ವಕಪ್ ಕೂಡ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಇದೇ ಅವಧಿಯಲ್ಲಿ ನಡೆಯಲಿದೆ.
2028ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಈಗಾಗಲೇ ಟಿ20 ವಿಶ್ವಕಪ್ ಆಯೋಜಿಸುತ್ತಿರುವುದರಿಂದ, 2032ರ ಅಕ್ಟೋಬರ್-ನವೆಂಬರ್ ಅವಧಿಗೆ ಸೌತ್ ಆಫ್ರಿಕಾ ಅತ್ಯಂತ ಪ್ರಬಲ ಆಕಾಂಕ್ಷಿಯಾಗಿ ಕಾಣುತ್ತಿದೆ. ಹೀಗಾಗಿ 2032ರ ಟಿ20 ವಿಶ್ವಕಪ್ ಆತಿಥ್ಯ ಸೌತ್ ಆಫ್ರಿಕಾ ಪಾಲಾದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: ಕ್ರಿಕೆಟ್‌ನಲ್ಲಿ ಆಡಲಾಗದ ಎಸೆತಗಳೇ ಇಲ್ಲ: ಹಿರಿಯರ ವಿರುದ್ಧ ಗಂಭೀರ್ ಕೆಂಡಾಮಂಡಲ!
ಒಂದು ವೇಳೆ ಸೌತ್ ಆಫ್ರಿಕಾಕ್ಕೆ 2032ರ ಆತಿಥ್ಯ ಸಿಕ್ಕಿದ್ದೇ ಆದಲ್ಲಿ, 2028 (ಆಸ್ಟ್ರೇಲಿಯಾ-ನ್ಯೂಝಿಲೆಂಡ್), 2030 (ಇಂಗ್ಲೆಂಡ್) ಮತ್ತು 2032 (ಸೌತ್ ಆಫ್ರಿಕಾ) ಹೀಗೆ ಸತತ ಮೂರು ಟಿ20 ವಿಶ್ವಕಪ್‌ಗಳು ವೇಗ ಮತ್ತು ಬೌನ್ಸ್‌ಗೆ ಹೆಸರಾದ ‘SENA’ ಪಿಚ್‌ಗಳಲ್ಲಿ ನಡೆಯಲಿವೆ. ಇದು ಬ್ಯಾಟರ್‌ಗಳು ಮತ್ತು ಬೌಲರ್‌ಗಳ ನಡುವೆ ರೋಚಕ ಪೈಪೋಟಿಗೆ ಸಾಕ್ಷಿಯಾಗುವುದರಲ್ಲಿ ಸಂಶಯವಿಲ್ಲ.