AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್‌ನಲ್ಲಿ ಆಡಲಾಗದ ಎಸೆತಗಳೇ ಇಲ್ಲ: ಹಿರಿಯರ ವಿರುದ್ಧ ಗಂಭೀರ್ ಕೆಂಡಾಮಂಡಲ!

ನ್ಯೂಝಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕೇವಲ 89 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ 244 ರನ್‌ಗಳ ಹೀನಾಯ ಸೋಲು ಕಂಡಿದೆ. ಮ್ಯಾಟ್ ಹೆನ್ರಿ ದಾಳಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೀನಾಯ ಪ್ರದರ್ಶನದ ಬೆನ್ನಲ್ಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಕೋಚ್ ಗೌತಮ್ ಗಂಭೀರ್, ಯಾವುದೇ ಮುಲಾಜಿಲ್ಲದೆ ಹಿರಿಯ ಬ್ಯಾಟರ್‌ಗಳ ವಿರುದ್ಧ ಗುಡುಗಿದ್ದಾರೆ.

ಕ್ರಿಕೆಟ್‌ನಲ್ಲಿ ಆಡಲಾಗದ ಎಸೆತಗಳೇ ಇಲ್ಲ: ಹಿರಿಯರ ವಿರುದ್ಧ ಗಂಭೀರ್ ಕೆಂಡಾಮಂಡಲ!
Rohit - Virat - GambhirImage Credit source: BCCI
ಝಾಹಿರ್ ಯೂಸುಫ್
|

Updated on: Nov 14, 2026 | 9:05 AM

Share

ನ್ಯೂಝಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಕೇವಲ 89 ರನ್‌ಗಳಿಗೆ ಆಲೌಟ್ ಆಗುವ ಮೂಲಕ 244 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ರನ್‌ಗಳ ಅಂತರದಲ್ಲಿ ಭಾರತ ಕಂಡ ಎರಡನೇ ಅತಿ ದೊಡ್ಡ ಸೋಲು ಇದಾಗಿದೆ. ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಯಾವುದೇ ಮುಚ್ಚುಮರೆಯಿಲ್ಲದೆ ತಂಡದ ಬ್ಯಾಟಿಂಗ್ ವೈಫಲ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾಟರ್‌ಗಳ ವೈಫಲ್ಯಕ್ಕೆ ಗಂಭೀರ್ ಖಡಕ್ ಪ್ರತಿಕ್ರಿಯೆ!

ನ್ಯೂಝೀಲೆಂಡ್ ವೇಗಿ ಮ್ಯಾಟ್ ಹೆನ್ರಿ (6/27) ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಭಾರತಕ್ಕೆ ಆಘಾತ ನೀಡಿದ್ದರು. ಈ ಕುರಿತು ಮಾತನಾಡಿದ ಗಂಭೀರ್, “ಮೊದಲನೆಯದಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲಾಗದ ಎಸೆತಗಳು ಎಂಬುದೇ ಇರುವುದಿಲ್ಲ. ಯಾವುದೇ ರೀತಿಯ ಎಸೆತವನ್ನು ಎದುರಿಸುವ ಸಾಮರ್ಥ್ಯ ಬ್ಯಾಟರ್‌ಗಳಿಗೆ ಇರಬೇಕು. ಮ್ಯಾಟ್ ಹೆನ್ರಿ ಉತ್ತಮ ಜಾಗದಲ್ಲಿ ಬೌಲಿಂಗ್ ಮಾಡಿದರು ನಿಜ, ಆದರೆ ಅದನ್ನು ಸಮರ್ಥವಾಗಿ ಎದುರಿಸುವ ಕಲೆ ನಮಗೆ ತಿಳಿದಿರಬೇಕು” ಎಂದು ಹಿರಿಯ ಆಟಗಾರರಿಗೆ ಚಾಟಿ ಬೀಸಿದ್ದಾರೆ.

ನ್ಯೂಝಿಲೆಂಡ್ ಪಿಚ್‌ಗಳ ಸ್ವಭಾವದ ಬಗ್ಗೆ ವಿವರಿಸಿದ ಗಂಭೀರ್, “ಭಾರತದಲ್ಲಿ ಮೊದಲ 10-15 ಓವರ್‌ಗಳು ಬ್ಯಾಟಿಂಗ್‌ಗೆ ಅತ್ಯಂತ ಸುಲಭವಾಗಿರುತ್ತವೆ. ಆದರೆ ಇಲ್ಲಿ ಮೊದಲ 10 ಓವರ್‌ಗಳು ಅತ್ಯಂತ ಕಠಿಣವಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮೊದಲ 10 ಓವರ್‌ಗಳಲ್ಲಿ ನೀವು 70-80 ರನ್ ಗಳಿಸಬೇಕಾಗಿಲ್ಲ. ವಿಕೆಟ್ ನಷ್ಟವಿಲ್ಲದೆ 35-40 ರನ್ ಗಳಿಸಿದರೂ ಸಾಕು. ನಮ್ಮ ತಂಡದಲ್ಲಿರುವ ಅನುಭವವನ್ನು ಬಳಸಿಕೊಂಡು ಆಟಗಾರರು ಈ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಮೊದಲ ಓವರ್‌ನಲ್ಲೇ ಮೂರು ವಿಕೆಟ್ ಕಳೆದುಕೊಂಡರೆ ಪಂದ್ಯದಲ್ಲಿ ಹಿನ್ನಡೆ ಅನುಭವಿಸುವುದು ಸಹಜ” ಎಂದರು. ಅಲ್ಲದೆ, ವೇಗಿಗಳ ‘ಹಾಫ್-ಹಾಫ್ ಲೆಂತ್’ (ಮುಂದೆ ಬಂದು ಆಡಲೂ ಆಗದ, ಹಿಂದೆ ಸರಿದು ಆಡಲೂ ಆಗದ ಎಸೆತಗಳು) ಎಸೆತಗಳ ವಿರುದ್ಧ ಬ್ಯಾಟರ್‌ಗಳು ಗೊಂದಲಕ್ಕೊಳಗಾದರು ಎಂದು ಅವರು ವಿಶ್ಲೇಷಿಸಿದರು.

2027ರ ವಿಶ್ವಕಪ್ ದೃಷ್ಟಿಯಿಂದ ಹೆಚ್ಚಿದ ಆತಂಕ!

ಸತತ ಬ್ಯಾಟಿಂಗ್ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಗೌತಮ್ ಗಂಭೀರ್, “ನೀವು 90 ರನ್‌ಗಳ ಆಸುಪಾಸಿನಲ್ಲಿ ಆಲೌಟ್ ಆದಾಗ ಆತಂಕವಾಗುವುದು ಸಹಜ. ಕೇವಲ ರನ್‌ಗಳ ಕೊರತೆಯಷ್ಟೇ ಅಲ್ಲ, ನಾವು ಕೇವಲ 26-27 ಓವರ್‌ಗಳಲ್ಲಿ ಆಲೌಟ್ ಆದ ರೀತಿ ದೊಡ್ಡ ಚಿಂತೆಯ ವಿಷಯವಾಗಿದೆ. ವಿಷಯವನ್ನು ಮುಚ್ಚಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಿಂದಿನ ಪಂದ್ಯದಲ್ಲೂ (ಎರಡನೇ ಏಕದಿನ) ನಾವು 111 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದೆವು. ಮುಂದಿನ ವರ್ಷ ಸೌತ್ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲೂ ಇದೇ ರೀತಿಯ ಪಿಚ್‌ಗಳು ಸಿಗಲಿವೆ. ವಿಶ್ವಕಪ್‌ಗೆ ಹತ್ತಿರವಿರುವ ಇಂತಹ ಪರಿಸ್ಥಿತಿಗಳಲ್ಲಿ ಬ್ಯಾಟರ್‌ಗಳು ಈ ರೀತಿ ವಿಫಲವಾಗುತ್ತಿರುವುದು ಖಂಡಿತವಾಗಿಯೂ ಕಳವಳಕಾರಿ” ಎಂದು ಎಚ್ಚರಿಸಿದರು.

ಕ್ಯಾಚ್ ಕೈಚೆಲ್ಲಿದ್ದೇ ದುಬಾರಿಯಾಯಿತು:

ನ್ಯೂಝಿಲೆಂಡ್ 333 ರನ್‌ಗಳ ಬೃಹತ್ ಮೊತ್ತ ಪೇರಿಸಲು ಭಾರತದ ಕಳಪೆ ಫೀಲ್ಡಿಂಗ್ ಕೂಡ ಕಾರಣವಾಯಿತು ಎಂದು ಗಂಭೀರ್ ಅಭಿಪ್ರಾಯಪಟ್ಟರು. “ಅರ್ಷದೀಪ್ ಸಿಂಗ್ ಮತ್ತು ಆಖಿಬ್ ನಬಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ಆರಂಭಿಕ ಓವರ್‌ಗಳಲ್ಲೇ ವಿಲ್ ಯಂಗ್ (125 ರನ್) ಅವರಿಗೆ ಎರಡು ಜೀವದಾನಗಳನ್ನು ನೀಡಿದೆವು. ನಾವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಆರಂಭದಲ್ಲೇ ಅವರ ವಿಕೆಟ್ ಪಡೆದಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು” ಎಂದು ಅವರು ಹೇಳಿದರು.

ಬೌಲರ್‌ಗಳಿಗೆ ಬೆಂಬಲ ಮತ್ತು ತಂಡದ ಆಯ್ಕೆಗೆ ಸಮರ್ಥನೆ:

ಬ್ಯಾಟರ್‌ಗಳನ್ನು ಟೀಕಿಸಿದ ಗಂಭೀರ್, ಅನಾನುಭವಿ ವೇಗದ ಬೌಲಿಂಗ್ ಪಡೆಯನ್ನು ಸಮರ್ಥಿಸಿಕೊಂಡರು. “ನಮ್ಮ ಯುವ ವೇಗಿಗಳು ಆಡುತ್ತಲೇ ಕಲಿಯುತ್ತಿದ್ದಾರೆ. ಮ್ಯಾಟ್ ಹೆನ್ರಿ ಸ್ಟಂಪ್‌ಗಳಿಗೆ ನೇರವಾಗಿ ಬೌಲಿಂಗ್ ಮಾಡಿ ಬ್ಯಾಟ್‌ನ ಎರಡೂ ಅಂಚುಗಳನ್ನು ಪರೀಕ್ಷಿಸಿದ ರೀತಿಯನ್ನು ನಮ್ಮ ಬೌಲರ್‌ಗಳು ಕಲಿಯಬೇಕಿದೆ” ಎಂದರು. ಇದೇ ವೇಳೆ, ಸ್ಪಿನ್ನರ್‌ಗಳಿಗೆ ವಿದೇಶಿ ಪ್ರವಾಸಗಳಲ್ಲಿ ಅವಕಾಶ ಕಡಿಮೆ ಎಂಬ ಚರ್ಚೆಗೆ ಉತ್ತರಿಸಿದ ಅವರು, “ನ್ಯೂಝಿಲೆಂಡ್‌ನಂತಹ ಮೈದಾನಗಳಲ್ಲಿ ಮೂವರು ಅಥವಾ ನಾಲ್ವರು ವೇಗಿಗಳನ್ನು ಆಡಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಗುವ ಸೀಮಿತ ಅವಕಾಶಗಳಲ್ಲೇ ಆಟಗಾರರು ಲಯ ಕಂಡುಕೊಳ್ಳಬೇಕು” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಟೀಮ್ ಇಂಡಿಯಾವನ್ನು ಬೆಚ್ಚಿಬೀಳಿಸಿದ ವೇಗಿ ಔಟ್!

ಇನ್ನು ಈ ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಗೌತಮ್ ಗಂಭೀರ್, “ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುಲಭದ ಹಾದಿ ಇರುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಈ ಹಿಂದೆ ಶ್ರೀಲಂಕಾದಲ್ಲಿ ಸೋತಿದ್ದೆವು, ಈಗ ನ್ಯೂಝಿಲೆಂಡ್‌ನಲ್ಲಿ ಸೋತಿದ್ದೇವೆ. ನಾನು ಯಾವುದೇ ಸಬೂಬು ಹೇಳುವುದಿಲ್ಲ. ಸೋತಾಗ ಖಂಡಿತವಾಗಿಯೂ ನೋವಾಗುತ್ತದೆ, ಆ ನೋವು ಇರಬೇಕು. ಅದೇ ನಮ್ಮನ್ನು ಮುಂದಿನ ಪಂದ್ಯಗಳಿಗೆ ಇನ್ನಷ್ಟು ಬಲಿಷ್ಠಗೊಳಿಸುತ್ತದೆ” ಎಂದು ಹೇಳುವ ಮೂಲಕ ಭಾನುವಾರ ನಡೆಯಲಿರುವ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ತಂಡ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದರು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More