ಏಕದಿನ ವಿಶ್ವಕಪ್ 2023ರ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ತಂಡ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಯಾವ ತಂಡದಿಂದಲೂ ಸಾಧ್ಯವಾಗದ ದಾಖಲೆ ಎಂಬುದು ವಿಶೇಷ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಡೇವಿಡ್ ಮಲಾನ್ 14 ರನ್ ಗಳಿಸಿ ಔಟಾದರೆ, ಜಾನಿ ಬೈರ್ಸ್ಟೋವ್ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
ಆ ಬಳಿಕ ಬಂದ ಜೋ ರೂಟ್ 86 ಎಸೆತಗಳಲ್ಲಿ 77 ರನ್ ಬಾರಿಸಿದ್ದರು. ಇನ್ನು ಹ್ಯಾರಿ ಬ್ರೂಕ್ 25 ರನ್ ಬಾರಿಸಿದರೆ, ಮೊಯೀನ್ ಅಲಿ 11 ರನ್ಗಳಿಸಿ ಔಟಾದರು. ಇನ್ನು ಜೋಸ್ ಬಟ್ಲರ್ 43 ರನ್ಗಳ ಕೊಡುಗೆ ನೀಡಿದರೆ, ಲಿಯಾಮ್ ಲಿವಿಂಗ್ಸ್ಟೋನ್ 20 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಹಾಗೆಯೇ ಸ್ಯಾಮ್ ಕರನ್ 14 ರನ್ಗಳಿಸಿ ಹೊರನಡೆದರೆ, ಕ್ರಿಸ್ ವೋಕ್ಸ್ 11 ರನ್ ಗಳಿಸಿದರು.
ಅಂತಿಮವಾಗಿ ಆದಿಲ್ ರಶೀದ್ ಅಜೇಯ 15 ರನ್ ಬಾರಿಸಿದರೆ, ಮಾರ್ಕ್ ವುಡ್ ಅಜೇಯ 13 ರನ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತು.
ವಿಶೇಷ ಎಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ನ 11 ಬ್ಯಾಟರ್ಗಳು ಎರಡಂಕಿ ಮೊತ್ತಗಳಿಸಿದ್ದರು. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದರ ಎಲ್ಲಾ ಆಟಗಾರರು ಎರಡಂಕಿ ರನ್ಗಳಿಸಿದ ಹೊಸ ದಾಖಲೆ ನಿರ್ಮಾಣವಾಯಿತು.
ಅಂದರೆ ಇದುವರೆಗೆ ಯಾವುದೇ ತಂಡದ 11 ಆಟಗಾರರು ಏಕದಿನ ಪಂದ್ಯದಲ್ಲಿ ಡಬಲ್ ಡಿಜಿಟ್ ಸ್ಕೋರ್ಗಳಿಸಿರಲಿಲ್ಲ. ಇದೀಗ ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ತಂಡ ಈ ದಾಖಲೆ ನಿರ್ಮಿಸಿರುವುದು ವಿಶೇಷ.
ಈ ದಾಖಲೆಯ ಹೊರತಾಗಿಯೂ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧ ಸೋಲನುಭವಿಸಿದೆ. ಇಂಗ್ಲೆಂಡ್ ನೀಡಿದ 283 ರನ್ಗಳ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಪರ ಡೆವೊನ್ ಕಾನ್ವೆ (152) ಹಾಗೂ ರಚಿನ್ ರವೀಂದ್ರ (123) ಅಜೇಯ ಶತಕ ಸಿಡಿಸಿ ಮಿಂಚಿದರು. ಅಷ್ಟೇ ಅಲ್ಲದೆ 36.2 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸುವ ಮೂಲಕ ನ್ಯೂಝಿಲೆಂಡ್ ತಂಡಕ್ಕೆ 9 ವಿಕೆಟ್ಗಳ ಜಯ ತಂದುಕೊಟ್ಟರು.