ಅಹಮದಾಬಾದ್ನಲ್ಲಿ ನಡೆದ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಯುವ ದಾಂಡಿಗ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ 82 ಎಸೆತಗಳಲ್ಲಿ ಶತಕ ಪೂರೈಸಿದರು.
ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಶತಕ ಸಿಡಿಸಿದ ನ್ಯೂಝಿಲೆಂಡ್ನ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ 23 ವರ್ಷದ ರಚಿನ್ ರವೀಂದ್ರ ಪಾಲಾಯಿತು. ವಿಶೇಷ ಎಂದರೆ ರಚಿನ್ ಪೋಷಕರು ಮೂಲತಃ ಬೆಂಗಳೂರಿನವರು.
ನ್ಯೂಝಿಲೆಂಡ್ನಲ್ಲಿ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ದಂಪತಿ ಪುತ್ರ. 1990ರಲ್ಲಿ ನ್ಯೂಝಿಲೆಂಡ್ಗೆ ತೆರಳಿದ್ದ ರಚಿನ್ ಅವರ ತಂದೆ ಅಲ್ಲಿ ಹಟ್ ಹಾಕ್ಸ್ ಕ್ರಿಕೆಟ್ ಕ್ಲಬ್ ಅನ್ನು ಸ್ಥಾಪಿಸಿದ್ದರು.
ಅಲ್ಲಿಯೇ ಕ್ರಿಕೆಟ್ ಅನ್ನು ಕರಗತ ಮಾಡಿಕೊಂಡ ರಚಿನ್ ರವೀಂದ್ರ ಹಲವು ಬಾರಿ ಭಾರತದಲ್ಲಿ ಟೂರ್ನಿಗಳನ್ನು ಆಡಲು ಬಂದಿದ್ದಾರೆ. ಅಲ್ಲದೆ ಕೆಲ ಕ್ಲಬ್ಗಳ ವಿರುದ್ಧ ಆಡಿದ ಅನುಭವಗಳನ್ನು ಸಹ ಹೊಂದಿದ್ದಾರೆ. ಹೀಗಾಗಿಯೇ ಇಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಯುವ ಆಟಗಾರನಿಗೆ ಕಷ್ಟವಾಗಲಿಲ್ಲ ಎನ್ನಬಹುದು.
ಅಷ್ಟೇ ಅಲ್ಲದೆ ರಚಿನ್ ಅವರ ತಂದೆ ಟೀಮ್ ಇಂಡಿಯಾದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಹಾಗೂ ಕರ್ನಾಟಕದ ಕ್ರಿಕೆಟಿಗ ಜೆ ಅರುಣ್ ಕುಮಾರ್ ಅವರ ಒಡನಾಡಿ. ಇತ್ತ ತಂದೆಯ ಗೆಳೆಯರ ಕ್ರಿಕೆಟ್ ಸಲಹೆಗಳೊಂದಿಗೆ ರಚಿನ್ ಅತ್ಯುತ್ತಮ ಆಲ್ರೌಂಡರ್ ಆಗಿ ರೂಪುಗೊಂಡಿದ್ದಾರೆ.
ಅದರಂತೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 96 ಎಸೆತಗಳನ್ನು ಎದುರಿಸಿದ ರಚಿನ್ 5 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 123 ರನ್ ಬಾರಿಸಿ ಮಿಂಚಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷ ಎಂದರೆ ರಚಿನ್ ಹೆಸರಿನ ಹಿಂದಿರುವ ಸಿಕ್ರೇಟ್. ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಕೃಷ್ಣಮೂರ್ತಿಯವರು ತಮ್ಮ ಮಗನಿಗೆ ಈ ರಾಹುಲ್ ದ್ರಾವಿಡ್ ಹೆಸರಿನ "ರ" (RA) ಹಾಗೂ ಸಚಿನ್ ಹೆಸರಿನ "ಚಿನ್" (CHIN) ಸೇರಿಸಿ ರಚಿನ್ ಎಂದು ಹೆಸರಿಟಿದ್ದಾರೆ. ಇದೀಗ ಅದೇ ಹುಡುಗ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿರುವುದು ವಿಶೇಷ. (PC- AP/Getty Images)
Published On - 10:06 pm, Thu, 5 October 23