T20 World Cup 2024: ಟಿ20 ವಿಶ್ವಕಪ್ನ ಸೂಪರ್-8 ಪಂದ್ಯಗಳು ಇಂದಿನಿಂದ (ಜೂ.19) ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಯುಎಸ್ಎ ತಂಡಗಳು ಸೆಣಸಿದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಜೂನ್ 20 ರಂದು ಅಫ್ಘಾನಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ದ್ವಿತೀಯ ಸುತ್ತಿನ ಅಭಿಯಾನ ಆರಂಭಿಸಲಿದೆ.
ಈ ಪಂದ್ಯವು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವುದು ವಿಶೇಷ. ಅಂದರೆ ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ಅಮೆರಿಕದಲ್ಲಿ ಆಡಿತ್ತು. ಇದೀಗ ದ್ವಿತೀಯ ಸುತ್ತಿನ ಪಂದ್ಯಗಳಿಗಾಗಿ ಟೀಮ್ ಇಂಡಿಯಾ ಕೆರಿಬಿಯನ್ ದ್ವೀಪಕ್ಕೆ ಬಂದಿಳಿದಿದೆ. ಅದರಂತೆ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ತನ್ನ ಮೊದಲ ಪಂದ್ಯವಾಡಲಿದೆ. ಹಾಗಿದ್ರೆ ಈ ಮೈದಾನದ ವಿಶೇಷಗಳತೇನು ಎಂದು ತಿಳಿಯೋಣ…
ಈ ಮೈದಾನದಲ್ಲಿ ಈವರೆಗೆ ಒಟ್ಟು 27 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಾಗಿದೆ. ಇದರಲ್ಲಿ 17 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದರೆ, 8 ರಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಇನ್ನು ಎರಡು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದೆ.
ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನ ಪಿಚ್ನಲ್ಲಿ ಸ್ಪೋಟಕ ಆರಂಭ ಪಡೆಯುವುದು ಕಷ್ಟಕರ. ಏಕೆಂದರೆ ಈ ಪಿಚ್ ಹೊಸ ಬಾಲ್ಗಳಲ್ಲಿ ಉತ್ತಮ ಸೀಮ್ ಚಲನೆಯನ್ನು ನೀಡುತ್ತದೆ. ಇದರಿಂದಾಗಿ ಪವರ್ಪ್ಲೇನಲ್ಲಿ ಕ್ರೀಸ್ನಲ್ಲಿ ನೆಲೆ ನಿಲ್ಲುವುದು ಬ್ಯಾಟರ್ಗಳಿಗೆ ಸವಾಲಾಗಲಿದೆ.
ಹಾಗೆಯೇ ಇಲ್ಲಿನ ಪಿಚ್ನಲ್ಲಿ ಹೆಚ್ಚುವರಿ ಬೌನ್ಸರ್ ಅನ್ನು ಕೂಡ ನಿರೀಕ್ಷಿಸಬಹುದು. ಇಂತಹ ಅನಿರೀಕ್ಷಿತ ಬೌನ್ಸ್ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಉಂಟುಮಾಡಬಹುದು.
ಇನ್ನು ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಈ ಮೈದಾನದಲ್ಲಿ ಉತ್ತಮ ಸ್ಕೋರ್ ಕಲೆಹಾಕಬಹುದು. ಅಂದರೆ ಮೊದಲ 10 ಓವರ್ಗಳ ಬಳಿಕ ಈ ಪಿಚ್ನಲ್ಲಿ ಬ್ಯಾಟರ್ಗಳ ಅಬ್ಬರವನ್ನು ನಿರೀಕ್ಷಿಸಬಹುದು.
ಈ ಮೈದಾನದಲ್ಲಿ ಸರಾಸರಿ ಸ್ಕೋರ್ 150 ದಾಟಲಿದೆ. ಹೀಗಾಗಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ 2022ರಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 224 ರನ್ ಬಾರಿಸಿರುವುದು ಗರಿಷ್ಠ ಸ್ಕೋರ್. ಹಾಗೆಯೇ ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 204 ರನ್ ಬಾರಿಸಿತ್ತು ಎಂಬುದು ವಿಶೇಷ.
ಈ ಮೈದಾನದಲ್ಲಿ ಕೊನೆಯ ಪಂದ್ಯವಾಡಿದ್ದು ನಮೀಬಿಯಾ ಮತ್ತು ಸ್ಕಾಟ್ಲೆಂಡ್. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ 156 ರನ್ ಕಲೆಹಾಕಿತ್ತು. ಈ ಗುರಿಯನ್ನು 18.3 ಓವರ್ಗಳಲ್ಲಿ ಚೇಸ್ ಮಾಡಿ ಸ್ಕಾಟ್ಲೆಂಡ್ ತಂಡ ಜಯ ಸಾಧಿಸಿತ್ತು. ಅಂದರೆ ಈ ಮೈದಾನದಲ್ಲಿ ನಡೆಯುವ ಪಂದ್ಯಗಳಲ್ಲಿ ಕನಿಷ್ಠ 150 ರನ್ಗಳನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್
ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಗುರುವಾರ (ಜೂ.19) ನಡೆಯಲಿದ್ದು, ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಹಾಗೆಯೇ ಈ ಮ್ಯಾಚ್ ಅನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಮತ್ತು ಡಿಸ್ನಿ ಹಾಟ್ ಸ್ಟಾರ್ ಆ್ಯಪ್ನಲ್ಲಿ ವೀಕ್ಷಿಸಬಹುದು.