ಬಿಸಿಸಿಐನ (BCCI) ಹಿರಿಯ ಆಯ್ಕೆ ಸಮಿತಿ ಸೋಮವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದೆ. ಮೂರು ಪಂದ್ಯಗಳಿಗೆ ಎರಡು ತಂಡಗಳನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಮೊದಲ ಎರಡು ಪಂದ್ಯಗಳಿಗೆ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಪ್ರತ್ಯೇಕ ತಂಡವನ್ನು ಆಯ್ಕೆ ಮಾಡಿದ್ದು, ಅದರ ನಾಯಕತ್ವವನ್ನು ಕೆಎಲ್ ರಾಹುಲ್‌ಗೆ (KL Rahul) ಹಸ್ತಾಂತರಿಸಲಾಗಿದೆ. ಮೂರನೇ ಹಾಗೂ ಕೊನೆಯ ಪಂದ್ಯಕ್ಕೆ ಪ್ರತ್ಯೇಕ ತಂಡವನ್ನು ಆಯ್ಕೆ ಮಾಡಲಾಗಿದ್ದು, ಈ ತಂಡದ ಕಮಾಂಡ್ ರೋಹಿತ್ ಶರ್ಮಾ (Rohit Sharma) ಕೈಯಲ್ಲಿದೆ. ನಾಯಕ ರೋಹಿತ್ ಮತ್ತು ಅಗರ್ಕರ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಂಡವನ್ನು ಘೋಷಿಸಿದಾಗ, ಕೆಲವು ಆಶ್ಚರ್ಯಕರ ನಿರ್ಧಾರಗಳು ಬೆಳಕಿಗೆ ಬಂದವು. ಅವುಗಳಲ್ಲಿ ಪ್ರಮುಖವಾಗಿ ಈ ನಾಲ್ಕು ಅಂಶಗಳು ಹೈಲೇಟ್ ಆಗಿದ್ದವು.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಅವರ ಹೆಸರನ್ನು ಒಳಗೊಂಡ ಹಿರಿಯ ಆಟಗಾರರಿಗೆ ಮೊದಲ ಎರಡು ಪಂದ್ಯಗಳಿಂದ ಆಯ್ಕೆ ಸಮಿತಿಯು ವಿಶ್ರಾಂತಿ ನೀಡಿದೆ. ಮೊದಲ ಎರಡು ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್‌ಗೆ ಹಸ್ತಾಂತರಿಸಲಾಗಿದ್ದು, ರವೀಂದ್ರ ಜಡೇಜಾ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಮೂರನೇ ಪಂದ್ಯದಲ್ಲಿ ರೋಹಿತ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದು, ಪಾಂಡ್ಯ ಉಪನಾಯಕರಾಗಿ ಮುಂದುವರೆಯಲಿದ್ದಾರೆ.
IND vs AUS: ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಇನ್ನು ಸುಮಾರು ತಿಂಗಳುಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಸ್ಪಿನ್ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಆಸೀಸ್ ವಿರುದ್ಧದ ಸರಣಿಯೊಂದಿಗೆ ತಂಡಕ್ಕೆ ಮರಳಿದ್ದಾರೆ. ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದ ಅಕ್ಷರ್ ಪಟೇಲ್ ಬದಲಿಯಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿದೆ. ಅಶ್ವಿನ್ ಅನುಭವ ತಂಡಕ್ಕೆ ಉಪಯುಕ್ತವಾಗಲಿದ್ದು, ಈ ಸರಣಿಯಲ್ಲಿ ಅಶ್ವಿನ್ ಯಾವ ರೀತಿಯ ಫಾರ್ಮ್ ಹೊಂದಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ರೋಹಿತ್ ಹೇಳಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಅಕ್ಷರ್ ಪಟೇಲ್ ಅವರ ಫಿಟ್ನೆಸ್ ಬಗ್ಗೆ ಹೇಳಿಕೆ ನೀಡಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಅಕ್ಷರ್ ವಿಶ್ವಕಪ್ ತಂಡದಲ್ಲಿದ್ದು ಇನ್ನೂ ತಂಡದಿಂದ ಹೊರ ಹೋಗಿಲ್ಲ. ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಈ ಎಡಗೈ ಆಲ್ ರೌಂಡರ್ ಫಿಟ್ ಆಗುವ ಭರವಸೆ ಇದೆ ಎಂದಿದ್ದಾರೆ. ವಾಸ್ತವವಾಗಿ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಅಕ್ಷರ್ ಗಾಯಗೊಂಡಿದ್ದ ಕಾರಣ ಅವರು ಫೈನಲ್ ಆಡಲಿಲ್ಲ. ಹೀಗಾಗಿ ಅವರು ವಿಶ್ವಕಪ್ ಆಡುವ ಪರಿಸ್ಥಿತಿಯೂ ಸ್ಪಷ್ಟವಾಗಿಲ್ಲ. ಅವರು ಫಿಟ್ ಆಗದಿದ್ದರೆ ಅಶ್ವಿನ್ ಅಥವಾ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಬಹುದು ಎಂದು ಅಗರ್ಕರ್ ಹೇಳಿದ್ದಾರೆ.
ಸುದೀರ್ಘ ಸಮಯದ ನಂತರ ಏಷ್ಯಾಕಪ್‌ನಿಂದ ತಂಡಕ್ಕೆ ಮರಳಿದ್ದ ಶ್ರೇಯಸ್ ಅಯ್ಯರ್ ಮೂರನೇ ಪಂದ್ಯದಲ್ಲಿ ಗಾಯಗೊಂಡಿದ್ದರು. ಈ ಕಾರಣಕ್ಕಾಗಿ ಅವರು ಹೆಚ್ಚಿನ ಪಂದ್ಯಗಳನ್ನು ಆಡಲಿಲ್ಲ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಬಿಸಿಸಿಐ ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿತ್ತು. ಏಷ್ಯಾಕಪ್ ಫೈನಲ್‌ಗೂ ಮುನ್ನ ರೋಹಿತ್ ಅವರು ಅಯ್ಯರ್ ಹೆಚ್ಚಿನ ನಿಯತಾಂಕಗಳನ್ನು ಪೂರ್ಣಗೊಳಿಸಿದ್ದಾರೆ. ವಿಶ್ವಕಪ್ ವೇಳೆಗೆ ಅಯ್ಯರ್ ಫಿಟ್ ಆಗಲಿದ್ದಾರೆ ಎಂದು ಹೇಳಿದ್ದರು. ಆದರೀಗ ಅಯ್ಯರ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರೂ ಪಂದ್ಯಗಳಲ್ಲಿ ಸ್ಥಾನ ಪಡೆದಿರುವುದು ಅವರ ಪೂರ್ಣ ಫಿಟ್ ಆಗಿದ್ದಾರೆ ಎಂಬುದನ್ನು ಸಾಭೀತುಪಡಿಸಿದೆ.
ಮೊದಲ ಎರಡು ಪಂದ್ಯಗಳಿಗೆ ಟೀಂ ಇಂಡಿಯಾ: ಕೆಎಲ್ ರಾಹುಲ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್
ಮೂರನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ) , ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ , ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ