IND vs AUS Final: ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಆಸೀಸ್ ಎದುರು ಭಾರತದ್ದೇ ಪಾರುಪತ್ಯ

|

Updated on: Nov 18, 2023 | 11:03 AM

IND vs AUS Final: ಇದುವರೆಗೆ ನಡೆದಿರುವ ಐಸಿಸಿ ನಾಕೌಟ್ ಪಂದ್ಯಗಳಲ್ಲಿನ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮುಖಾಮುಖಿಯಲ್ಲಿ ಟೀಂ ಇಂಡಿಯಾವೇ ಮೇಲುಗೈ ಸಾಧಿಸಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

IND vs AUS Final: ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಆಸೀಸ್ ಎದುರು ಭಾರತದ್ದೇ ಪಾರುಪತ್ಯ
ಭಾರತ- ಆಸ್ಟ್ರೇಲಿಯಾ
Follow us on

ಅಕ್ಟೋಬರ್ 8 ರಂದು ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವಿನ ವಿಶ್ವಕಪ್ (ICC World Cup 2023) ಲೀಗ್ ಪಂದ್ಯ ನಡೆದಾಗ, ಈ ಎರಡು ತಂಡಗಳ ನಡುವೆ ಪಂದ್ಯಾವಳಿಯ ಫೈನಲ್ ಪಂದ್ಯವೂ ನಡೆಯಲಿದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಇದೀಗ ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium in Ahmedabad) 5 ಬಾರಿ ಈ ಟ್ರೋಫಿ ಗೆದ್ದಿರುವ ಆಸ್ಟ್ರೇಲಿಯಾ ತಂಡವನ್ನು ಭಾರತ ಫೈನಲ್ ಪಂದ್ಯದಲ್ಲಿ ಎದುರಿಸಲು ಸಜ್ಜಾಗಿದೆ. ಐಸಿಸಿ ನಾಕೌಟ್ (ICC Knockout) ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ದಾಖಲೆಯು ಇಲ್ಲಿಯವರೆಗೆ ಉತ್ತಮವಾಗಿದ್ದು, ಟೀಂ ಇಂಡಿಯಾ ಕಾಂಗರೂಗಳನ್ನು ಮಣಿಸಲು ಕೊಂಚ ಹೆಚ್ಚು ಶ್ರಮವನ್ನೇ ವ್ಯಯಿಸಬೇಕಾಗಿದೆ. ಆದರೆ, ಇದುವರೆಗೆ ನಡೆದಿರುವ ಐಸಿಸಿ ನಾಕೌಟ್ ಪಂದ್ಯಗಳಲ್ಲಿನ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮುಖಾಮುಖಿಯಲ್ಲಿ ಟೀಂ ಇಂಡಿಯಾವೇ ಮೇಲುಗೈ ಸಾಧಿಸಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ನಾಲ್ಕು ಬಾರಿ ಸೋಲಿಸಿರುವ ಭಾರತ

ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವುದು ಯಾವುದೇ ತಂಡಕ್ಕೆ ಸುಲಭವಲ್ಲ. ಆದಾಗ್ಯೂ, ವಿವಿಧ ಐಸಿಸಿ ಈವೆಂಟ್‌ಗಳ ನಾಕೌಟ್ ಪಂದ್ಯಗಳಲ್ಲಿ ಭಾರತವು ಕಾಂಗರೂ ತಂಡವನ್ನು ನಾಲ್ಕು ಬಾರಿ ಸೋಲಿಸಿರುವುದು ಸಮಾಧಾನಕರ ಸಂಗತಿಯಾಗಿದೆ. 1998 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 44 ರನ್‌ಗಳಿಂದ ಸೋಲಿಸಿತ್ತು. ಇದರ ನಂತರ, 2000 ಇಸವಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡನೇ ಬಾರಿಗೆ ಐಸಿಸಿ ನಾಕೌಟ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು 20 ರನ್‌ಗಳಿಂದ ಸೋಲಿಸಿತ್ತು.

ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ 9 ಆಟಗಾರರ ನಾಮನಿರ್ದೇಶನ; ಭಾರತದಿಂದ ನಾಲ್ವರ ಆಯ್ಕೆ!

ಮೂರನೇ ಬಾರಿಗೆ 2007ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಭಾರತ ತಂಡವು ಪಂದ್ಯವನ್ನು ಗೆದ್ದು ಫೈನಲ್‌ನಲ್ಲಿ ಸ್ಥಾನವನ್ನು ಪಡೆದುಕೊಂಡಿತು. ಅಹಮದಾಬಾದ್‌ನ ಇದೇ ಮೈದಾನದಲ್ಲಿ 2011ರ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಕೊನೆಯ ಬಾರಿಗೆ ಐಸಿಸಿ ನಾಕೌಟ್‌ನಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ಹೀಗಾಗಿ ನಾಕೌಟ್‌ ಪಂದ್ಯಗಳಲ್ಲಿ ಆಸೀಸ್ ಎದುರು ಭಾರತ ಮೇಲುಗೈ ಸಾಧಿಸಿರುವುದು ತಂಡಕ್ಕೆ ಆನೆಬಲ ತಂದುಕೊಟ್ಟಿದೆ. ಈ ಮೂಲಕ ನಾಳೆ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲೂ ಭಾರತ ಇದೇ ಪ್ರದರ್ಶನ ನೀಡಲಿದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಎಲ್ಲರ ಕಣ್ಣು ರೋಹಿತ್- ಕೊಹ್ಲಿ ಮೇಲೆ

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡದ ಇಬ್ಬರು ಪ್ರಮುಖ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇಲ್ಲಿಯವರೆಗೆ, ಪಂದ್ಯಾವಳಿಯಲ್ಲಿ ಇಬ್ಬರೂ ಆಟಗಾರರು ಬ್ಯಾಟ್‌ನೊಂದಿಗೆ ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದ್ದಾರೆ. ಇದರಲ್ಲಿ ಕೊಹ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದರೆ, ರೋಹಿತ್ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಈ ಇಬ್ಬರ ಬ್ಯಾಟ್ ಅಬ್ಬರಿಸಲಿದೆ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ