ಏಕದಿನ ವಿಶ್ವಕಪ್‌ನಲ್ಲಿ (World Cup 2023) ಭಾರತ ಗೆಲುವಿನ ಆರಂಭ ಪಡೆದುಕೊಂಡಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು (India vs Australia) 6 ವಿಕೆಟ್‌ಗಳಿಂದ ಸೋಲಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾವನ್ನು 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ರೋಹಿತ್ ಪಡೆ ಯಶಸ್ವಿಯಾಯಿತು. ಆ ಬಳಿಕ ಟೀಂ ಇಂಡಿಯಾ ಈ ಸವಾಲನ್ನು 41.2 ಓವರ್‌ಗಳಲ್ಲಿ ಪೂರ್ಣಗೊಳಿಸಿತು. ವಾಸ್ತವವಾಗಿ 200 ರನ್‌ಗಳ ಬೆನ್ನತ್ತಿದ್ದ ಟೀಂ ಇಂಡಿಯಾದ ಆರಂಭ ಅತ್ಯಂತ ಕಳಪೆಯಾಗಿತ್ತು. ಇಶಾನ್ ಕಿಶನ್, ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾದರು. ಆ ಬಳಿಕ ವಿರಾಟ್ ಕೊಹ್ಲಿ (Virat Kohli) ಹಾಗೂ ಕೆಎಲ್ ರಾಹುಲ್ (KL Rahul) ಇಬ್ಬರೂ ದಾಖಲೆಯ ಜೊತೆಯಾಟವನ್ನಾಡಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಆದರೆ ಕಿಂಗ್ ಕೊಹ್ಲಿ ನೀಡಿದ ಸುಲಭದ ಕ್ಯಾಚ್ ಕೈಚೆಲ್ಲಿದ ಆಸ್ಟ್ರೇಲಿಯಾ ತಂಡ ಸೋಲಿಗೆ ತಾನೇ ಆಹ್ವಾನ ನೀಡಿತು.
ವಾಸ್ತವವಾಗಿ ಆಸೀಸ್ ನೀಡಿದ ಅಲ್ಪ ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಕೇವಲ 2 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತಿದ್ದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಿದಾನಗತಿಯ ಬ್ಯಾಟಿಂಗ್ ಮಾಡಲಾರಂಭಿಸಿದರು. ಈ ವೇಳೆ ಆರಂಭದಲ್ಲೇ ಮೂರು ವಿಕೆಟ್ ಪಡೆದು ಪಂದ್ಯದಲ್ಲಿ ಹಿಡಿತ ಸಾಧಿಸಿದ ಆಸ್ಟ್ರೇಲಿಯಾಕ್ಕೆ ಮತ್ತೊಂದು ವಿಕೆಟ್ ಉರುಳಿಸುವ ಸುಲಭದ ಅವಕಾಶ ಒದಗಿ ಬಂದಿತ್ತು. ಆದರೆ ಆಸೀಸ್ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಷ್ ಕೈಬಿಟ್ಟ ಕ್ಯಾಚ್ ತಂಡದ ಸೋಲಿಗೆ ನಾಂದಿ ಹಾಡಿತು.
36 ವರ್ಷಗಳ ದಾಖಲೆ ಉಡೀಸ್; 1992 ರ ನಂತರ ಮೊದಲ ಬಾರಿಗೆ ಈ ರೀತಿಯ ಸೋಲು ಕಂಡ ಆಸ್ಟ್ರೇಲಿಯಾ..!
ಭಾರತದ ಇನ್ನಿಂಗ್ಸ್ 9ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಆ ವೇಳೆಗೆ ಟೀಂ ಇಂಡಿಯಾ 26 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಮಯದಲ್ಲಿ 12 ರನ್ ಸಿಡಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿ, ಜೋಶ್ ಹೇಜಲ್‌ವುಡ್ ಬೌಲಿಂಗ್ ಮಾಡಿದ ಶಾರ್ಟ್ ಬಾಲ್ ಅನ್ನು ಬೌಂಡರಿಗಟ್ಟಲು ಪ್ರಯತ್ನಿಸಿದರು. ಆದರೆ ಚೆಂಡು ಟಾಪ್-ಎಡ್ಜ್ ಆಗಿ ಗಾಳಿಯಲ್ಲಿ ಮೇಲಕ್ಕೆ ಹೋಯಿತು. ಇದು ಆಸ್ಟ್ರೇಲಿಯಾದ ಮಾನದಂಡಗಳ ಪ್ರಕಾರ ಸುಲಭದ ಕ್ಯಾಚ್ ಆಗಿತ್ತು. ಆದರೆ ವಿಶ್ವಕಪ್‌ನ ಒತ್ತಡವು ಆಸೀಸ್ ಫೀಲ್ಡರ್‌ಗಳಲ್ಲೂ ಕಂಡು ಬಂತ್ತು. ಕೊಹ್ಲಿ ನೀಡಿದ ಈ ಸುಲಭದ ಕ್ಯಾಚ್ ಅನ್ನು ಹಿಡಿಯಲು ಮಿಡ್-ವಿಕೆಟ್‌ನಿಂದ ಮಿಚೆಲ್ ಮಾರ್ಷ್ ಓಡಿ ಬಂದರೆ, ಇತ್ತ ವಿಕೆಟ್‌ಕೀಪರ್ ಕೂಡ ಕ್ಯಾಚ್ಗೆ ಪ್ರಯತ್ನಿಸಿದರು. ಈ ವೇಳೆ ಉಂಟಾದ ಗೊಂದಲದಿಂದ ಇಬ್ಬರಿಗೂ ಆ ಕ್ಯಾಚ್ ಅನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸುಲಭವಾಗಿ ತೆಗೆದುಕೊಳ್ಳುವ ಕ್ಯಾಚ್ ಅನ್ನು ಮಾರ್ಷ್ ಕೈಚೆಲ್ಲಿದರು.
ಮಾರ್ಷ್ ಕೈಬಿಟ್ಟ ಈ ಕ್ಯಾಚ್ ತಂಡವನ್ನು ಪಂದ್ಯದಿಂದಲೇ ಹೊರಹಾಕಿತು. ಜೀವದಾನದ ಲಾಭ ಪಡೆದ ವಿರಾಟ್ ಕೊಹ್ಲಿ 85 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರೆ, ಇತ್ತ ಕೆಎಲ್ ರಾಹುಲ್ ಅವರೊಂದಿಗೆ 165 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಜೊತೆಯಾಟ ಆಸೀಸ್ ಪಾಲಿಗೆ ಸೋಲಿನ ಶಾಯರಿ ಬರೆಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ